Advertisement

ಯಾರಿಗೂ ಲಂಚ ಕೊಟ್ಟಿಲ್ಲ

06:00 AM Dec 07, 2018 | Team Udayavani |

ಹೊಸದಿಲ್ಲಿ: ವಿವಿಐಪಿ ಕಾಪ್ಟರ್‌ ಡೀಲ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ವಿಚಾರಣೆ ವೇಳೆ “ಆಕ್ರಮಣಕಾರಿ’ ಮನೋಭಾವ ಪ್ರದರ್ಶಿಸುತ್ತಿದ್ದು, ಯುಪಿಎ ನಾಯಕರಾಗಲಿ ಅಥವಾ ಸೇನೆಯ ಅಧಿಕಾರಿಗಳಾಗಲಿ ಯಾವುದೇ ಲಂಚ ಸ್ವೀಕರಿಸಿಲ್ಲ ಎಂದು ಸಿಬಿಐ ಅಧಿಕಾರಿಗಳ ಮುಂದೆ ಹೇಳಿದ್ದಾನೆ.

Advertisement

ಯುಪಿಎ ಸರ್ಕಾರದ ಯಾವುದೇ ನಾಯಕರಿಗೆ ಲಂಚ ಕೊಟ್ಟಿಲ್ಲ, ಆದರೆ, ಮಧ್ಯವರ್ತಿಯಾಗಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದ ಕಮಿಷನ್‌ ಪಡೆದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಸಿಬಿಐ ಮೂಲಗಳು ಹೇಳಿವೆ. ಇದಷ್ಟೇ ಅಲ್ಲ, ಸಿಕ್ಕಿರುವ “ನೋಟ್‌’ನಲ್ಲಿನ ಹೆಸರುಗಳ ಬಗ್ಗೆಯೂ ಗೊತ್ತಿಲ್ಲ ಎಂದಿರುವ ಆತ, ನನಗೆ ಬರೆಯಲು ಮತ್ತು ಸಂಕೇತ ಗುರುತಿಸಲು ಸಾಧ್ಯವಾಗದಂಥ “ಡೈಲೆಕ್ಸಿಕ್‌’ ರೋಗವಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಈ ನೋಟ್‌ ಬರೆದಿರುವುದು ಇನ್ನೊಬ್ಬ ಮಧ್ಯವರ್ತಿ ಗೈಡೋ ಹಷೆ ಎಂದೂ ಹೇಳಿದ್ದಾನೆ. ಅಲ್ಲದೆ ಏನಾದರೂ ಹಗರಣವಾಗಿದ್ದರೆ ಅದರ ಸಂಪೂರ್ಣ ಹೊಣೆ ಹಷೆಯದ್ದೇ ಎಂದೂ ಮೈಕೆಲ್‌ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾನೆ. ಆದರೆ, ಈ ಹಗರಣದಲ್ಲಿ ಭಾರತೀಯ ರಾಜಕಾರಣಿಗಳು ಭಾಗಿಯಾಗಿಲ್ಲ ಎಂಬುದನ್ನು ಸಾಬೀತು ಮಾಡುವ ಸಲುವಾಗಿ ಹಷೆR ಮೇಲೆ ಹೊಣೆ ಹಾಕುತ್ತಿದ್ದಾನೆ ಎಂದು ಸಿಬಿಐ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ. ಮೈಕೆಲ್‌ಗೆ ಎಲ್ಲ ಗೊತ್ತಿದೆ. ಆದರೆ, ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಾಗ ಮಾತ್ರ ತನಗೆ ಬೇಕಾದಂತೆ ವರ್ತಿಸುತ್ತಾನೆ. ನಮ್ಮ ಬಳಿ ದಾಖಲೆಗಳಿವೆ ಎಂದ ಕೂಡಲೇ ಸಿಟ್ಟಿಗೇಳುತ್ತಾನೆ ಎಂದೂ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 

ಬಿಜೆಪಿ-ಕಾಂಗ್ರೆಸ್‌ ಕಾಳಗ: ಮೈಕೆಲ್‌ ಭಾರತಕ್ಕೆ ಗಡಿಪಾರಾಗಿರುವುದು ಕಾಂಗ್ರೆಸ್‌ಗೆ ನಡುಕ ಹುಟ್ಟಿಸಿದ್ದು, ಈತನ ರಕ್ಷಣೆಗಾಗಿ ತನ್ನ ವಕೀಲರ ತಂಡವನ್ನೇ ಆ ಪಕ್ಷ ಕಳುಹಿಸಿಕೊಟ್ಟಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್‌ನ ಪದಾಧಿಕಾರಿ ಅಜಿಯೋ ಕೆ. ಜೋಸೆಫ್ ಅವರನ್ನು ಕಳುಹಿಸಿದ್ದು ಇದೇ ಉದ್ದೇಶಕ್ಕಾಗಿ ಎಂದಿದ್ದಾರೆ. ಈ ಬಗ್ಗೆ ವಿವಾದವುಂಟಾಗುತ್ತಲೇ ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರೂ, ಇನ್ನಿಬ್ಬರು ವಕೀಲರಿಗೂ ಕಾಂಗ್ರೆಸ್‌ಗೂ ನಂಟಿದೆ ಎಂದು ಆಪಾದಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ಆಡಳಿತ ಪಕ್ಷದಲ್ಲಿರುವ ವಕೀಲರೂ ಹಲವಾರು ವಂಚಕರ ಪರ ವಾದಿಸಿಲ್ಲವೇ ಎಂದು ಪ್ರಶ್ನಿಸಿದೆ. ಈ ಸಂಬಂಧ ಮಾತನಾಡಿರುವ ಪಕ್ಷದ ವಕ್ತಾರ ಜೈವೀರ್‌ ಶಾಲ್‌, “ನೀರವ್‌ ಮೋದಿ, ಲಲಿತ್‌ ಮೋದಿ, ಸುಬ್ರತಾ ರಾಯ್‌ ಪರ ಬಿಜೆಪಿಯವರೂ ವಾದಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. ಜತೆಗೆ ಕೇತನ್‌ ಪರೇಕ್‌ ಪರ ಅರುಣ್‌ ಜೇಟ್ಲಿ ವಾದಿಸಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

ಮೈಕೆಲ್‌ ಗಡಿಪಾರಿನ ಹಿಂದೆ ಯುವರಾಣಿ-ಯುವರಾಜ
ಭಾರತಕ್ಕೆ ಮೈಕೆಲ್‌ ಗಡಿಪಾರಾಗಿದ್ದು ಒಂದು ರೋಚಕ ಕಥೆ. ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳ ಪ್ರಕಾರ, ಇಡೀ ಕಥೆಯಲ್ಲಿ ಯುವರಾಜ ಮತ್ತು ಯುವರಾಣಿಯ ಪಾತ್ರವಿದೆ. ಅಂದರೆ, ಈ ವರ್ಷದ ಆರಂಭದಲ್ಲಿ ಯುಎಇಯ ಪ್ರಧಾನ ಮಂತ್ರಿ ಮತ್ತು ದೊರೆಯ ಪುತ್ರಿಯೊಬ್ಬರು ದುಬೈನಿಂದ ತಪ್ಪಿಸಿಕೊಂಡು ಭಾರತದತ್ತ ಪರಾರಿಯಾಗಿದ್ದರು. ಇವರು ಬರುತ್ತಿದ್ದ ಹಡಗು ಗೋವಾದಿಂದ ಕೆಲವೇ ಕಿ.ಮೀ.ಗಳ ದೂರದಲ್ಲಿದೆ ಎಂದಾಗ ಭಾರತೀಯ ಅಧಿಕಾರಿಗಳು ಈಕೆಯನ್ನು ಹಿಡಿದು ಬಲವಂತವಾಗಿ ವಾಪಸ್‌ ಕಳುಹಿಸಿದ್ದರು. ಇದರಿಂದ ಯುಎಇಗೆ ಭಾರತದ ಮೇಲೆ ನಂಬಿಕೆ ಬಂದಿತ್ತು. ಇನ್ನು ಯುಎಇಯ ಯುವರಾಜ ಕೂಡ ಭಾರತದ ಜತೆ ಉತ್ತಮ ಸಂಬಂಧವಿರಿಸಿಕೊಂಡಿದ್ದಾರೆ. 19 ತಿಂಗಳ ಹಿಂದೆ ಅಲ್ಲಿನ ಕೋರ್ಟ್‌, ಮೈಕೆಲ್‌ ಗಡಿಪಾರಿಗೆ ವಿರೋಧಿಸಿತ್ತು. ಆದರೆ, ಭಾರತದ ರಾಜತಾಂತ್ರಿಕ ಮಾತುಕತೆಯ ನಿಟ್ಟಿನಲ್ಲಿ ಸ್ವತಃ ಯುವರಾಜನೇ ಆಸಕ್ತಿ ತೆಗೆದುಕೊಂಡು ಯಾವುದೇ ಷರತ್ತಿಲ್ಲದೇ ಮೈಕೆಲ್‌ನನ್ನು ಭಾರತಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದ್ದರು.

ಯುಪಿಎ ನಾಯಕರಿಗಾಗಲಿ, ಸೇನೆಯ ಅಧಿಕಾರಿಗಳಿಗೆ ಲಂಚ ಕೊಡಲಾಗಿಲ್ಲ
ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಮಧ್ಯವರ್ತಿಯ ವಿಚಾರಣೆ 
ನನಗೆ ಬರೆಯುವ, ಸಂಕೇತಗಳ ಗುರುತಿಸುವ ಸಮಸ್ಯೆ ಇದೆ ಎಂದ ಮೈಕೆಲ್‌
ಮೈಕೆಲ್‌ ಬಚಾವ್‌ ಮಾಡಲು ವಕೀಲರನ್ನು ಕಳುಹಿಸಿದ ಕಾಂಗ್ರೆಸ್‌: ಬಿಜೆಪಿ
ಆಡಳಿತ ಪಕ್ಷದಲ್ಲಿರುವ ವಕೀಲರಿಂದ ಹಿಂದೆ ವಂಚಕರ ಪರ ವಾದ ಮಂಡನೆ: ಕಾಂಗ್ರೆಸ್‌ ತಿರುಗೇಟು

Advertisement
Advertisement

Udayavani is now on Telegram. Click here to join our channel and stay updated with the latest news.

Next