Advertisement

ಗೋಪಾಲ ರಾಯರ ಮದ್ದಳೆಗೆ ಪದ್ಯ ಹೇಳುವುದೇ ಸವಾಲು!

04:53 PM Dec 02, 2018 | |

99 ರ ಹರೆಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗುವ ಮೂಲಕ ಯಕ್ಷರಂಗದ ಹೊಸ ಲೋಕದಲ್ಲಿ ಹಳೆಯದೊಂದು ಶಕ್ತಿ ಇದೆ ಎನ್ನುವುದನ್ನು ತೋರಿಸಿಕೊಟ್ಟ ಹಿರಿಯಡಕ ಗೋಪಾಲ ರಾಯರು ಬಹುಮುಖ ಪ್ರತಿಭೆ. ಯಕ್ಷಗಾನ ರಂಗದ ಎಲ್ಲಾ  ಅಂಗಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಅವರು ಸದ್ಯ ಬಡಗುತಿಟ್ಟಿನ ಸಾಟಿಯಿಲ್ಲದ ಹಿರಿಯ ಕಲಾವಿದ. 

Advertisement

ವಾರ್ಧಕ್ಯದ ಕಾರಣ ಬೆಂಗಳೂರಿಗೆ ತೆರಳಲು ಸಾಧ್ಯವಾಗದೆ ಮನೆಯಲ್ಲಿಯೇ ಪ್ರಶಸ್ತಿ ಸ್ವೀಕರಿಸಿದ ಗೋಪಾಲರಾಯರು  ಪ್ರಶಸ್ತಿ ಪ್ರದಾನಿಸಿದ ಸಚಿವೆ ಜಯಮಾಲಾ ಮತ್ತು  ಗಣ್ಯರ ಸಮ್ಮುಖದಲ್ಲಿ ತಮ್ಮ ಏರು ಮದ್ದಳೆಯ ಕೈಚಳಕವನ್ನು ತೋರಿಯೇ  ಬಿಟ್ಟರು.

 ಅವರು ಲಯ ಬದ್ಧವಾಗಿ ಮದ್ದಳೆ ಬಾರಿಸಿದ್ದು ಎಂಥಹವರಿಗೂ ರೋಮಾಂಚನ ಮೂಡಿಸುವಂತಿತ್ತು. ಕೈ ನಡುಗುವ ವಯಸ್ಸಿನಲ್ಲಿ ಅದೂ ಏರು ಮದ್ದಲೆ ಅಸಾಧ್ಯದ ಮಾತು. ಆದರೆ ಉತ್ಸಾಹದ ಚಿಲುಮೆಯಾಗಿರುವ ಗೋಪಾಲ ರಾಯರಿಗೆ ಅದೇನು ತ್ರಾಸದಾಯಕವಲ್ಲ.ಅವರ ಕಲಾ ಪ್ರೇಮ, ಕಾಳಜಿ ಮತ್ತು ನಿತ್ಯವೂ ಕಲಿಯುವ ಆಸಕ್ತಿ ಇದಕ್ಕೆ ಕಾರಣವಾದದ್ದು. 

Advertisement

ನಿರಂತರವಾಗಿ ಮದ್ದಳೆಯೊಂದಿಗೆ ಮಾತನಾಡುವ ರಾಯರು ಭಾಗವತರಿಗೆ ಚಳಿಯಲ್ಲೂ ಬೆವರಿಳಿಸುವ ಸಾಮರ್ಥ್ಯ ಹೊಂದಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಯರು ಸ್ವಾತಂತ್ರ್ಯಪೂರ್ವದಲ್ಲಿಯೇ  ಲಕ್ಷಾಂತರ ಜನರಿಗೆ ತನ್ನ ಮದ್ದಳೆಯ ನಾದದ ಮೂಲಕ ಕರ್ಣಾನಂದಕರವಾದ ಸಂತಸವನ್ನು ಉಣಬಡಿಸಿದ್ದರು. 

ಬೆಳಗಿನ ಜಾವದ ಏರು ಶ್ರುತಿಯ ಪದ್ಯಗಳಿಗೆ ಅವರು ಬಾರಿಸುತ್ತಿದ್ದ ಗೇಣುದ್ದದ ಮದ್ದಳೆ ಎಲ್ಲರನ್ನೂ ನಿದ್ದೆಯಿಂದ ಬಡಿದೆಬ್ಬಿಸುವ ಸಾಮರ್ಥ್ಯ ಹೊಂದಿತ್ತು ಎನ್ನುವುದು ಇಂದಿರುವ ಹಿರಿಯ ಪ್ರೇಕ್ಷಕರ ಮಾತು. 

ಆ ಕಾಲದಲ್ಲಿ ಗೋಪಾಲ ರಾಯರ ಮದ್ದಳೆಗೆ ಪಕ್ಕದಲ್ಲಿ ಕುಳಿತು  ಪದ್ಯ ಹೇಳುವ ಧೈರ್ಯ ಕೆಲವೇ ಕೆಲವು ಮಂದಿ ಭಾಗವತರಿಗೆ ಮಾತ್ರ ಇತ್ತು ಎನ್ನುವುದು ಹೆಚ್ಚಿನ ಹಿರಿಯ ಪ್ರೇಕ್ಷಕರ ಮಾತು. ಅದ್ಭುತ ಲಯಸಿದ್ದಿ ಉಳ್ಳ ಭಾಗವತರಿಗೆ ಮಾತ್ರ ಅದು ಸಾಧ್ಯವಾಗುತ್ತಿತ್ತು. ಹುಸಿ, ಘಾತ ಪೆಟ್ಟುಗಳನ್ನು ಬಿಟ್ಟು ಬಿಟ್ಟು ಬಾರಿಸುವ ಮೂಲಕ ರಾಯರು ಭಾಗವತ ನಡುಗುವಂತೆ ಮಾಡುತ್ತಿದ್ದುದು ಇದಕ್ಕೆ ಕಾರಣವಂತೆ. ಕೆಲ  ಭಾಗವತರುಗಳು,ಹವ್ಯಾಸಿಗಳು ಗೋಪಾಲ ರಾಯರ ಮದ್ದಳೆಗೆ ನಾನು ಪದ್ಯ ಹೇಳುವುದಾ ಎಂದು ಕೇಳಿ ಓಡಿ ಹೋಗುತ್ತಿದ್ದರಂತೆ!. 

‘ಕುಣಿತಕ್ಕೆ ಅವಕಾಶ ಇಲ್ಲದ ಪದಗಳಿಗೆ ವೈಚಿತ್ರ್ಯಪೂರ್ಣವಾದ ವಿಷಮ ಗತಿಯ ನುಡಿತಗಳನ್ನು ಗೋಪಾಲ ರಾಯರು ಬಾರಿಸುತ್ತಿದ್ದರು. ಕೂದಲೆಳೆಯ ಅಂತರದಲ್ಲಿ ಅವರು ಅಗಲಿ ನಿಂತು ಕಸರತ್ತು ಮಾಡುತ್ತಿದ್ದರು. ನಾವು ದಾರಿ ಬಿಡದೆ ತಾಳ ಹಾಕುತ್ತಾ ಹೋದರೆ ಅವರ ಗತಿ ಸಮಕ್ಕೆ ಬರುತ್ತಿತ್ತು’ ಎನ್ನುವ ವಿಚಾರವನ್ನು ಅವರ ಬಹುಕಾಲದ ಒಡನಾಡಿ ಗೋರ್ಪಾಡಿ ವಿಟ್ಠಲ ಪಾಟೀಲರು ತಮ್ಮ ಜೀವನ ಚರಿತ್ರೆಯ ಪುಸ್ತಕ ”ಚಿನ್ನದ ತಾಳ”ದಲ್ಲಿ ಹೇಳಿಕೊಂಡಿದ್ದಾರೆ. 

ಅಂದಿನ ಕಾಲದ ಮೇರು ಭಾಗವತರಾಗಿದ್ದ ಕುಂಜಾಲು ಶೇಷಗಿರಿ ಕಿಣಿ, ಜಾನುವಾರು ಕಟ್ಟೆ ಗೋಪಾಲ ಕೃಷ್ಣ ಕಾಮತ್‌ , ಗೋರ್ಪಾಡಿ ವಿಟ್ಠಲ ಪಾಟೀಲರೊಂದಿಗೆ ಗೋಪಾಲ ರಾಯರ ಜೋಡಿ ಅದ್ಭುತವಾಗಿರುತ್ತಿತ್ತು ಎನ್ನುವುದು ಹಿರಿಯ ಪ್ರೇಕ್ಷಕರ ಅಭಿಪ್ರಾಯ. 

ಪ್ರಶಸ್ತಿ ಸಿಕ್ಕಿದ್ದು ನನಗೆ ಸಂಭ್ರಮವೂ ಅಲ್ಲ, ಬೇಸರವೂ ಇಲ್ಲ. ನನ್ನನ್ನು ಗುರುತಿಸಿದ್ದಕ್ಕೆ ಖುಷಿ ಇದೆ ಎಂದು ರಾಯರು ಹೇಳುತ್ತಾರೆ.ಇದಕ್ಕೆ ಕಾರಣ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಆಸೆ ಪಟ್ಟು ಕೆಲಸ ಮಾಡಿದವರಲ್ಲ. ಅಮೆರಿಕಾದಲ್ಲೂ  ಯಕ್ಷಗಾನದ ಪರಿಮಳವನ್ನು ಪಸರಿಸಿದ ರಾಯರು ರಾಜ್ಯೋತ್ಸವಕ್ಕಿಂತ ದೊಡ್ಡದಾದ ಯಾವ ಪ್ರಶಸ್ತಿಯಿದ್ದರು ಅರ್ಹರು. ಮುಂದಿನ ದಿನಗಳಲ್ಲಿ ಸರ್ಕಾರಗಳು ಗುರುತಿಸಿ ಅವರಿಗೆ ಪದ್ಮ ಪ್ರಶಸ್ತಿ ನೀಡಿದರೆ ಅವರ ದಣಿವರಿಯದ ಸಾಧನೆಗೆ ,ಶುದ್ಧ ಯಕ್ಷಗಾನಕ್ಕೆ ನೀಡಿದ ಬಲುದೊಡ್ಡ ಗೌರವವಾಗುತ್ತದೆ.

ವಿಷ್ಣುದಾಸ್‌ ಪಾಟೀಲ್‌ ಗೋರ್ಪಾಡಿ 

Advertisement

Udayavani is now on Telegram. Click here to join our channel and stay updated with the latest news.

Next