ಶಿರಸಿ: ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರತಿಪಾದಿಸಿದರು.
ಗುರುವಾರ ಅವರು ಸೋದೆಯಲ್ಲಿ ನಡೆದ ಜ್ಞಾನೋತ್ಸವದ ಸಮಾರೋಪದ ಸಮಾರಂಭದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ಸನಾತನ ಎಂದರೆ ಯಾವಾಗಲೂ ಇರುವಂಥದ್ದು. ಧರ್ಮ ಎಂದರೆ ಕೋಮು ಅಲ್ಲ. ಧರ್ಮ ಶಬ್ಧಕ್ಕೆ ವಿಶಾಲ ಅರ್ಥವಿದೆ. ಕೆಳಗೆ ಬೀಳುತ್ತಿರುವರನ್ನು ಎತ್ತಿ ಹಿಡಿಯುವುದೇ ಧರ್ಮ. ನೈತಿಕತೆ, ಸಾಮಾಜಿಕವಾಗಿ, ಧಾರ್ಮಿಕವಾಗಿ ಬೀಳುವವರನ್ನು ಎತ್ತುತ್ತದೆ ಈ ಧರ್ಮ ಎಂದ ಅವರು, ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ಧರ್ಮಕ್ಕೆ ವ್ಯುತ್ಪತ್ತಿ ಇಲ್ಲ. ನಾಶವೂ ಇಲ್ಲ ಎಂದರು.
ಸನಾತನ ಧರ್ಮ ಭಾರತದ ಭವಿಷ್ಯಕ್ಕೆ ಸನಾತನ ಧರ್ಮ ಅನಿವಾರ್ಯವೇ ಎಂಬ ವಿಷಯದಲ್ಲಿ ಮಾತನಾಡಿದ
ವಾಗ್ಮಿ ರೋಹಿತ್ ಚಕ್ರತೀರ್ಥ ಮಾತನಾಡಿ, ಎಲ್ಲರನ್ನೂ ಸಮಾನರನ್ನಾಗಿ ಕಾಣುವ, ಸಹೋದರತೆ ಬೆಳೆಸುವ, ಅಗತ್ಯ ಕಡಿಮೆ ಮಾಡಿ ನೆಮ್ಮದಿ ಸಂತೋಷ ಕೊಡುವುದೇ ಸನಾತನ ಧರ್ಮ. ಸನಾತನ ಧರ್ಮ ಇಲ್ಲದಿದ್ದರೆ ಭವಿಷ್ಯದ ಭಾರತ ಮಾತ್ರವಲ್ಲ, ವರ್ತಮಾನ ಭಾರತವೂ ಇರಲು ಸಾಧ್ಯವಿಲ್ಲ. ಭವಿಷ್ಯದ ಭಾರತಕ್ಕೆ ಸನಾತನ ಧರ್ಮವೇ ಉತ್ತರ ಎಂದು ಪ್ರತಿಪಾದಿಸಿದರು.
ಸರಿಯಾದ ದಾರಿಯಲ್ಲಿ ತೆರಳು ಎಲ್ಲರಲ್ಲೂ ಸಮಾನರಾಗಿ ಕಾಣುವುದು ಸನಾತನ ಧರ್ಮ. ಸರಿಯಾದ ದಾರಿಯಲ್ಲಿ ತೆರಳುವ ಮಾರ್ಗದರ್ಶಿ. ಎಲ್ಲರೂ ಒಟ್ಟಾಗಿ ನಡೆಯೋಣ, ಒಂದಾಗಿ ಇರುವ ಸಂಸ್ಕೃತಿ ಇದ್ದರೆ ಅದು ಭಾರತದ ಸನಾತನ ಪರಂಪರೆ ಕಾರಣ. ಜಗತ್ತಿನಲ್ಲಿ ನಾವೆಲ್ಲರೂ ಒಂದೇ ಎಂದು ಬೋಧಿಸುವ ಧರ್ಮ ಸನಾತನ ಧರ್ಮ. ಅವರವರ ರೀತಿಯಲ್ಲಿ ಬದುಕಲು ವ್ಯವಸ್ಥೆ ನೀಡಿದ್ದು ಇದು ಎಂದರು.ಪಾಂಡುರಂಗ ಆಚಾರ್ಯ ನಿರ್ವಹಿಸಿದರು.