ವಿಜಯಪುರ: ಕಳೆದ 75 ವರ್ಷಗಳಿಂದ “ದೊಡ್ಡ ದೊಡ್ಡ ಗೌಡರು-ಸಾಹುಕಾರರಿಗೆ ’ ಕೈ ಎತ್ತಿಕೊಂಡೇ ಬಂದಿದ್ದೇವೆ. ಆದರೆ ಅಧಿಕಾರ ನೀಡುವ ಹಂತದಲ್ಲಿ ದಲಿತರಿಗೆ ಯಾರೂ ಬೆಂಬಲಿಸಲ್ಲ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮಗನನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂದು ಪಕ್ಷ ನಿರ್ಣಯಿಸಿದೆ. ಇದರಿಂದಾಗಿ ನಮಗೇನೂ ಹೊಟ್ಟೆಯುರಿ ಇಲ್ಲ. ನಾನೇನು ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕೆಂದು ಅಂದುಕೊಂಡು ಕನಸು ಕಂಡವನಲ್ಲ. ದಲಿತರಾದ ನಾವು ಅಂಥ ಕನಸು ಕಾಣಲ್ಲ ಎಂದು ಹೇಳಿದರು.
ಅಸೆಂಬ್ಲಿಯಲ್ಲಿ, ಲೋಕಸಭೆಯಲ್ಲಿ ಕಳೆದ 75 ವರ್ಷಗಳಿಂದ ನೋಡುತ್ತ ಬಂದಿದ್ದೇವೆ. ಶ್ರೀಮಂತರು, ಗೌಡರಿಗಾಗಿ ದಲಿತರು ಕೈ ಎತ್ತುತ್ತಲೇ ಬಂದಿದ್ದೇವೆ. ದಲಿತರಾದ ನಮ್ಮ ಪರ ಯಾರಿದ್ದಾರೆ, ನಮಗಾಗಿ ಯಾರೂ ಕೈ ಎತ್ತಲು ಸಿದ್ಧರಿಲ್ಲ ಎಂದರು.
ಸತತ ಆರು ಬಾರಿ ಸಂಸದ, ಮೂರು ಬಾರಿ ಶಾಸಕರಾಗಿ, ರಾಜ್ಯ-ಕೇಂದ್ರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ನಮ್ಮನ್ನು ದಲಿತರು ಎಂಬ ಕಾರಣಕ್ಕೆ ಅಧಿಕಾರದಿಂದ ಹೊರಗಿಡಲಾಗಿದೆ ಎಂದೂ ತಿಳಿಸಿದರು.