ಬೆಂಗಳೂರು: “ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗುವುದಿಲ್ಲ. ಒಂದು ವೇಳೆ ನನ್ನ ತಂಟೆಗೆ ಬಂದರೆ ನಾನು ಕೂಡ ಸುಮ್ಮನೆ ಇರೋದಿಲ್ಲ’ ಎಂದು ಚಿತ್ರ ನಟ ಯಶ್ ಹೇಳಿದ್ದಾರೆ.
ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಸೋಮವಾರ ರೋಟರಿ ಕ್ಲಬ್ ಆಫ್ ಬೆಂಗಳೂರು ಡಿಸ್ಟ್ರಿಕ್ 3190 ಮತ್ತು ಅವನಿ ಸಂಘಟನೆ ಹಮ್ಮಿಕೊಂಡಿದ್ದ “ವಿಶ್ವ ಭೂ ದಿನಾಚರಣೆ’ಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ತಮ್ಮ ಬೆಂಬಲಿಗರನ್ನು ಟಾರ್ಗೆಟ್ ಮಾಡಿ, ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಯಶ್, “ಸುಮಲತಾ ಅವರು ತಮ್ಮ ಭಾವನೆಯನ್ನು ಹೇಳಿಕೊಂಡಿದ್ದಾರೆ. ಆದರೆ ನನ್ನನ್ನು ಟಾರ್ಗೆಟ್ ಮಾಡಬೇಕು ಎಂದರೆ ತುಂಬಾ ಕಷ್ಟ’ ಎಂದರು.
ನಾವು ಜನಗಳ ಆಸ್ತಿ. ಜನರಿಂದಲೇ ಬೆಳೆದವರು ಹಾಗಾಗಿ ನಮ್ಮನ್ನು ಟಾರ್ಗೆಟ್ ಮಾಡುವುದು ಸುಲಭವಲ್ಲ. ಹೇಳಿಕೊಂಡವರೆಲಾ,É ಅವರು ಅಂದು ಕೊಂಡಂತೆ ಮಾಡಲು ಅಸಾಧ್ಯ. ಒಂದು ವೇಳೆ ನಮ್ಮ ತಂಟೆಗೆ ಬಂದರೆ ಅವರು ಕೂಡ ಹುಷಾರಾಗಿರಬೇಕಾಗುತ್ತದೆ ಎಂದು ಹೇಳಿದರು.
ಚುನಾವಣೆ ಫಲಿತಾಂಶದ ಬಳಿಕ ಸ್ಟಾರ್‌ಗಳು ತಾವಾಡಿದ ಮಾತಿಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯಶ್, ಮುಖ್ಯಮಂತ್ರಿಗಳು ಹಾಗೂ ಅವರ ಬೆಂಬಲಿಗರು ನೀಡುವ ಎಲ್ಲಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಬೇಕು ಎಂದೇನೂ ಇಲ್ಲ.
ಪರಿಸ್ಥಿತಿಯ ತಕ್ಕಂತೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಮನೆ ಮಕ್ಕಳ ರೀತಿಯಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದೇವೆ. ಮಂಡ್ಯ ಜನರು ಕೂಡ ಸ್ವಾಭಿಮಾನಕ್ಕೆ ಬೆಲೆ ಕೊಟ್ಟು ಮತ ಹಾಕಿದ್ದಾರೆ. ಹೀಗಾಗಿ, ಮಂಡ್ಯದಲ್ಲಿ ಶೇ.80 ರಷ್ಟು ಮತದಾನವಾಗಿದ್ದು, ನಾನೂ ಧನಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ ಎಂದರು.
ಸಂಸದ ಶಿವರಾಮೇಗೌಡ ಅವರು ಏನು ಹೇಳುತ್ತಾರೋ ಅವರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.