Advertisement

ಬಯಲು ಬಹಿರ್ದೆಸೆ ಮುಕ್ತ “ಅಮದಲಪಾಡ’

11:44 AM Sep 09, 2017 | |

ಬೀದರ: ಜಿಲ್ಲಾ ಪಂಚಾಯತ, ಸ್ವತ್ಛ ಭಾರತ ಮಿಷನ್‌, ಜಿಲ್ಲಾ ಸರ್ಕಾರಿ ನೌಕರರ ಸಂಘ ಮತ್ತು ಮಾಳೆಗಾಂವ್‌ ಗ್ರಾಪಂ ಆಶ್ರಯದಲ್ಲಿ ಶುಕ್ರವಾರ “ಅಮದಲಪಾಡ’ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಘೋಷಣಾ ಕಾರ್ಯಕ್ರಮ ವಿಶಿಷ್ಟ, ಅರ್ಥಪೂರ್ಣವಾಗಿ ನೆರವೇರಿತು.

Advertisement

ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ| ಸೆಲ್ವಮಣಿ ಆರ್‌. ಅವರು ಬೆಳಗ್ಗೆ ಮಾಳೆಗಾಂವ್‌ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಮಾಳೆಗಾಂವ್‌ ದಿಂದ ಸ್ವತ್ಛ ಗ್ರಾಮ ಅಮದಲಪಾಡವರೆಗೆ ಸಂಚರಿಸಿದರು. ದಾರಿಯುದ್ದಕ್ಕೂ “ಸ್ವತ್ಛ ಗ್ರಾಮ ಅಮದಲಪಾಡ’ “ಮನೆಗೊಂದು ಶೌಚಾಲಯ ಬೇಕೆ ಬೇಕು’ ಎನ್ನುವ ಘೋಷಣೆಗಳು ಮೊಳಗಿದವು. 

ಇದೇ ವೇಳೆ ಮಾಳೆಗಾಂವ್‌ ಅಮದಲಪಾಡ ಮಧ್ಯದ ಕಮಲಾಪುರ ಗ್ರಾಮದ ಸಾರ್ವಜನಿಕರಿಗೆ ಶೌಚಾಲಯ
ಕಟ್ಟಿಸಿಕೊಳ್ಳುವುದರ ಬಗ್ಗೆ ಅರಿವು ಮೂಡಿಸಲಾಯಿತು. ಶೌಚಾಲಯ ಕಟ್ಟಿಸಿದ್ದೀರಾ ಎಂದು ಜಿಲ್ಲಾಧಿಕಾರಿಗಳು
ಹಾಗೂ ಸಿಇಒ ಗ್ರಾಮದ ಯುವಕರು, ಮಹಿಳೆಯರು ಮತ್ತು ನಾಗರಿಕರಿಗೆ ಪ್ರಶ್ನಿಸಿ, ಶೌಚಾಲಯ ನಿರ್ಮಿಸಿಕೊಳ್ಳಲು ತಿಳಿ ಹೇಳಿದ್ದು ಗಮನ ಸೆಳೆಯಿತು. ಜಾಗವಿಲ್ಲ, ಅನುದಾನ ಸಿಕ್ಕಿಲ್ಲ ಎನ್ನಬೇಡಿ. ನಿಮ್ಮ ಮನೆಗೆ ಗ್ರಾಮ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬರುತ್ತಾರೆ. ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಸೇರಿದಂತೆ ಅರ್ಜಿ ಕೊಡಿ. ಶೌಚಾಲಯ ಕಟ್ಟಿಸಿಕೊಳ್ಳಲು ಕೂಡಲೇ ಅವಕಾಶ ನೀಡಲಾಗುವುದು ಎಂದು ಸಿಇಒ
ಸೆಲ್ವಮಣಿ ತಿಳಿಸಿದರು. 

ಜಾಗದ ಸಮಸ್ಯೆ ಇದೆ ಎಂದು ತಿಳಿಸಿದರೆ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಗ್ರಾಮದ ಪ್ರತಿ ಮನೆಯು ಶೌಚಾಲಯ ಹೊಂದಬೇಕು ಎನ್ನುವ ಪ್ರಯತ್ನಕ್ಕೆ ಕೈ ಜೋಡಿಸಬೇಕು ಎಂದು ಗ್ರಾಮಸ್ಥರಲ್ಲಿ ಕೋರಿದರು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಮುಖ್ಯ ಲೆಕ್ಕಾಧಿಕಾರಿ ರಾಜೇಂದ್ರ ಜೊನ್ನಿಕೇರಿ, ಸ್ವತ್ಛ ಭಾರತ ಅಭಿಯಾನದ ನೋಡೆಲ್‌ ಅಧಿಕಾರಿ ಗೌತಮ ಅರಳಿ, ನೌಕರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪಶುಪಾಲನಾ ಇಲಾಖೆಯ ಜಿಲ್ಲಾ ಧಿಕಾರಿ
ಡಾ| ಡಿ.ಎಸ್‌.ಹವಾಲ್ದಾರ, ಬಿಸಿಎಂ ಇಲಾಖೆಯ ಅಧಿಕಾರಿ ವೆಂಕಟೇಶ ಹೊಗಿಬಂಡಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ ದಾಂಡೇಕರ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಟಿ.ಆರ್‌. ದೊಡ್ಡೆ, ಪಿಡಿಒ ಗೀತಾ
ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯಗಳ ಅಧಿಕಾರಿಗಳು, ಗ್ರಾಮಸ್ಥರು, ಸ್ವತ್ಛ ಗ್ರಾಮ ಅಮದಲಪಾಡವರೆಗೆ ಸಂಚರಿಸಿ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next