Advertisement

ಎಚ್‌ಡಿಕೆ ಪಟ್ಟಾಭಿಷೇಕ ಯಾರೂ ತಡೆಯಲಾಗದು

12:08 PM May 10, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯವರಿಗೆ ಜೆಡಿಎಸ್‌ ಪಕ್ಷದ ಬಗ್ಗೆ ಭಯ ಬಂದಿದೆ. ಇದರಿಂದಾಗಿಯೇ ಎರಡೂ ಪಕ್ಷದವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಜೆಡಿಎಸ್‌ ವಿರುದ್ಧ ಮಾತನಾಡುತ್ತಿದ್ದಾರೆ. ಈ ಭಯವೇ ಸಾಕು, ರಾಜ್ಯದಲ್ಲಿ ಜೆಡಿಎಸ್‌ ಶಕ್ತಿ ಏನು ಎಂಬುದನ್ನು ತಿಳಿದುಕೊಳ್ಳಲು. ದೇವೇಗೌಡರ ಜನ್ಮದಿನವಾದ ಮೇ
18ರಂದು ಎಚ್‌.ಡಿ.ಕುಮಾರ ಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ವಾಗುವುದನ್ನು ತಡೆಯಲು ಇವರಿಬ್ಬರಿಗೂ ಸಾಧ್ಯವಿಲ್ಲ ಎಂದು ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಉದಯವಾಣಿಗೆ ವಿಶೇಷ ಸಂದರ್ಶನ ನೀಡಿದ ಅವರು, ಕರ್ನಾಟಕ ಪೊಲೀಟಿಕಲ್‌ ಲೀಗ್‌ (ಕೆಪಿಎಲ್‌) ಫೈನಲ್‌ ನಡೆಯುತ್ತಿದ್ದು, ಈ ಬಾರಿ ಕಪ್‌ ನಮ್ಮದೆ. ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದ್ದು, ಅಧಿಕಾರಕ್ಕಾಗಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಥವಾ ಕೈಜೋಡಿಸುವ ಪರಿಸ್ಥಿತಿ ಉದ್ಭವವಾಗುವುದೇ ಇಲ್ಲ ಎಂದು ಹೇಳಿದರು.

 ಜೆಡಿಎಸ್‌ ಅಧಿಕಾರಕ್ಕೆ ಬರುವ ಬಗ್ಗೆ ಇಷ್ಟೊಂದು ಆತ್ಮವಿಶ್ವಾಸ ಹೇಗೆ?
ಚುನಾವಣಾ ಪ್ರಚಾರದ ವೇಳೆ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ರಾಜ್ಯಾದ್ಯಂತ ಓಡಾಡಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಹತ್ತು ವರ್ಷದ ದುರಾಡಳಿತದಿಂದ ಜನ ಬೇಸತ್ತು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್‌ ನವರು ಬಿಜೆಪಿಯವರನ್ನು, ಬಿಜೆಪಿಯವರು ಕಾಂಗ್ರೆಸ್‌ನವರನ್ನು ಲೂಟಿಕೋರರು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇವರಿಬ್ಬರೂ ಸೇರಿ ಲೂಟಿ ಮಾಡಿರುವುದು ಆರು ಕೋಟಿ ಜನರ ತೆರಿಗೆ ಹಣ ಎಂಬುದು ಜನರಿಗೆ ಗೊತ್ತಾಗಿದೆ. ಅಂಬೇಡ್ಕರ್‌ ಸಂವಿಧಾನದಲ್ಲಿ ಹೇಳಿದಂತೆ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವುದು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ಸೇ ಹೊರತು ರಾಷ್ಟ್ರೀಯ ಪಕ್ಷಗಳಲ್ಲ ಎಂಬುದನ್ನು ಅರಿತಿರುವ ಜನ ಈ ಬಾರಿ ಜೆಡಿಎಸ್‌ಗೆ ಬೆಂಬಲಿಸುತ್ತಿದ್ದಾರೆ.

 ಮೇಲ್ನೋಟಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆಯೇ ಅಧಿಕಾರಕ್ಕಾಗಿ ಪೈಪೋಟಿ ಇದ್ದಂತೆ ಕಾಣುತ್ತಿದೆ?
ಆ ಎರಡೂ ಪಕ್ಷದವರು ಆ ರೀತಿ ಬಿಂಬಿಸುಕೊಳ್ಳುತ್ತಿದ್ದಾರೆ ಅಷ್ಟೆ. ವಿವಿಧ ಭಾಗ್ಯಗಳ ಮೂಲಕ ಜನರ ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್‌ ಗೆ ಈ ಬಾರಿ ಜನ ಸೋಲಿನ ಭಾಗ್ಯ ಕರುಣಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳಿಂದ ಕೂಡಿದ ಭಾಷಣದಿಂದ ಜನರನ್ನು ಆಕರ್ಷಿಸಬಹುದು ಎಂಬ ಬಿಜೆಪಿಯವರ ಕಲ್ಪನೆಗೂ ಮತದಾರ ನಿರಾಶೆ ತರಲಿದ್ದಾನೆ. ಕುಮಾರಸ್ವಾಮಿ 20 ತಿಂಗಳು ಮುಖ್ಯ ಮಂತ್ರಿಯಾಗಿದ್ದಾಗ ನೀಡಿದ ಉತ್ತಮ ಆಡಳಿತ ಜನರ ನೆನಪಿನಲ್ಲಿದ್ದು, ಮತ್ತೆ ಅದನ್ನು ನೋಡಲು ಬಯಸಿದ್ದಾರೆ ಎಂಬುದು ಅವರ ಮನಸ್ಸು ಅರ್ಥ ಮಾಡಿಕೊಂಡವರಿಗೆ ಗೊತ್ತಾಗುತ್ತದೆ.

 ಕಾಂಗ್ರೆಸ್‌, ಬಿಜೆಪಿಯವರು ಜೆಡಿಎಸ್‌ ಬಗ್ಗೆ ನೆಗೆಟಿವ್‌ ಕ್ಯಾಂಪೇನ್‌ನಲ್ಲಿ ತೊಡಗಿದ್ದು, ಇದು ಪಕ್ಷಕ್ಕೆ ಮುಳುವಾಗುವುದಿಲ್ಲವೇ? 
ಅವರ ವರ್ತನೆ, ಹೇಳಿಕೆಗಳನ್ನು ಕೇಳಿದಾಗ ಇಬ್ಬರಿಗೂ ಜೆಡಿಎಸ್‌ ಕಂಡರೆ ಭಯ ಬಂದಿದೆ ಎಂಬುದು ಅರ್ಥವಾಗುತ್ತದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರದ್ದು ಎ ಟೀಂ ಆದರೆ, ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್‌ ಅವರದ್ದು ಕಾಂಗ್ರೆಸ್‌ನ ಬಿ ಟೀಂ. ಇನ್ನು ಬಿಜೆಪಿಯಲ್ಲಿ ಇನ್ನು ಕೆಜೆಪಿ-ಬಿಜೆಪಿ ಮಿಲನ ಆಗಿಲ್ಲ. ಯಡಿಯೂರಪ್ಪ ಅವರಿಗೆ ಏಟು ಕೊಡಲು ಬಿಜೆಪಿಯವರೇ ಕಾಯುತ್ತಿದ್ದಾರೆ. ಇಂಥವರು ನೆಗೆಟಿವ್‌ ಕ್ಯಾಂಪೇನ್‌ ಮಾಡಿದರೆ ಜನ ನಂಬಬೇಕಲ್ಲ?

Advertisement

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ?
ಇದೆಲ್ಲಾ ಅವರಿಗಿರುವ ಏಳೂವರೆ ಶನಿಕಾಟದ ಪ್ರಭಾವ. ಅದಕ್ಕಾಗಿಯೇ ಈ ರೀತಿ ಹೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್‌.. ಹೀಗೆ ರಾಜ್ಯದ ಯಾವ ಕಾಂಗ್ರೆಸ್‌ ನಾಯಕರಾದರೂ ದೇವೇಗೌಡರ ಬಗ್ಗೆ ಮಾತನಾಡುತ್ತಾರಾ? ತನ್ನನ್ನು ಸೋಲಿಸುವುದು ಏನಿದ್ದರೂ ದೇವೇಗೌಡ ಮತ್ತು ಕುಮಾರಸ್ವಾಮಿ ಎಂಬ ಆತಂಕಕ್ಕೊಳಗಾಗಿರುವ ಸಿದ್ದರಾಮಯ್ಯ ಸೋಲಿನ ಭೀತಿಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ.

ಜೆಡಿಎಸ್‌ನ ಮತಬ್ಯಾಂಕ್‌ ಯಾವುದು?
ಹಿಂದೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ ಕುರುಬರೇ ಬಹುಪಾಲು ಅವರೊಂದಿಗಿಲ್ಲ. ಒಕ್ಕಲಿಗ ಸಮುದಾಯದವರು ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಂಡಿರುವುದರಿಂದ ದಲಿತರು ಜೆಡಿಎಸ್‌ ಜತೆ ಕೈಜೋಡಿಸುತ್ತಿದ್ದಾರೆ. ರಾಜ್ಯದಲ್ಲಿ ಶೇ.15ರಷ್ಟು ತೆಲುಗು ಭಾಷಿಕರಿದ್ದು, ತೆಲಂಗಾಣ ಮುಖ್ಯಮಂತ್ರಿಗಳ ಬೆಂಬಲದಿಂದ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವುದರಿಂದ ತೆಲುಗು ಭಾಷಿಕರ ಮತಗಳು ಜೆಡಿಎಸ್‌ಗೆ ಬರಲಿದೆ. ಅಸಾದುದ್ದೀನ್‌ ಓವೈಸಿ ಜೆಡಿಎಸ್‌ ಪರ ನಿಂತಿರುವುದರಿಂದ ಮುಸ್ಲಿಮರ ಮತಗಳು ಜೆಡಿಎಸ್‌ಗೆ ಬೀಳಲಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೇ ಟೀಕೆ ಮಾಡಲಿ, ಜೆಡಿಎಸ್‌ನ ಮುಸ್ಲಿಂ ಮತಬ್ಯಾಂಕ್‌ ಕುಸಿಯುವುದಿಲ್ಲ. ಹೀಗಾಗಿ ನಾವು 115 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ.

● ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next