Advertisement

ಯಾವುದೂ ನನ್ನದಲ್ಲ ಅಂದುಕೊಂಡರೆ ನೆಮ್ಮದಿ

11:33 AM Jul 22, 2018 | |

ಬೆಂಗಳೂರು: ಜಗತ್ತಿನಲ್ಲಿರುವುದು ಯಾವುದೂ ನನ್ನದಲ್ಲ ಎಂಬ ಮನೋಭಾವ ಬೆಳೆಸಿಕೊಂಡರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ಚುಟುಕು ಕವಿ ಡುಂಡಿರಾಜ್‌ ತಿಳಿಸಿದರು.

Advertisement

ಗಾಂಧಿನಗರದ ಸಪ್ನ ಬುಕ್‌ ಹೌಸ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ “ನೆಚ್ಚಿನ ಲೇಖಕರ ಜತೆ ನಗೆಚಟಾಕಿ ಮಾತುಕತೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ಇಲ್ಲಿರುವ ಯಾವುದೂ ನನ್ನದಲ್ಲ ಎಂಬ ಸತ್ಯ ತಿಳಿಯಬೇಕು. ಈ ಸತ್ಯ ತಿಳಿದ ವ್ಯಕ್ತಿ ನಿಶ್ಚಿಂತೆ ಮತ್ತು ಸಂತೋಷದಿಂದ ಇರುತ್ತಾನೆ ಎಂದು ಹೇಳಿದರು.

ಸದಾ-ಆನಂದ: “ಸದಾ ನಗುವ ನಮ್ಮ ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗಲೂ ಸದಾ ಆನಂದದಿಂದ ಇರಲಿಲ್ಲವೇ? ಯಾಕೆಂದರೆ, ಅವರಿಗೂ ಗೊತ್ತಿತ್ತು ತಾವು ಕುಳಿತ ಕುರ್ಚಿ ಸದಾ ನಂದಲ್ಲ ಎಂಬ ಸತ್ಯ’ ಎಂದು ದುಂಡಿರಾಜ್‌ ಚುಟುಕು ಚಟಾಕಿ ಹಾರಿಸಿದರು.

ಹಾಸ್ಯದ ಮನಸ್ಸಿದ್ದರೆ, ಎಲ್ಲಿ ಬೇಕಾದರೂ ಹಾಸ್ಯದ ಹೊನಲು ಹರಿಯುತ್ತದೆ. ಜೀವನದ ನಿತ್ಯ ಆಗುಹೋಗುಗಳಲ್ಲೇ ಹಾಸ್ಯ ಹಾಸುಹೊಕ್ಕಾಗಿರುತ್ತದೆ. ಆದರೆ, ಆ ಹಾಸ್ಯಪ್ರಜ್ಞೆ ಇರಬೇಕಷ್ಟೇ ಎಂದು ಸೂಚ್ಯವಾಗಿ ಹೇಳಿದರು. 

ವಕ್ರದೃಷ್ಟಿಯಿಂದ ಹಾಸ್ಯ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌ ಮಾತನಾಡಿ, ಜೀವನದಲ್ಲಿ ವಕ್ರದೃಷ್ಟಿ ಇದ್ದರೆ, ಅಂತಹ ಕಡೆ ಹಾಸ್ಯ ಹುಟ್ಟುತ್ತದೆ. ಹಾಗೊಂದು ವೇಳೆ ಜೀವನವೇ ವಕ್ರದೃಷ್ಟಿಯಿಂದ ಕೂಡಿದರೆ, ಅಲ್ಲಿ “ಫಿಲಾಸಫಿ’ ಹುಟ್ಟುತ್ತದೆ ಎಂದು ಟಿ.ಪಿ.ಕೈಲಾಸಂ ಹೇಳಿದ್ದರು. ಆ ವಕ್ರದೃಷ್ಟಿ ನಮ್ಮ ನಿತ್ಯ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ಫೇಸ್‌ಬುಕ್‌ನಲ್ಲೇ ಬುಕ್‌ಗಳನ್ನು ಓದಿ, ಅದಕ್ಕೆ ಕಾಮೆಂಟ್‌ ಎಂಬ ವಿಮರ್ಶೆ ಬರೆದು, ಶೇರ್‌ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದರು.

Advertisement

ಲೇಖಕ ಎಂ.ಎಸ್‌.ನರಸಿಂಹ ಮೂರ್ತಿ ಮಾತನಾಡಿ, ಹಾಸ್ಯದಲ್ಲಿ ಮೆಚ್ಚು ನಗೆ, ಚುಚ್ಚು ನಗೆ ಎಂಬ ಎರಡು ಪ್ರಕಾರಗಳಿವೆ. ಈ ನಗುವಿಗೆ ಯಾವುದೇ ಜಾತಿ-ಧರ್ಮದ ಭೇದ-ಭಾವ. ಅದೆಲ್ಲವನ್ನೂ ಮೀರಿದ್ದು ಹಾಸ್ಯ ಎಂದರು.

ಎಲ್ಲರ ನಗಿಸೋ ನೀವು ಮನೆಯಲ್ಲೂ ಹೀಗೇನಾ? “ಎಲ್ಲರ ನಗಿಸೋ ನೀವು ಮನೆಯಲ್ಲೂ ಹೀಗೇನಾ?’ -ನೆಚ್ಚಿನ ಲೇಖಕರೊಂದಿಗಿನ ಮಾತುಕತೆಯಲ್ಲಿ ಸಭಿಕ ರೊಬ್ಬರಿಂದ ಇಂತಹದ್ದೊಂದು ಪ್ರಶ್ನೆ ತೂರಿಬಂತು. ಇದಕ್ಕೆ ಹಾಸ್ಯದ ಧಾಟಿಯಲ್ಲೇ ಉತ್ತರಿಸಿದ ಎಂ.ಎಸ್‌. ನರಸಿಂಹಮೂರ್ತಿ, “ಮನೆಯಲ್ಲಿ ಹೆಂಡತಿ ನಗುವಂತಿದ್ದರೆ, ನಾನು ಇಲ್ಲಿಗೇಕೆ ಬರ್ತಿದ್ದೆರೀ…?’ ಎಂದರು. ಆಗ, ಸಭೆಯಲ್ಲಿ ನಗೆಯ ಬುಗ್ಗೆ ಚಿಮ್ಮಿತು.

ಹೌದು ನಿಮ್ಮ ಮಡದಿಯೇ: ಬೆನ್ನಲ್ಲೇ “ಯಾವಾಗಲೂ ಹೆಂಗಸರನ್ನು ಗೇಲಿ ಮಾಡುವಂತಹ ಜೋಕುಗಳೇ ಇರುತ್ತವೆ ಯಾಕೆ’ ಎಂಬ ಪ್ರಶ್ನೆ ತೂರಿಬಂತು. ಇದಕ್ಕೆ ಡುಂಡಿರಾಜ್‌ ಪ್ರತಿಕ್ರಿಯಿಸಿ, ಕೆಲವೆಡೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ “ನಿಮ್ಮ ಕವಿತೆಗೆ ಸ್ಫೂರ್ತಿ ನಿಮ್ಮ ಮಡದಿಯೇ?’ ಎಂದೂ ಕೇಳಿದ್ದುಂಟು. ಅದಕ್ಕೆ ನನ್ನ ಉತ್ತರ, “ಹೌದು, ನಿಮ್ಮ ಮಡದಿಯೇ’ ಎಂದು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next