Advertisement

Udupi ಮತ್ಸ್ಯಾಶ್ರಯದಡಿ ಹೊಸ ಮನೆ ಬಂದಿಲ್ಲ

12:05 AM Dec 26, 2023 | Team Udayavani |

ಉಡುಪಿ: ವಸತಿ ರಹಿತ ಅಥವಾ ವಾಸಿಸಲು ಯೋಗ್ಯ ಮನೆ ಇಲ್ಲದ ಮೀನುಗಾರರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಇರುವ ಮತ್ಸ್ಯಾಶ್ರಯ ಯೋಜನೆಯಡಿ ಈ ಸಾಲಿನಲ್ಲಿ ಒಂದೂ ಮನೆ ಮಂಜೂರಾಗಿಲ್ಲ. ಬದಲಿಗೆ ಈ ಹಿಂದಿನ ವರ್ಷಗಳಲ್ಲಿ ಹಂಚಿಕೆಯಾಗದ ಮನೆಗಳ ಮರು ಹಂಚಿಕೆಗೆ ರಾಜ್ಯ ಸರಕಾರ ಮುಂದಾಗಿದೆ.

Advertisement

2006ರಲ್ಲಿ ಯೋಜನೆ ಆರಂಭಗೊಂಡಿದ್ದು, ತಾಂತ್ರಿಕ ಕಾರಣದಿಂದ ಸರಕಾರ ಮತ್ತು ಮೀನು ಗಾರಿಕೆ ಇಲಾಖೆಯು ಮತ್ಸ್ಯಾಶ್ರಯ ಯೋಜನೆಯಡಿ ವಾರ್ಷಿಕ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿಲ್ಲ. ಹಾಗಾಗಿ 2020-2021, 2021-22 ನೇ ಸಾಲಿನಲ್ಲಿ ಮನೆಯನ್ನು ಹಂಚಿಕೆ ಮಾಡಿರಲಿಲ್ಲ. 2022-23ರಲ್ಲಿ ಅವಿಭ ಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತವಾಗಿ ರಾಜ್ಯಾದ್ಯಂತ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ ಉಡುಪಿಗೆ 725 ಹಾಗೂ ದ.ಕ. ಜಿಲ್ಲೆಗೆ 450 ಮನೆ ಹಂಚಿಕೆ ಮಾಡಲಾಗಿತ್ತು.

ಪ್ರತೀ ವಿಧಾನಸಭಾ ಕ್ಷೇತ್ರದಿಂದಲೂ ಈ ಯೋಜನೆಯಡಿ ಮನೆಗಳಿಗೆ ಬೇಡಿಕೆಯಿದೆ. ಆದರೆ ಸರಕಾರದಿಂದ 2023-24ನೇ ಸಾಲಿಗೆ ಮನೆ ಹಂಚಿಕೆ ಮಾಡದ ಕಾರಣ ಎಲ್ಲ ಅರ್ಜಿಗಳು ಶಾಸಕರ ಕಚೇರಿ ಹಾಗೂ ಮೀನುಗಾರಿಕೆ ಇಲಾಖೆ ಯಲ್ಲೇ ಬಾಕಿಯಾಗಿವೆ.

ಮರು ಹಂಚಿಕೆ
2018 – 19ರಿಂದ 2022-23ನೇ ಸಾಲಿನವರೆಗೂ ಹಂಚಿಕೆ ಯಾಗಿರುವ / ಆಗದೆ ಉಳಿದಿರುವ ಮನೆಗಳ ಮಾಹಿತಿಯನ್ನು ಮೀನುಗಾರಿಕೆ ಇಲಾಖೆಯು ಜಿಲ್ಲಾ ಕೇಂದ್ರಗ ಳಿಂದ ಸರಕಾರ ಪಡೆಯುತ್ತಿದೆ. 2022-23ನೇ ಸಾಲಿಗೆ ಉಡುಪಿ ಜಿಲ್ಲೆಗೆ ಹಂಚಿಕೆಯಾದ 725 ಮನೆಗಳಲ್ಲಿ 325 ಮನೆ ಹಂಚಿಕೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 450 ಮನೆಗಳಲ್ಲಿ ಸುಮಾರು 150 ಮನೆಗಳು ಹಂಚಿಕೆಯಾಗಿಲ್ಲ.

ತಾಂತ್ರಿಕ ಸಮಸ್ಯೆ
2020-21ರ ಮೊದಲು ಮೀನುಗಾರಿಕೆ ಇಲಾಖೆಯಿಂದ ಮಂಜೂರಾಗುತ್ತಿದ್ದ ಮನೆಗಳನ್ನು ಮೀನುಗಾರಿಕೆ
ಅಭಿವೃದ್ಧಿ ನಿಗಮದ ಮೂಲಕವೇ ಅನುಷ್ಠಾನ ಗೊಳಿಸಲಾಗುತ್ತಿತ್ತು. ಇದಕ್ಕಾಗಿ ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದ ಸಮಿತಿಯು ಫ‌ಲಾನುಭವಿಗಳನ್ನು ಆಯ್ಕೆ ಮಾಡುತ್ತಿತ್ತು. 2020- 21ನೇ ಸಾಲಿನಲ್ಲಿ ಮನೆ ನಿರ್ಮಾಣದ ಹೊಣೆಯನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ವಹಿಸಿದ್ದರಿಂದ ಶಾಸಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ 2 ವರ್ಷ ಮನೆ ಹಂಚಿಕೆಯಾಗಿಲ್ಲ. 2022-23ನೇ ಸಾಲಿನಲ್ಲಿ ಮತ್ತೆ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕವೇ ಮನೆ ಹಂಚಿಕೆಗೆ ಸರಕಾರ ಆದೇಶಿಸಿ, ಮನೆ ಹಂಚಿಕೆ ಮಾಡಿತ್ತು.

Advertisement

ಅನುದಾನವೆಷ್ಟು?
ಮತ್ಸ್ಯಾಶ್ರಯದಡಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ಫ‌ಲಾನುಭವಿಗಳ ಆಯ್ಕೆ ಬಳಿಕ ಇಲಾಖೆ/ ನಿಗಮದಿಂದ ಪ್ರತೀ ಫ‌ಲಾನುಭವಿ ಗಳಿಗೆ ಹಂತ ಹಂತವಾಗಿ ಅನುದಾನ ಮಂಜೂರು ಮಾಡಲಾಗುತ್ತದೆ. ಗ್ರಾಮೀಣ ಫ‌ಲಾನುಭವಿಗಳಿಗೆ 1.75 ಲಕ್ಷ ಹಾಗೂ ನಗರ ಪ್ರದೇಶ ಫ‌ಲಾನುಭವಿಗಳಿಗೆ 2 ಲಕ್ಷ ರೂ. ನೀಡಲಾಗುತ್ತದೆ. ಈ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಏರಿಸಬೇಕು ಎಂಬ ಬೇಡಿಕೆಯೂ ಇದೆ.

ಮತ್ಸ್ಯಾಶ್ರಯ ಮನೆ ಹಂಚಿಕೆಗೆ ಇರುವ ತಾಂತ್ರಿಕ ತೊಡಕು ನಿವಾರಿಸಲಾಗಿದೆ. ಉಳಿಕೆ ಮನೆಗಳ ಮರುಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ.
– ಮಂಕಾಳ ವೈದ್ಯ, ಮೀನುಗಾರಿಕೆ ಮತ್ತು ಬಂದರು ಸಚಿವ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next