Advertisement

ದಕ್ಷಿಣ ಕನ್ನಡ., ಕಾಸರಗೋಡು ಜಿಲ್ಲೆಗಳಲ್ಲಿ ಹೊಸ ಕೋವಿಡ್ ಸೋಂಕು ಪ್ರಕರಣ ಇಲ್ಲ

12:51 AM May 20, 2020 | Hari Prasad |

ಮಂಗಳೂರು/ಕಾಸರಗೋಡು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ.

Advertisement

ಮಂಗಳೂರಿನಲ್ಲಿ ಇಂದು ಪರೀಕ್ಷೆ ನಡೆಸಿದ ಎಲ್ಲ 97 ಮಾದರಿಗಳ ವರದಿಯೂ ನೆಗೆಟಿವ್‌ ಆಗಿವೆ.

267 ಮಂದಿಯ ಗಂಟಲ ದ್ರವ ಮಾದರಿಯನ್ನು ಹೊಸದಾಗಿ ಮಂಗಳವಾರ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 299 ವರದಿಗಳು ಬರಲು ಬಾಕಿ ಇವೆ.

230 ಮಂದಿಯನ್ನು ಹೊಸದಾಗಿ ತಪಾಸಣೆಗೊಳಪಡಿಸಲಾಗಿದ್ದು, 13 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 7 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 14 ಮಂದಿ ಪ್ರಸ್ತುತ ಸುರತ್ಕಲ್‌ನಲ್ಲಿ ಹಾಗೂ 14 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಬಾರೆಬೈಲ್‌ ಸೀಲ್‌ಡೌನ್‌
ಯೆಯ್ಯಾಡಿಯ ಮಹಿಳೆಗೆ ಸೋಮವಾರ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಾರೆಬೈಲ್‌ ಪ್ರದೇಶವನ್ನು ಸೀಲ್‌ಡೌನ್‌ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ.

Advertisement

14 ಮನೆಗಳ 48 ಮಂದಿ ಸೀಲ್‌ಡೌನ್‌ ಪ್ರದೇಶಕ್ಕೆ ಒಳಪಡಲಿದ್ದಾರೆ. ಈ ಪ್ರದೇಶದಿಂದ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್‌ ಝೋನ್‌ ಎಂದು ಗುರುತಿಸಲಾಗಿದ್ದು, 14 ಮನೆಗಳು, 4,748 ಅಂಗಡಿ ಮತ್ತು ಕಚೇರಿಗಳು ಸೇರಿದಂತೆ ಒಟ್ಟು 1,24,000 ಮಂದಿ ಈ ವ್ಯಾಪ್ತಿಗೊಳಪಡಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಕಾರಿ ಅಭಿಯಂತರನ್ನು ಇನ್ಸಿಡೆಂಟ್‌ ಕಮಾಂಡರ್‌ ಆಗಿ ನೇಮಿಸಲಾಗಿದೆ.

ಕಾಸರಗೋಡು: ಹೊಸ ಪ್ರಕರಣ ಇಲ್ಲ
ಕೇರಳ ರಾಜ್ಯದಲ್ಲಿ ಮಂಗಳವಾರ 12 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ವರದಿಯಾಗಿಲ್ಲ.

ಕಣ್ಣೂರು – 5, ಮಲಪ್ಪುರಂ – 3, ತೃಶ್ಶೂರು, ಪಾಲ್ಗಾಟ್‌, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ರೋಗ ಬಾಧಿಸಿದೆ. ಅವರಲ್ಲಿ ನಾಲ್ವರು ವಿದೇಶದಿಂದ ಬಂದವರು, ಮಹಾರಾಷ್ಟ್ರದಿಂದ ಬಂದ 6 ಮಂದಿ, ಗುಜರಾತ್‌ ಮತ್ತು ತಮಿಳುನಾಡಿನಿಂದ ಬಂದ ತಲಾ ಒಬ್ಬರಿದ್ದಾರೆ.

2,374 ಮಂದಿ ನಿಗಾದಲ್ಲಿ
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2,374 ಮಂದಿ ನಿಗಾದಲ್ಲಿದ್ದಾರೆ. 196 ಮಂದಿಯ ಸ್ಯಾಂಪಲ್‌ ಪರೀಕ್ಷೆಯ ವರದಿ ಬರಲು ಬಾಕಿಯಿದೆ. ಮಂಗಳವಾರ ಹೊಸದಾಗಿ ಶಂಕಿತ 33 ಮಂದಿಯನ್ನು ಐಸೊಲೇಶನ್‌ ವಾರ್ಡ್‌ಗೆ ದಾಖಲಿಸಲಾಗಿದೆ.

10 ಪ್ರಕರಣ ದಾಖಲು
ಲಾಕ್‌ಡೌನ್‌ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 15 ಮಂದಿಯನ್ನು ಬಂಧಿಸಿ, 4 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೆನ್ಲಾಕ್‌ ದರದಲ್ಲೇ ಚಿಕಿತ್ಸೆ ನೀಡಿ
ಜಿಲ್ಲೆಯಲ್ಲಿ ವೆನ್ಲಾಕ್‌ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಲಾಗಿದ್ದು, ಈ ಮೊದಲು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ವೆನ್ಲಾಕ್‌ ಆಸ್ಪತ್ರೆ ದರದಲ್ಲೇ ಚಿಕಿತ್ಸೆ ದೊರಕಬೇಕು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ವೆನ್ಲಾಕ್‌ನಲ್ಲಿ ಒಟ್ಟು 32 ಮಂದಿ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಉತ್ತಮವಾಗಿದೆ. ಕುಟುಂಬದೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ ಹಾಗೂ ರೋಗಿಯ ಕೌನ್ಸೆಲರ್‌ಗಳು ಕುಟುಂಬದವರಿಗೆ ರೋಗಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಚಂದ್ರ ಬಾಯರಿ ಅವರು ಸಚಿವರಿಗೆ ತಿಳಿಸಿದರು.

ಮಣಿಪಾಲದ ಪ್ರಯೋಗಾಲಯ 24 ಗಂಟೆ ಕಾರ್ಯನಿರ್ವಹಣೆ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಂಗಳವಾರ ಆರಂಭಗೊಂಡಿದೆ. ಪ್ರಯೋಗಾಲಯವು 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ.  ಕೆಎಂಸಿ ಆಸ್ಪತ್ರೆ ಪ್ರಯೋಗಾಲಯವು ಉಡುಪಿ ಜಿಲ್ಲೆಯಲ್ಲಿ ಸರಕಾರಿ ಅಥವಾ ಖಾಸಗಿ ವಲಯದಲ್ಲಿ ಕೋವಿಡ್‌ 19 ಪರೀಕ್ಷೆಗೆ ಅನುಮೋದನೆ ಪಡೆದ ಮೊದಲ ಆಸ್ಪತ್ರೆ.

ಇದು ಮಂಗಳೂರು ಮತ್ತು ಶಿವಮೊಗ್ಗದಲ್ಲಿನ ಪರೀಕ್ಷಾ ಕೇಂದ್ರದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಆಸ್ಪತ್ರೆಗೆ ಬರುವ ಪ್ರತೀ ರೋಗಿಗೆ ಆಧಾರ್‌ ಸಂಖ್ಯೆ ಕಡ್ಡಾಯವಾಗಿದ್ದು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಮತ್ತು ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next