ವಿಶ್ವಸಂಸ್ಥೆ: ಹಮಾಸ್ ನಿಯಂತ್ರಣದಲ್ಲಿರುವ ಗಾಜಾಪಟ್ಟಿ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್ ಪಡೆಯ ನಡೆಯ ಬಗ್ಗೆ ಕಿಡಿಕಾರಿರುವ ವಿಶ್ವಸಂಸ್ಥೆ ಮುಖ್ಯಸ್ಥ ಆ್ಯಂಟನಿಯೋ ಗ್ಯುಟೆರಸ್, ಇನ್ನೂ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಯುದ್ಧದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Tiger Claw: ಹುಲಿ ಉಗುರು ಪ್ರಕರಣ… ಯಾರೇ ಇರಲಿ ಕಾನೂನಿನಂತೆ ಕ್ರಮ: ಈಶ್ವರ ಖಂಡ್ರೆ
ಬ್ರೆಜಿಲ್ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಭದ್ರತಾ ಮಂಡಳಿಯ ಸಚಿವರ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್, ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಸಚಿವ ಎಲಿ ಕೋಹೆನ್, ಪ್ಯಾಲೇಸ್ತೇನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಲಿಕಿ, ಬ್ರೆಜಿಲ್ ವಿದೇಶಾಂಗ ಸಚಿವ ಮೌರೊ ವಿಯೇರಾ, ಫ್ರಾನ್ಸ್ ನ ಯುರೋಪ್ ವಿದೇಶಾಂಗ ಸಚಿವೆ ಕ್ಯಾಥರಿನ್ ಕೋಲೊನ್ನಾ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
ಇಸ್ರೇಲ್ ಪಡೆ ಗಾಜಾದಲ್ಲಿ ಬಾಂಬ್ ದಾಳಿಯಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದು, ಇದು ಅಂತಾರಾಷ್ಟ್ರೀಯ ಮಾನವೀಯತೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದೊಂದು ಕಳವಳಕಾರಿ ವಿಷಯವಾಗಿದೆ ಎಂದು ಗ್ಯುಟೆರಸ್ ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಯುದ್ಧದಲ್ಲಿ ಯಾರೂ ಕೂಡ ಅಂತಾರಾಷ್ಟ್ರೀಯ ಮಾನವೀಯತೆ ಕಾಯ್ದೆಗಿಂತ ಮೇಲಲ್ಲ. ಕಾನೂನಿನಿಗಿಂತ ಯಾರೂ ಮಿಗಿಲಲ್ಲ ಎಂದು ಗ್ಯುಟೆರಸ್ ಇಸ್ರೇಲ್ ಗೆ ಸಂದೇಶ ರವಾನಿಸಿದ್ದಾರೆ.
ವಿಶ್ವಸಂಸ್ಥೆಯ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಇಸ್ರೇಲ್ ನ ವಿಶ್ವಸಂಸ್ಥೆ ರಾಯಭಾರಿ ಗಿಲಾಡ್ ಎರ್ಡಾನ್, ಗ್ಯುಟೆರಸ್ ಹೇಳಿಕೆ ಆಘಾತಕಾರಿಯಾಗಿದೆ. ಇಂತಹ ಸಂದೇಶ ರವಾನಿಸಿರುವ ಗ್ಯುಟೆರಸ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ತಿರುಗೇಟು ನೀಡಿರುವುದಾಗಿ ರಾಯ್ಟಿರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.