ಯಲ್ಲಾಪುರ: ಯಾರೂ ಅಭಿವೃದ್ಧಿಗೆ ವಿರೋಧ ಮಾಡಬೇಡಿ, ತಮಗೆ ಏನಾಗಬೇಕು ಹೇಳಿ ಅದನ್ನು ಮಾಡಲಿಕ್ಕೆ ಸರಕಾರ ಬದ್ಧವಿದೆ. ಯಾವುದೇ ಯೊಜನೆಯಲ್ಲೂ ಮೂಲ ಸೌಕರ್ಯ ಕಲ್ಪಿಸಿಯೇ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಹೇಳಿದರು.
ಅವರು ತಾಲೂಕಿನ ಗುಳ್ಳಾಪುರದಲ್ಲಿ ಸೋಮವಾರ 7.16 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ 33/11 ಕೆವಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರದ ಹೆಸರಿನಲ್ಲಿ ಬುದ್ಧಿ ಜೀವಿಗಳು ಅಭಿವೃದ್ಧಿ ಯೋಜನೆಗಳಿಗೆ ಪರಿಸರದ ಹೆಸರು ಹೇಳಿ ಅಡ್ಡಗಾಲು ಹಾಕಬಾರದು. ಜಿಲ್ಲೆಯನ್ನು ಪಕ್ಷಾತೀತವಾಗಿ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮ ಗುರಿಯಾಗಬೇಕು. ಈಗ ಜಿಲ್ಲೆಯಲ್ಲಿ ನಮ್ಮ ಶಕ್ತಿಯ ಸಂಗಮವಾಗಿದೆ. ಅಭಿವೃದ್ಧಿಯ ಆಯಾಮವೂ ಶುರುವಾಗಿದೆ ಎಂದು ಹೇಳಿದರು.
ಗುಳ್ಳಾಪುರದಲ್ಲಿ 33 ಕೆ.ವಿ ಗ್ರಿಡ್ ಆಗಬೇಕೆಂಬ ಕನಸು ನನಸಾಗಿದೆ. ಇದು ಜನರಿಗೆ ವಿದ್ಯುತ್ ಸಮಸ್ಯೆ ನಿವಾರಿಸಲು ಸಹಕಾರಿಯಾಗಲಿದೆ ಎಂದರು. ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಯ ಅಧ್ಯಾಯ ತೆರೆದುಕೊಳ್ಳುತ್ತಿದೆ. ಅಭಿವೃದ್ಧಿಯ ಕುರಿತು ವಿಸ್ತೃತ ಕಲ್ಪನೆ ಇರದವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಹಿಂದೆ ಕೇಂದ್ರದಿಂದ ಭರವಸೆ ಮಾತ್ರ ಸಿಗುತ್ತಿತ್ತು. ಅನುದಾನ ಸಿಗುತ್ತಿರಲಿಲ್ಲ. ಈಗ ಇಚ್ಛಾಶಕ್ತಿ ಹೊಂದಿದ ಸರ್ಕಾರ ಇಚ್ಛಾಶಕ್ತಿ ಹೊಂದಿದ ಆಡಳಿತಗಾರರು ಇದ್ದು, ಅನುದಾನ ಹರಿದು ಬರುತ್ತಿದೆ. ಅಭಿವೃದ್ಧಿಯ ವೇಗ ಹೆಚ್ಚಿದೆ. ಬದುಕಿಗೆ ಹೊಸ ಕಲ್ಪನೆ ಕೊಟ್ಟಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಸ್ಥಳೀಯವಾಗಿ ಉಪಕೇಂದ್ರದಿಂದ ಗ್ರಾಮೀಣ ಭಾಗಗಳ ವಿದ್ಯುತ್ ಸಮಸ್ಯೆಗಳು ಕಡಿಮೆಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಉಪಾಧ್ಯಕ್ಷೆಸುಜಾತಾ ಸಿದ್ದಿ, ಜಿ.ಪಂ ಸದಸ್ಯರಾದ ಶ್ರುತಿ ಹೆಗಡೆ, ಜಗದೀಶ ನಾಯ್ಕ ಮೊಗಟಾ, ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಸಾಮಾಜಿಕ ಮುಂದಾಳು ಶ್ರೀಕಾಂತ ಶೆಟ್ಟಿ, ಕಾರವಾರ ಎಇಇ ರೋಶನಿ, ಅಂಕೋಲಾ ತಾಪಂ ಇಒ ಪರಶುರಾಮ ಸಾವಂತ, ಹೆಸ್ಕಾಂ ಅಧಿಕಾರಿಗಳಾದ ದೀಪಕ ಕಾಮತ್ ಶಿರಸಿ, ತಿಪ್ಪಣ್ಣ, ಟಿ.ಟಿ. ಶೆಟ್ಟಿ, ಡಿ.ಬಿ. ಕಾಂಬ್ಳೆ, ಮಂಜುನಾಥ ಉಪಸ್ಥಿತರಿದ್ದರು. ಎಇಇ ವಿನಾಯಕ ಪೇಟ್ಕರ್ ಸ್ವಾಗತಿಸಿ,ನಿರ್ವಹಿಸಿದರು. ಸಹಾಯಕ ಇಂಜನಿಯರ್ ಮೇಘರಾಜ ವಂದಿಸಿದರು.