ವಿಜಯಪುರ: ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಬಹಿರಂಗ ಮತದಾನ ಮಾಡಬೇಕಿದೆ. ಅಡ್ಡ ಮತದಾನ ಮಾಡಿದವರ ಶಾಸಕತ್ವ ರದ್ದಾಗಲಿದೆ. ಹೀಗಾಗಿ ಯಾವ ಶಾಸಕರೂ ಅಡ್ಡ ಮತದಾನ ಸಾಹಸಕ್ಕೆ ಮುಂದಾಗುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವ ಶಾಸಕರು ಪಕ್ಷದ ಏಜೆಂಟರಿಗೆ ಮತದಾನ ಮಾಡಿದ್ದನ್ನು ತೋರಿಸಬೇಕಿದೆ. ಒಂದೊಮ್ಮೆ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಮತದಾನ ಮಾಡಿದವರ ಶಾಸಕ ಸ್ಥಾನ ರದ್ದಾಗಲಿದೆ. ಕಾರಣ ಯಾವ ಶಾಸಕರೂ ಇಂಥ ಸಾಹಸಕ್ಕೆ ಮುಂದಾಗುವುದಿಲ್ಲ ಎಂದರು.
ಶೋಭಕ್ಕ ಕನಸು: ಸ್ವಯಂ ತಮಗೆ ಟಿಕೆಟ್ ಖಾತ್ರಿ ಇಲ್ಲದ ಕೇಂದ್ರ ಸಚಿವೆ ಶೋಭಕ್ಕ ಕಾಂಗ್ರೆಸ್ ಸರ್ಕಾರ ಪತನದ ಕನಸು ಕಾಣುವ ಗುಂಗಿನಲ್ಲೇ ಇರುತ್ತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯ ಆಶೀರ್ವಾದದಿಂದ 135 ಶಾಸಕರು ಅಸಯ್ಕೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಒಂದೊಮ್ಮೆ ಅವರು ಆಪರೇಶನ್ ಕಮಲ ಮಾಡಲು ಮುಂದಾದರೂ ಕನಿಷ್ಠ ಅವರಿಗೆ 50 ಶಾಸಕರು ಬೇಕು. ಹೀಗಾಗಿ ಲೋಕಸಭೆ ಚುನಾವಣೆ ಬಳಿಕವೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ಇರಲಿದ್ದು, ಸಿದ್ದರಾಮಯ್ಯ ಸರ್ಕಾರ ಅಬಾಧಿತವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಪತನವಾಗುವ ಮಾತಿರಲಿ, ಶೋಭಕ್ಕ ಅವರಿಗೆ ಟಿಕೆಟ್ ನೀಡಬಾರದೆಂದು ಅವರ ಪಕ್ಷದ ಅವರ ಕಾರ್ಯಕರ್ತರೇ ಒತ್ತಾಯಿಸುತ್ತಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷ ಕಮ್ಯುನಲ್, ಕ್ರಿಮಿನಲ್ ಎಂದು ಜರಿದಿರುವ ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಜನರೇ ಸೋಲಿಸಿ ಮನೆಗೆ ಕಳಿಸಿದ್ದಾರೆ ಎಂದು ತಿರುಗೇಟು ನೀಡಿದರು