ಯಾಕೆ ನೀನು ಅಷ್ಟು ಹತ್ತಿರವಾದೆ? ನೀನು ಈ ಜೀವದ ಭಾಗವಾದಾಗಿನಿಂದ ನಿದ್ರೆ ಎಂಬುದೇ ಕನಸಾಗಿಬಿಟ್ಟಿದೆ. ನಿದ್ದೆ ಮಾಡಬೇಕೆಂದರೂ, ಬಿಡದೇ ಕಾಡುತ್ತಿವೆ ನಿನ್ನ ನೆನಪುಗಳು.
ಈ ಮುಸ್ಸಂಜೆ ಮಬ್ಬಲ್ಲಿ ಮಳೆ ಬರುವ ಸೂಚನೆಗೆ, ತಂಗಾಳಿಯ ಜೊತೆ ಬಿಸಿ ಗಾಳಿಯು ನಿನ್ನ ಮೃದು ಸ್ಪರ್ಶದಂತೆ ಮೈ ತಾಗುತ್ತಿದೆ. ಅಡಗಿ ಕೂತಿದ್ದ ಎದೆಯ ಬಿಸಿಉಸಿರು, ನೀನು ಇಲ್ಲಿಲ್ಲವೆಂದು ನೆನಪಾಗಿ ನಿಟ್ಟುಸಿರಾಗಿ ಹೊರ ಬಂತು. ಇಂಥ ಎಷ್ಟೋ ಮೋಹಕ ಸಂಜೆಗಳನ್ನು ನಿನ್ನೊಂದಿಗೆ ಕಳೆಯಲು ಬಯಸುತ್ತಿರುವೆ. ಹಗಲಿಗೂ ಇರುಳಿಗೂ ನಡುವೆ ಬರುವ ಈ ಸಂಜೆಯಲ್ಲೇನೋ ನಶೆಯಿದೆ. ಮುಂಜಾವಿನ ಚಳಿಗಿಂತ, ರಾತ್ರಿಯ ವಿರಹದ ಬೇಗೆಗಿಂತ, ಸಂಜೆಯ ತಂಗಾಳಿಯಲ್ಲೇ ನಿನ್ನ ನೆನಪು ಹೆಚ್ಚಾಗಿ ಮನಸ್ಸು ಅರಳುತ್ತದೆ, ನರಳುತ್ತದೆ.
ಪ್ರತಿರಾತ್ರಿ ನಿನ್ನ ಪಿಸುದನಿ ಕೇಳಿದರೂ ಅದರಿಂದ ಸಮಾಧಾನ ಆಗುವುದಿಲ್ಲ. ಕೆಲವೊಮ್ಮೆ ಅನಿಸುತ್ತದೆ, ಈ ಮೊಬೈಲ್ ಇರಲೇಬಾರದಿತ್ತು ಅಂತ. ಮೊದಲಿನಂತೆ ಪತ್ರಗಳಲ್ಲೇ ಸಂದೇಶ ವಿನಿಮಯವಾಗಬೇಕಿತ್ತು. ನಿನ್ನ ಪತ್ರಕ್ಕಾಗಿ ದಿನಪೂರ್ತಿ ಕಾಯುವಾಗ ಇರುವಂಥ ಸಹನೆ, ಕುತೂಹಲ ಮೊಬೈಲ್ ಕರೆಯಲ್ಲಿ, ಪ್ರತಿದಿನದ ಪಿಸುಮಾತಿನಲ್ಲಿ ಇಲ್ಲವೇ ಇಲ್ಲ. ಪ್ರತಿದಿನ, ಪ್ರತಿಕ್ಷಣ ನೀ ಬರೆದ ಪತ್ರ ನನ್ನೊಂದಿಗೆ ಒಮ್ಮೆ ನೆನಪಾಗಿ, ಮತ್ತೂಮ್ಮೆ ಕನಸಾಗಿ ಜೊತೆಗಿರಬೇಕೆಂಬ ಆಸೆ ನನ್ನದು.
ನಿನ್ನ ಪಿಸುದನಿ ಕೇಳಲು, ಮೊಬೈಲ್ ಅನ್ನೇ ನೋಡುತ್ತಾ, ನಿನ್ನ ಕರೆಗಾಗಿ ಕಾದು ಕಾದು ಸುಸ್ತಾಗುತ್ತೇನೆ. ನಿನ್ನ ಕಾಲ್ ಬರದೇ ಹೋದಾಗ ಮೊಬೈಲ್‌ನ ಮೇಲೇ ಸಿಟ್ಟು ಬರುತ್ತದೆ. ಅದನ್ನು ಎಸೆದು ಬಿಡುವ ಮನಸ್ಸೂ ಬರುತ್ತದೆ. ಆದರೆ, ಈಗ ಅಲ್ಲದಿದ್ರೂ ಇನ್ನೂ ಅರ್ಧ ಗಂಟೇಲಿ ಫೋನ್ ಕಾಲ್ ಬಂದೇ ಬರುತ್ತೆ ಎಂಬ ಆಸೆಯಿಂದ ಸುಮ್ಮನಾಗುತ್ತೇನೆ. ನಿರೀಕ್ಷೆಯಲ್ಲಿ ಮುಳುಗಿ ಕಾಯುವುದೇ ಕೆಲಸ. ಬಹಳ ಹೊತ್ತಿನಿಂದ ಕಾಯಿಸಿದ ನಿನ್ನ ಕರೆ ಕೊನೆಗೂ ಬಂದಾಗ ಎಷ್ಟೋ ಕುತೂಹಲಗಳನ್ನು ಸೃಷ್ಟಿಸಿಬಿಡುತ್ತೆ.
ಯಾಕೆ ನೀನು ಅಷ್ಟು ಹತ್ತಿರವಾದೆ? ನೀನು ಈ ಜೀವದ ಭಾಗವಾದಾಗಿನಿಂದ ನಿದ್ರೆ ಎಂಬುದೇ ಕನಸಾಗಿಬಿಟ್ಟಿದೆ. ನಿದ್ದೆ ಮಾಡಬೇಕೆಂದರೂ, ಬಿಡದೇ ಕಾಡುತ್ತಿವೆ ನಿನ್ನ ನೆನಪುಗಳು. ಮಧ್ಯರಾತ್ರಿಯ ನಿಶ್ಶಬ್ದ ಸಂಗೀತದ ಸವಿಗಾನದಲ್ಲೂ ಕಾಣುವ ಆ ನಿನ್ನ ಮುಗುಳುನಗೆ, ಮಾದಕ ನೋಟ ಬುಲೆಟ್‌ನಷ್ಟೇ ವೇಗದಲ್ಲಿ ಎದೆಗೆ ಅಪ್ಪಳಿಸಿದಂತಾಗುತ್ತದೆ.
ಪ್ರತಿದಿನವೂ ನನ್ನದು ಒಂದೇ ರೂಟೀನ್. ದಿನಾ ಏಳುವುದು, ನಿನ್ನ ಕರೆಗಾಗಿ ಕಾಯುವುದು. ಇಬ್ಬನಿ ಮುಸುಕಿದ ಮುಂಜಾನೆ, ಪೇಡಾನಗರಿಯ ಜಿಟಿಜಟಿ ಮಳೆಯ ಮಧ್ಯಾಹ್ನ, ನಶೆ ಏರಿಸುವ ಸಂಜೆಯನ್ನು ಕಳೆಯುವುದು ನಿನ್ನ ಕರೆಗಾಗಿ ಕಾಯುತ್ತಲೇ. ಇಡೀ ದಿನವೂ ನಿನ್ನ ಕರೆಗಾಗಿ ಕಾದು ಕಡೆಗೊಮ್ಮೆ ನಿನ್ನ ಪಿಸುಧ್ವನಿ ಕೇಳಿದಾಗ, ಬಿಸಿ ಮೌನವೇ ಆವರಿಸಿದ ಮನಕ್ಕೆ ತಂಗಾಳಿ ತಾಗಿದಂತಾಗುತ್ತದೆ. ಒಮ್ಮೆ ನಿನ್ನ ಸವಿಮಾತಿನ ಲಹರಿ ಕೇಳಿದರೆ, ಇಡೀ ಪ್ರಪಂಚವೇ ನನ್ನದು ಎನಿಸುವಷ್ಟು ಸಂತಸ ಈ ಎದೆಗೆ.
ನಮ್ಮ ಈ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ. ಜಗತ್ತಿನ ಅಮರ ಪ್ರೇಮಿಗಳಂತೆ ನಮ್ಮ ಪ್ರೀತಿಯೂ ಚಿರಕಾಲವಾಗಿ ಸಾಗಲಿ ಎಂದು ಆಶಿಸುತ್ತಾ…
ಇಂತಿ ನಿನ್ನವ,
ಸಚಿನ್ ನಾಗಠಾಣ