Advertisement

ಎರಡು ದಿನಗಳಿಂದ ಶೋ ವೀಕ್ಷಣೆಗೆ ಒಬ್ಬರೂ ಇಲ್ಲ !

11:11 PM Feb 05, 2020 | mahesh |

ಮಹಾನಗರ: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ವೀಕ್ಷಣೆ ಗಿರುವ ಕದ್ರಿ ಜಿಂಕೆ ಪಾರ್ಕ್‌ನಲ್ಲಿನ ಏಕೈಕ ಸಂಗೀತ ಕಾರಂಜಿಯ ನರ್ತನ ದಿನದಿಂದ ದಿನಕ್ಕೆ ಸೊರಗುತ್ತಿದೆ. ಕಳೆದ ಐದು ದಿನಗಳಲ್ಲಿ ಕಾರಂಜಿ ವೀಕ್ಷಣೆಗೆ ಆಗಮಿಸಿದ್ದು ಕೇವಲ 34 ಮಂದಿ. ಅದರಲ್ಲೂ ಈ ತಿಂಗಳ ನಾಲ್ಕು ದಿನಗಳಲ್ಲಿ ಒಬ್ಬರೂ ಶೋ ವೀಕ್ಷಣೆಗೆ ಆಗಮಿಸಲಿಲ್ಲ.

Advertisement

ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಕಾರಂಜಿ ವೀಕ್ಷಣೆಗೆ ಆಗಮಿಸುವ ಮಂದಿ ಕಡಿಮೆಯಾಗುತ್ತಿದ್ದಾರೆ. ಗೇಟ್‌ ಕಲೆಕ್ಷನ್‌ ನಿಂದ ಮೊದಲ ವರ್ಷ ಸುಮಾರು 8 ಲಕ್ಷ ರೂ. ಆದಾಯ ಸಂಗ್ರಹವಾದರೆ, ಕಳೆದ ವರ್ಷ ಸುಮಾರು 7 ಲಕ್ಷ ರೂ.ಗೆ ಇಳಿದಿತ್ತು. ಈ ವರ್ಷ ಹೆಚ್ಚಿನ ದಿನಗಳು ಕಾರಂಜಿ ಶೋ ನಡೆಯಲಿಲ್ಲ. ಕೆಲವು ದಿನಗಳ ಹಿಂದೆ ತಾಂತ್ರಿಕ ಸಮಸ್ಯೆಯಿಂದಲೂ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು. ಬಳಿಕ ಆರಂಭಗೊಂಡರೂ ಆಗಮಿಸುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸತೊಡಗಿದೆ. ಕದ್ರಿ ಸಂಗೀತ ಕಾರಂಜಿ ಪ್ರದರ್ಶನವು ಸೋಮವಾರದಿಂದ ಶುಕ್ರವಾರ ದವರೆಗೆ ಸಂಜೆ 7 ಗಂಟೆಯಿಂದ 7.30ರ ವರೆಗೆ ಮತ್ತು ಶನಿವಾರ, ರವಿವಾರ ಎರಡು ಶೋ ನಡೆಯುತ್ತಿದೆ. ಆದರೆ ಕೆಲವು ತಿಂಗಳಿನಿಂದ ಈವರೆಗೆ ಒಂದೇ ದಿನ 2 ಶೋ ನಡೆದದ್ದು ಕಡಿಮೆ.

ಎರಡು ವರ್ಷಗಳ ಹಿಂದೆ ನಿರ್ಮಾ ಣಗೊಂಡ ಸಂಗೀತ ಕಾರಂಜಿ ಯಲ್ಲಿ ಬಣ್ಣದ ಕಾರಂಜಿ ಮಾತ್ರವಲ್ಲದೆ ಲೇಸರ್‌ ಲೈಟ್‌ ತಂತ್ರಜ್ಞಾನ ಬಳಸಲಾಗಿದೆ. ನೀರಿನ ನರ್ತನ ಜತೆಗೆ ಯಕ್ಷಗಾನ, ಭೂತಾರಾಧನೆ, ಕಂಬಳ, ನಾಗಮಂಡಲ, ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ ಸಹಿತ ವಿವಿಧ ಬಗೆಯ ಥೀಮ್‌ನಲ್ಲಿ ಸಂಗೀತ ಕಾರಂಜಿ ಪ್ರದರ್ಶನಗೊಳಿಸಲಾಗುತ್ತಿದೆ. ಶೋ ಪ್ರಾರಂಭವಾದಾಗಿನಿಂದಲೂ ಒಂದೇ ಕಲ್ಪನೆಯಲ್ಲಿ ಶೋ ಪ್ರದರ್ಶನಗೊಳಿಸಲಾಗುತ್ತಿದ್ದು, ವೀಕ್ಷಕರು ಕಡಿಮೆಯಾಗಲು ಇದು ಕೂಡ ಕಾರಣ ಎಂದು ಹೇಳಬಹುದು.

5 ಕೋಟಿ ರೂ.ನಲ್ಲಿ ನಿರ್ಮಾಣ
ಕದ್ರಿ ಜಿಂಕೆ ಪಾರ್ಕ್‌ ಬಳಿ ಹಳೆ ಮೃಗಾಲಯದಲ್ಲಿ ಮುಡಾ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಮ್ಯೂಸಿಕ್‌ ಫೌಂಡೇಶನ್‌ ಅನ್ನು 2018ರ ಜನವರಿ 7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. 6 ತಿಂಗಳುಗಳ ಮೊದಲೇ ಕಾಮಗಾರಿ ಪೂರ್ಣಗೊಂಡಿದ್ದರೂ ಮುಖ್ಯ ಮಂತ್ರಿಗಳ ದಿನಾಂಕದ ಸಮಸ್ಯೆಯಿಂದ ಉದ್ಘಾಟನೆ ಮುಂದೂಡಲಾಗಿತ್ತು. ಅಂದಿನ ಶಾಸಕ ಜೆ.ಆರ್‌. ಲೋಬೋ ಅವರ ನೇತೃತ್ವದಲ್ಲಿ ಸಂಗೀತ ಕಾರಂಜಿ ತಲೆ ಎತ್ತಿತ್ತು. ಕಾರಂಜಿ ಕಾಮಗಾರಿಯನ್ನು ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕಂಪೆನಿ ವಹಿ ಸಿತ್ತು. ಇಲ್ಲಿ ಬಣ್ಣದ ಕಾರಂಜಿ ಮಾತ್ರ ವಲ್ಲದೆ, ಲೇಸರ್‌ ಲೈಟ್‌ ತಂತ್ರಜ್ಞಾನ ವ್ಯವಸ್ಥೆಯನ್ನು ಕೂಡ ಬಳಸಲಾಗಿದೆ.

ದರ ಇಳಿಕೆಯಾದರೂ ಯಶಸ್ವಿಯಾಗಲಿಲ್ಲ
ಕದ್ರಿ ಜಿಂಕೆ ಪಾರ್ಕ್‌ ನಲ್ಲಿ ಸಂಗೀತ ಕಾರಂಜಿ ಉದ್ಘಾಟನೆಯಾದ ಬಳಿಕ ಮೂರು ತಿಂಗಳುಗಳ ಕಾಲ ಪ್ರವೇಶ ದರ ನಿಗದಿಪಡಿಸಿರಲಿಲ್ಲ. ಆದರೆ 2018ರ ಎಪ್ರಿಲ್‌ 20ರಿಂದ ಪ್ರದರ್ಶನಕ್ಕೆ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ನಿಗದಿಪಡಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಇದೀಗ ಶೋ ದರ ಇಳಿಕೆಯಾಗಿದ್ದು, 6ರಂದ 12 ವರ್ಷದ ಒಳಗಿನವರಿಗೆ 15 ರೂ., ವಯಸ್ಕರಿಗೆ 30 ರೂ. ನಿಗದಿಪಡಸಲಾಗಿದೆ. ಆದರೂ ಪ್ರವಾಸಿಗರ ಸಂಖ್ಯೆಯಲ್ಲೇನೂ ಭಾರೀ ಪ್ರಮಾಣದ ಏರಿಕೆ ಕಂಡಿಲ್ಲ.

Advertisement

ಸಭೆ ಕರೆಯುತ್ತೇನೆ
ಕದ್ರಿಯಲ್ಲಿರುವ ಸಂಗೀತ ಕಾರಂಜಿ ಜನಕಾರ್ಷಣೆ ಪಡೆಯುವ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುವುದರ ಬಗ್ಗೆ ಸದ್ಯದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯುತ್ತೇನೆ. ಕಾರಂಜಿ ವೀಕ್ಷಣೆಗೆ ಈಗಾಗಲೇ ದರ ಕಡಿಮೆ ಮಾಡಲಾಗಿದೆ. ಇನ್ನು, ಥೀಮ್‌ ಬದಲಾವಣೆ ಮಾಡುವ ಪ್ರಸ್ತಾವ ಕೂಡ ಜಿಲ್ಲಾಡಳಿತದ ಮುಂದಿದೆ.
-ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next