Advertisement

Karnataka Politics; ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ: ಸಿಪಿ ಯೋಗೇಶ್ವರ್

03:29 PM Oct 08, 2023 | Team Udayavani |

ರಾಮನಗರ: ಎಸ್.ಟಿ.ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದ ಮೇಲೆ ಮಂತ್ರಿಯಾಗಿ ಪ್ರಬಲ ಖಾತೆ ಪಡೆದರು, ಅಧಿಕಾರ ಅನುಭವಿಸಿದರು. ಇವತ್ತು ಅಧಿಕಾರವಿಲ್ಲವೆಂದು ಹೀಗೆ ಮಾತನಾಡುತ್ತಾರೆ. ಡಿಕೆ ಶಿ ಜೊತೆಗಿನ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡುತ್ತಿದ್ದರು, ಈಗಲೂ ಟೀಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿಪಿ ಯೋಗೆಶ್ವರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಶಃ ಅವರು ಎಂಎಲ್ಎ ಸ್ಥಾನಕ್ಕೆ ರಾಜಿನಾಮೆ ಕೊಟ್ಟರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ. ಒಂದು ವೇಳೆ ಹೊರಹೋಗುವ ತೀರ್ಮಾನ ಮಾಡಿದ್ದರೆ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ. ಪದೇ ಪದೇ ಪಕ್ಷಕ್ಕೆ ಮಾಡುವುದು ನಮಗೂ ನೋವು ತರುತ್ತದೆ. ಅಧಿಕಾರವಿದ್ದಾಗ ಅನುಭವಿಸಿ ಇಂದು ಪಕ್ಷದ ವಿರುದ್ಧ ಮಾತನಾಡುವುದು ಶೋಭೆಯಲ್ಲ ಎಂದರು.

ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಹಳ ವಿರೋಧವಿದ್ದ ಕ್ಷೇತ್ರ ಚನ್ನಪಟ್ಟಣ. ನಾವು, ಕುಮಾರಸ್ವಾಮಿಯನ್ನು ನೇರಾ ನೇರವಾಗಿ ಪರಸ್ಪರ ವಿರೋಧವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೆವು. ಹೊಂದಾಣಿಕೆ ಎನ್ನುವುದು ತಾಳ್ಮೆಯಿಂದ ಪರಸ್ಪರ ಒಂದಾಗಿ ಎಲ್ಲರ ಮನಸ್ಸನ್ನು ಒಗ್ಗೂಡಿಸುವುದು. ಹಾಗಾಗಿ ಇಂದು ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಮ್ಮ ರಾಷ್ಟೀಯ ನಾಯಕರು ತೆಗೆದುಕೊಂಡಿರುವ ನಿರ್ಧಾರವನ್ನು ತಿಳಿಸಲಾಗುವುದು. ಮೈತ್ರಿಯ ಅನಿವಾರ್ಯತೆ ಏನೆಂಬುದು ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಬೂತ್ ಮಟ್ಟದಲ್ಲಿ ಎರಡು ಪಕ್ಷದವರನ್ನು ಒಗ್ಗೂಡಿಸಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕರ್ತರು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ನೂರಕ್ಕೆ ನೂರು ಪರ್ಸೆಂಟ್ ಕಾರ್ಯಕರ್ತರು ಒಪ್ಪಿದ್ದಾರೆ. ನಮ್ಮ ಹಾಗೂ ಜೆಡಿಎಸ್ ನ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಳೆದ‌ ಎಂಎಲ್ ಎ ಚುನಾವಣೆಯಲ್ಲೂ ಕಾಂಗ್ರೆಸ್ ಗೆ ಲಾಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆ ತಪ್ಪು ಆಗಬಾರದು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಆಗಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾಂಗ್ರೆಸ್ ವಿರುದ್ದವಾಗಿ ಹೋರಾಟ ಮಾಡುತ್ತಿದ್ದಾರೆ ಎಂದರು.

ಮೈತ್ರಿ ನಂತರ ಎಚ್ ಡಿಕೆ- ಸಿಪಿವೈ ಭೇಟಿ ಮಾಡುವ ವಿಚಾರಕ್ಕೆ ಮಾತನಾಡಿ,  ಮೈತ್ರಿ ನಂತರ ವೈಯಕ್ತಿಕವಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲ. ಒಂದು ಸಲ ಪೋನ್ ನಲ್ಲಿ ಮಾತಾಡಿದ್ದೇನೆ. ಇಂದು ಚನ್ನಪಟ್ಟಣ ತಾಲ್ಲೂಕು ಬಿಜೆಪಿ ಮುಖಂಡರ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಲಾಗುವುದು. ಎರಡು ತಿಂಗಳ ನಂತರ ಎರಡು ಪಕ್ಷದ ನಾಯಕರು ಮುಖಂಡರು ಸೇರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸುತ್ತೇವೆ ಎಂದರು.

Advertisement

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸ್ಪರ್ಧೆ ಅಭ್ಯರ್ಥಿ ವಿಚಾರಕ್ಕೆ ಮಾತನಾಡಿದ ಅವರು, ಯಾವ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಬೇಕು ಎಂದು ಎರಡು ಪಕ್ಷದ ನಾಯಕರು ಚರ್ಚೆ ಮಾಡುತ್ತಾರೆ. ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಕೆಲಸ. ಸಂಸದ ಡಿಕೆ ಸುರೇಶ್ ದರ್ಪದಿಂದ ಜನ ಬೇಸತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಗೆ ತನ್ನದೇ ಆದ ಮತಗಳಿವೆ. ಎರಡು ಪಕ್ಷದ ಅಭ್ಯರ್ಥಿಗಳು ಒಟ್ಟಾಗಿ ಕೆಲಸ ಮಾಡಿದರೆ ಚುನಾವಣೆ ಒಂದು ಸೈಡ್ ಆಗುತ್ತೆ. ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಗೆಲುವು ಖಚಿತ ಎಂದು ಸಿಪಿ ಯೋಗೆಶ್ವರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next