ಹೊಸದಿಲ್ಲಿ : ‘ಭಾರತೀಯ ಪಾಸ್ ಪೋರ್ಟ್ ಹೊಂದಿರುವವರು 2019ರ ಲೋಕಸಭಾ ಚುನಾವಣೆಯಲ್ಲಿ ಆನ್‌ಲೈನ್ ಮೂಲಕ ತಮ್ಮ ಮತವನ್ನು ಚಲಾಯಿಸಬಹುದಾಗಿದೆ’ ಎಂಬ ವೈರಲ್ ಪೋಸ್ಟ್ ಅನ್ನು ಚುನಾವಣಾ ಆಯೋಗ ಖಂಡತುಂಡವಾಗಿ ಸುಳ್ಳೆಂದು ಹೇಳಿದೆ.
‘ಜನರು ವಾಟ್ಸಾಪ್ ಸಹಿತ ಸಾಮಾಜಿಕ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ರೀತಿಯ ಸುಳ್ಳುಗಳನ್ನು ನಂಬಬಾರದು’ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಆನ್‌ಲೈನ್ ನಲ್ಲಿ ತಮ್ಮ ಓಟ್ ಹಾಕಬಹುದು ಎಂಬ ಸುಳ್ಳು ಸಂದೇಶದ ಜತೆಗೆ ಚುನಾವಣಾ ಆಯೋಗದ ವೆಬ್ ಸೈಟಿನ ಲಿಂಕ್ ಕೂಡ ಇದ್ದು “ಎನ್‌ಆರ್‌ಐ ಓಟರ್‌ಗಳು ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು’ ಎಂದೂ ಅದು ಸುಳ್ಳು ಸುಳ್ಳೇ ಹೇಳುತ್ತದೆ.
ಚುನಾವಣಾ ಆಯೋಗ ಈ ಸಂಬಂಧ ಹೊರಡಿಸಿರುವ ಹೇಳಿಕೆ ಈ ರೀತಿ ಇದೆ :
Related Articles
ಭಾರತೀಯ ಪಾಸ್ ಪೋರ್ಟ್ ಹೊಂದಿರುವವರು 2019ರ ಲೋಕಸಭಾ ಚುನಾವಣೆಗೆ ಆನ್ ಲೈನ್ ಮೂಲಕ ಓಟ್ ಮಾಡಬಹುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿಯ ಬಗ್ಗೆ ಎಚ್ಚರವಿರಲಿ; ಯಾರೂ ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬಾರದು.
ಯಾವುದೇ ವರ್ಗದ ಓಟರ್ ಗಳಿಗೆ ಆನ್ ಲೈನ್ ಮತದಾನದ ಅವಕಾಶ ಇರುವುದಿಲ್ಲ; ಸಾಗರೋತ್ತರ ಭಾರತೀಯರು ಫಾರಂ 6ಎ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿಗಾಗಿ ತಮ್ಮ ಅರ್ಜಿಯನ್ನು nvsp.in ಮೂಲಕ ಅಥವಾ ವೋಟರ್ ಹೆಲ್ಪ್ ಲೈನ್ ಮೊಬೈಲ್ ಆ್ಯಪ್ ಬಳಸುವ ಮೂಲಕ ಸಲ್ಲಿಸಬಹುದಾಗಿದೆ.
ಚುನಾವಣೆಯ ದಿನದಂದು ತಮ್ಮ ಮತ ಚಲಾಯಿಸಲು ಬಯಸುವ ಸಾಗರೋತ್ತರ ಭಾರತೀಯರು, ತಮ್ಮ ಗುರುತು ಪತ್ರವಾಗಿ ಪಾಸ್ ಪೋರ್ಟ್ ಸಹಿತವಾಗಿ, ತಮಗೆ ಗೊತ್ತು ಪಡಿಸಲಾಗಿರುವ ಮತಗಟ್ಟೆಗೆ ಬಂದು ಮತ ಚಲಾಯಿಸಬಹುದಾಗಿರುತ್ತದೆ.