Advertisement

ಕಾಂಗ್ರೆಸ್ಸಿಗೆ ಕರೆವ ಧೈರ್ಯ ಯಾರಿಗೂ ಇಲ್ಲ

06:35 PM Feb 07, 2018 | |

ಬಳ್ಳಾರಿ: ನನ್ನನ್ನು ಕಾಂಗ್ರೆಸ್ಸಿಗೆ ಕರೆಯುವ ಧೈರ್ಯ ಆ ಪಕ್ಷದಲ್ಲಿ ಯಾರಿಗೂ ಇಲ್ಲ. ಸಕಲವನ್ನೂ ಕೊಟ್ಟ ಬಿಜೆಪಿಗೇ ನನ್ನ ಸ್ವಾಮಿ ನಿಷ್ಠೆ ಹೊರತು ಎಂದಿಗೂ ನಾನು ಪಕ್ಷ ದ್ರೋಹ ಮಾಡುವುದಿಲ್ಲ ಎಂದು ಕಂಪ್ಲಿ ಶಾಸಕ ಟಿ.ಎಚ್‌. ಸುರೇಶ್‌ ಬಾಬು ಹೇಳಿದರು. ನಗರದ ವಾಲ್ಮೀಕಿ ವೃತ್ತದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲಿರುವೆ. ನಾಯಕ ಸಮಾಜದಲ್ಲಿ ಜನಿಸಿದ ನಾನು, ನಾಯಕನಾಗಿಯೇ ಬಾಳುವೆ ಹೊರತು, ನಾಲಾಯಕ್‌ ಜೀವನ ನಡೆಸುವುದಿಲ್ಲ ಎಂದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸಂತೋಷ ಲಾಡ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನಾನು ಕಾಂಗ್ರೆಸ್‌ಗೆ ಸೇರಲಿದ್ದೇನೆ. ಈ ಕುರಿತು ಸಿಎಂ
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ ಎಂಬ ವದಂತಿ ಹಬ್ಬಿಸಿದ್ದಾರೆ. ವಾಸ್ತವದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ್ದು ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯ ಚರ್ಚಿಸುವುದಕ್ಕಾಗಿಯೇ ಹೊರತು ಪಕ್ಷ ಸೇರ್ಪಡೆ ಕುರಿತು ಅಲ್ಲ. ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಇಂಥ ವದಂತಿಗಳಿಗೆ ಮತದಾರರು ಕಿವಿಕೊಡಬಾರದು ಎಂದು ಮನವಿ ಮಾಡಿದರು. ಇತ್ತೀಚೆಗೆ ನಡೆದ ಐಟಿ, ಇಡಿ ದಾಳಿಯಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮನಸ್ಸು ವಿಚಲಿತವಾಗಿದೆ. ಆದ್ದರಿಂದ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಬ್ಬರ ಏಳ್ಗೆ ಸಹಿಸದ ಕಾಂಗ್ರೆಸ್‌ ಮುಖಂಡರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ನನ್ನನ್ನು ಪಕ್ಷಕ್ಕೆ ಕರೆಯುವ ಧೈರ್ಯ ಕಾಂಗ್ರೆಸ್ಸಿಗರಿಗೆ ಇಲ್ಲ. ಕಾಂಗ್ರೆಸ್‌ ಮುಖಂಡರು ಇಂಥ ಗಿಮಿಕ್‌, ಕೀಳು ಮಟ್ಟದ ರಾಜಕಾರಣ ಮಾಡೋದನ್ನು ಬಿಡಬೇಕು. ನಾನು ಕಾಂಗ್ರೆಸ್‌ ಗೆ ಸೇರ್ಪಡೆ ಆಗಲು ಪ್ರಯತ್ನಿಸಿದ್ದರ ಕುರಿತಾದ ದಾಖಲೆಗಳಿದ್ದರೆ ಅವರು ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಿ ಎಂದು ಸವಾಲೆಸೆದರು. ಬಿಜೆಪಿಯ ಮನೆ ಬಾಗಿಲು ಗಟ್ಟಿಯಾಗಿದೆ.

ಮತ್ತೂಬ್ಬರ ಮನೆ ಬಾಗಿಲು ತಟ್ಟುವ ಜಾಯಮಾನ ನನ್ನದಲ್ಲ. ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು
ಸಾಧಿಸಲಿದ್ದಾರೆ. ಕಾಂಗ್ರೆಸ್‌ನ ಕೀಳು ರಾಜಕಾರಣಕ್ಕೆ ತಕ್ಕ ಉತ್ತರ ಮೂರು ತಿಂಗಳಲ್ಲಿ ಸಿಗಲಿದೆ ಎಂದರು. ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರ ಕೊರತೆ
ಇದೆ. ಅಲ್ಲದೇ, ಪಕ್ಷದ ವತಿಯಿಂದ ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌ನಲ್ಲಿ ಸೂಕ್ತ ಅಭ್ಯಥಿಗಳಿಲ್ಲ. ಈ ಕಾರಣಕ್ಕಾಗಿ ಅವರು ನಮ್ಮ ಪಕ್ಷದ ಮುಖಂಡರನ್ನು ತಮ್ಮ ಪಕ್ಷದತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ನಡೆದ ಪರಿವರ್ತನಾ ರ್ಯಾಲಿ ಯಶಸ್ವಿಯಾದ ನಂತರ ಕಾಂಗ್ರೆಸ್‌ ನಾಯಕರಿಗೆ ಮಂಕು ಬಡಿದಿದೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಬಿಜೆಪಿಯಿಂದ. ನನ್ನ ಇವತ್ತಿನ ಬೆಳವಣಿಗೆಗೆ ಕಾರಣ ನನ್ನ ಪಕ್ಷ, ನನ್ನ ಸೋದರ ಮಾವ ಸಂಸದ ಶ್ರೀರಾಮುಲು, ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪರವರೇ ಕಾರಣ. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮತ್ತು ಸಂಸದ ಬಿ.ಶ್ರೀರಾಮುಲು ನನಗೆ ಎರಡು ಕಣ್ಣುಗಳಿದ್ದಂತೆ ಎಂದರು.

ಸಂಸದ ಶ್ರೀರಾಮುಲು ಕಳೆದ ವಾರ ಕಾಂಗ್ರೆಸ್‌ ನಲ್ಲಿ ಗಂಡು ಮಕ್ಕಳು ಇಲ್ಲ, ಚುನಾವಣೆ ನಿಲ್ಲಲು ಅಭ್ಯರ್ಥಿಗಳು ಇಲ್ಲ ಎಂದು ಹೇಳಿದ್ದು ಮತ್ತೂಮ್ಮೆ
ಸಾಬೀತಗಿದೆ ಎಂದರು. ಸೋಮವಾರ ದೆಹಲಿಯಲ್ಲಿ ಸಂಸದ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ
ಹೊಸಪೇಟೆ ಕಾಂಗ್ರೆಸ್‌ ನಾಯಕರಾದ ಎಚ್‌.ಆರ್‌. ಗವಿಯಪ್ಪ ಹಾಗೂ ಸಂಡೂರಿನ ರಾಜವಂಶಸ್ಥ ಕಾರ್ತಿಕ್‌ ಘೋರ್ಪಡೆ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲೆ ಕಳೆದುಕೊಂಡಿದೆ ಎಂದು ತಿಳಿಸಿದರು. ಎಸ್‌.ಗುರುಲಿಂಗನಗೌಡ, ಎರ್ರಂಗಳಿ ತಿಮ್ಮಾರೆಡ್ಡಿ, ಹರೀಶರೆಡ್ಡಿ, ಮುರಹರಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next