ಬೆಂಗಳೂರು: ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್ ಅವರ ಬಳಸುತ್ತಿದ್ದ ಸಂಸದರ ಕಚೇರಿಯ ಬದಲಿಗೆ ತನಗೆ ಹೊಸ ಕಚೇರಿ ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು, ಸಂಸದರಿಗೆ ಕಚೇರಿ ನೀಡುವ ಅಧಿಕಾರ ಪಾಲಿಕೆಗಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಜಯನಗರ ಸೌತ್‌ಎಂಡ್ ವೃತ್ತದಲ್ಲಿ ಕೇಂದ್ರ ಮಾಜಿ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರಿಗೆ ಸಂಸದರ ಕಚೇರಿಯನ್ನು ಪಾಲಿಕೆಯ ಕಟ್ಟಡದಲ್ಲಿ ನೀಡಲಾಗಿದೆ. ಆದರೆ, ತೇಜಸ್ವಿ ಸೂರ್ಯ ಅವರು, ತನಗೆ ಅನಂತಕುಮಾರ್ ಅವರಿಗೆ ನೀಡಿದ ಸಂಸದರ ಕಚೇರಿ ಬೇಡ, ಜಯನಗರದ ಶಾಲಿನಿ ಗ್ರೌಂಡ್ಸ್ ಎದುರಿನ ಪಾಲಿಕೆಯ ಕಟ್ಟಡದಲ್ಲಿ ಕಚೇರಿ ನೀಡುವಂತೆ ಪತ್ರ ಬರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಸಂಸದರು, ರಾಜ್ಯಸಭಾ ಸದಸ್ಯರಿಗೆ ರಾಜ್ಯ ಸರ್ಕಾರವೇ ಕಚೇರಿಯನ್ನು ನೀಡುತ್ತದೆ. ಆದರೆ, ತೇಜಸ್ವಿ ಸೂರ್ಯ ಅವರು ಪಾಲಿಕೆಯ ಕಟ್ಟಡದಲ್ಲಿ ಕಚೇರಿ ನೀಡುವಂತೆ ಪತ್ರ ಬರೆದಿದ್ದು, ಪಾಲಿಕೆಗೆ ಕಚೇರಿ ನೀಡುವ ಅಧಿಕಾರವಿಲ್ಲ. ಹೀಗಾಗಿ ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಂಸದರು ಕೇಳುತ್ತಿರುವ ಕಟ್ಟಡದ ಹಿನ್ನೆಲೆ: ಜಯನಗರದ ಶಾಲಿ ಮೈದಾನಗಳ ಮುಂದಿರುವ ಪಾಲಿಕೆಯ ಕಟ್ಟಡವನ್ನು ಶಿಕ್ಷಣ ಟ್ರಸ್ಟ್‌ಗೆ ಐದು ವರ್ಷಗಳ ಭೋಗ್ಯಕ್ಕೆ ನೀಡಲಾಗಿತ್ತು. ಇದೀಗ ಐದು ವರ್ಷಗಳು ಮುಗಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ಪಾಲಿಕೆಗೆ ಹಸ್ತಾಂತರ ಮಾಡುವಂತೆ ಟ್ರಸ್ಟ್‌ಗೆ ನೋಟಿಸ್ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಟ್ರಸ್ಟ್ ನ್ಯಾಯಾಲಯದ ಮೆಟ್ಟಿರೇಲಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಾನೂನಿನ ಪ್ರಕಾರ ಕ್ರಮಕೈಗೊಳ್ಳುವಂತೆ ಪಾಲಿಕೆಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಕಟ್ಟಡ ಪಡೆಯುವುದರ ಹಿಂದಿನ ಉದ್ದೇಶವೇನು?: ಪಾಲಿಕೆಯ ಕಟ್ಟಡವನ್ನು ಭೋಗ್ಯಕ್ಕೆ ಪಡೆದಿರುವ ಶಿಕ್ಷಣ ಟ್ರಸ್ಟ್ ಬಿಜೆಪಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಇದೇ ಕಾರಣದಿಂದ ಹಿಂದೆ ಶಾಕಸರಾಗಿದ್ದ ವಿಜಯಕುಮಾರ್ ಅವರು ಕಟ್ಟಡವನ್ನು ಟ್ರಸ್ಟ್‌ಗೆ ಕೊಡಿಸಿದ್ದರು. ಆದರೀಗ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ಹಿಂಪಡೆಯುವ ಪ್ರಯತ್ನಗಳು ನಡೆದಿವೆ. ಆ ಹಿನ್ನೆಲೆಯಲ್ಲಿ ಟ್ರಸ್ಟ್‌ಗೆ ಸಹಾಯ ಮಾಡುವ ಉದ್ದೇಶದಿಂದ ನೂತನ ಸಂಸದರು ಇದೇ ಕಟ್ಟಡದಲ್ಲಿ ತಮಗೆ ಕಚೇರಿ ನೀಡುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.