Advertisement

ಯಾರಿಗೂ, ಯಾವ ಪಕ್ಷ ಗಳಿಗೂ ರೈತರ ಕಾಳಜಿ ಇಲ್ಲ: ಎಚ್‌. ಆರ್‌. ಬಸವರಾಜಪ್ಪ

05:35 PM Jun 19, 2024 | Team Udayavani |

■ ಉದಯವಾಣಿ ಸಮಾಚಾರ 
ದಾವಣಗೆರೆ: ಚನ್ನಗಿರಿ ತಾಲೂಕಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನಾತ್ಮಕವಾಗಿ ಬೆಳೆಯುತ್ತಿರುವುದು ಅದ್ಭುತ ಬೆಳವಣಿಗೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್‌. ಆರ್‌. ಬಸವರಾಜಪ್ಪ ಸಂತಸ ವ್ಯಕ್ತಪಡಿಸಿದರು.

Advertisement

ಸೋಮವಾರ ಚನ್ನಗಿರಿ ತಾಲೂಕಿನ ನೀತಿಗೆರೆ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕಗಳ ಉದ್ಘಾಟಿಸಿ
ಮಾತನಾಡಿದ ಅವರು, ಈವರೆಗೆ ಬಗರ್‌ ಹುಕುಂ ಜಮೀನುಗಳು ಉಳಿದಿವೆ ಎಂದರೆ ಅದಕ್ಕೆ ರೈತ ಸಂಘ ಕಾರಣ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರ ಗ್ರಾಮೀಣರು ಮತ್ತು ರೈತಾಪಿ ವರ್ಗದ ಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸುತ್ತವೆ. ಆದರೆ, ಯೋಜನೆಗಳ ಪ್ರಯೋಜನವನ್ನು ಅರ್ಹರಿಗೆ ತಲುಪಿಸುವಲ್ಲಿ ಮತ್ತು ರೈತರ ಸಮಸ್ಯೆ ಆಲಿಸುವಲ್ಲಿ ಸ್ಥಳೀಯ
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷé ವಹಿಸುತ್ತಾರೆ. ಸೌಲಭ್ಯ ತಲುಪಿಸುವ ಹಿನ್ನೆಲೆಯಲ್ಲಿ ನೀತಿಗೆರೆ ಗ್ರಾಮದ ರೈತರು ಸಂಘಟಿತರಾಗಿರುವುದು ಉತ್ತಮ ಬೆಳವಣಿಗೆ. ರಾಜ್ಯ ರೈತ ಸಂಘ 44 ವರ್ಷಗಳಿಂದ ನೊಂದ ಜನರಿಗೆ ನೆರವು ನೀಡುತ್ತಾ ಬರುತ್ತಿದೆ. ರೈತರ ಹಸಿರು ಟವೆಲ್‌ ಪವಿತ್ರವಾದದ್ದು ಎಂದರು.

ರೈತರ ಬಗ್ಗೆ ಯಾರಿಗೂ, ಯಾವ ಪಕ್ಷಗಳಿಗೂ ಕಾಳಜಿಯೇ ಇಲ್ಲ. ದೇಶಕ್ಕೆ ಅನ್ನ ನೀಡುತ್ತಿರುವ ರೈತರನ್ನು ಯಾವ ಸರ್ಕಾರವೂ
ಉದ್ಧಾರ ಮಾಡುವುದಿಲ್ಲ. ಸರ್ಕಾರಗಳು ಉತ್ತಮ ದರದಲ್ಲಿ ಸಮರ್ಪಕವಾಗಿ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್‌ ನೀಡುವಲ್ಲಿ,
ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ವಿದ್ಯುತ್‌ ಖಾಸಗೀಕರಣ ಆಗುತ್ತಿರುವುದನ್ನು ತಪ್ಪಿಸಲು ಸಾಕಷ್ಟು ರೂಪುರೇಷೆ ತಯಾರಿಸಿದ್ದೇವೆ. ಬ್ಯಾಂಕ್‌ ನವರು ರಾಜ್ಯ ಸರ್ಕಾರ ನೀಡುತ್ತಿರುವ ವಿವಿಧ ಯೋಜನೆಗಳ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

ಬರಗಾಲ ಇರುವುದರಿಂದ ಬ್ಯಾಂಕ್‌ ನವರು ರೈತರ ಸಾಲ ವಸೂಲಿಗೆ ಬಲವಂತ ಮಾಡಬಾರದು ಮತ್ತು ರೈತರ ಖಾತೆಗಳಿಗೆ
ಬರುವ ಪರಿಹಾರದ ಹಣ, ವೃದ್ಧಾಪ್ಯ ವೇತನ, ಹಾಲಿನ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಸರ್ಕಾರ ಆದೇಶ
ಹೊರಡಿಸಬೇಕು. ರೈತರೇ ಸ್ವಯಂ ವೆಚ್ಚ ಯೋಜನೆಯಡಿ ಪಂಪ್‌ಸೆಟ್‌ ಗಳನ್ನು ಹಾಕಿಸಿಕೊಳ್ಳುವ ಆದೇಶವನ್ನು
ಹಿಂಪಡೆಯಬೇಕು. ಅಕ್ರಮ-ಸಕ್ರಮ ಕಾರ್ಯಗಳನ್ನು ತುರ್ತು ಮಾಡಬೇಕು. ಕೃಷಿಕಾಯ್ದೆಗಳನ್ನು ವಾಪಸ್‌ ಪಡೆಯಬೇಕು.
ಬಿತ್ತನೆ ಬೀಜ ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದು ಕಡಿಮೆ ಮಾಡುವ ಜೊತೆಗೆ ಕಾಳ ಸಂತೆಯಲ್ಲಿ ಮಾರಾಟಮಾಡುವವರ
ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಾರ್ಯಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ, ಒಗ್ಗಟ್ಟಾಗಿ ಇದ್ದರೆ ನಮ್ಮ ಸಮಸ್ಯೆಗಳನ್ನು ಸಂಘಟನೆಯ
ಮೂಲಕ ಬಗೆಹರಿಸಿಕೊಳ್ಳಬಹುದು ಎಂದರು. ತಾಲೂಕು ಅಧ್ಯಕ್ಷ ಮಲಹಾಳ್‌ ತಿಪ್ಪೇಶಪ್ಪ ಮಾತನಾಡಿ, ರೈತರ ಬೇಡಿಕೆಗಳನ್ನು
ಈಡೇರಿಸಲು ಹೋರಾಟ ಅಗತ್ಯ ಎಂದರು. ತಾಲೂಕು ಹಸಿರು ಸೇನೆ ಅಧ್ಯಕ್ಷ ರವಿಹಳ್ಳಿ, ನೀತಿಗೆರೆ ಗ್ರಾಮ ಘಟಕದ ಅಧ್ಯಕ್ಷ ಎಂ.ವಿ
ಮಂಜಪ್ಪ ಮಾತನಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಸಂತೋಷ್‌ನಾಯ್ಕ ಕಬ್ಬಳ, ಹಸಿರು ಸೇನೆ
ಜಿಲ್ಲಾಧ್ಯಕ್ಷ ಅಭಿಲಾಷ್‌ ಎಂ, ಸಂತೋಷ್‌, ಎಂ ಸಿದ್ದರಾಮಪ್ಪ, ಎಂ.ಎನ್‌ ಮಂಜಪ್ಪ, ಎಸ್‌.ಬಿ. ಪ್ರಕಾಶ್‌, ಎಂ.ವಿ ಚಂದ್ರಪ್ಪ,
ಎಂ.ಎಸ್‌ ಪರಮೇಶ್ವರಯ್ಯ, ಎಂ.ವಿ ಹಾಲೇಶಪ್ಪ, ಎಂ.ಸಿ ಲಿಂಗೇಶ್‌, ಸಿದ್ದಪ್ಪ, ಮಲ್ಲಿಕಾರ್ಜುನ್‌, ಶೇಖರಪ್ಪ, ಗೌಡ್ರು
ವೀರಪ್ಪ, ಗಣೇಶಚಾರ್ಯ, ಯೋಗೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next