Advertisement
ಮುಖ್ಯವಾಗಿ ನೂತನ ಸಚಿವರು ಹಾಗೂ ನಿಗಮ ಮಂಡಳಿ ಅಧ್ಯಕ್ಷರಿಗೆ ಹೊಸ ವಾಹನ ಖರೀದಿ, ಸಚಿವಾಲಯಗಳಲ್ಲಿರುವ ಅನಗತ್ಯ ಸಿಬ್ಬಂದಿ ಕಡಿತ, ಶಾಸಕರ ಭವನ, ವಿಧಾನಸೌಧದ ಕೊಠಡಿಗಳಲ್ಲಿ ನವೀಕರಣದ ಹೆಸರಿನಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡುವುದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿದೇಶ ಪ್ರವಾಸಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದಾರೆ.
Related Articles
ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಪ್ರಕ್ರಿಯೆಯನ್ನು ತಮ್ಮಿಂದಲೇ ಚಾಲನೆ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಈಗಾಗಲೇ ತಮ್ಮ ಮನೆಯನ್ನೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಮಾಡಿಕೊಂಡು ಸರ್ಕಾರದ ನಿವಾಸ ತಿರಸ್ಕರಿಸಿರುವ ಕುಮಾರಸ್ವಾಮಿ, ತಮಗಾಗಲೀ, ಸಚಿವಾಲಯದ ಸಿಬ್ಬಂದಿಗಾಗಲೀ ಹೊಸ ವಾಹನ ಖರೀದಿಸುವುದು ಬೇಡ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ, ತಮ್ಮ ಭದ್ರತೆಗೂ ಹೆಚ್ಚಿನ ಸಿಬ್ಬಂದಿ ಬೇಡ ಎಂದು ಹೇಳಿದ್ದಾರೆ.
Advertisement
ಹೊರಗುತ್ತಿಗೆಗೆ ಕಡಿವಾಣಸರ್ಕಾರದ ಕೆಲವು ಇಲಾಖೆಗಳಲ್ಲಿ ಸಾಕಷ್ಟು ಖಾಲಿ ಹುದ್ದೆಗಳಿವೆ. ಆದರೆ, ಇವುಗಳನ್ನು ಭರ್ತಿ ಮಾಡದ ಕಾರಣ ಹೊರಗುತ್ತಿಗೆ ಮೂಲಕ ಸಿಬ್ಬಂದಿ ನೇಮಿಸಿ ಅವರಿಂದ ಕೆಲಸ ಪಡೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಬ್ಬರು ನಿರ್ವಹಿಸಬಹುದಾದ ಕೆಲಸಗಳಿಗೆ ಇಬ್ಬರು ಅಥವಾ ಮೂವರನ್ನು ನೇಮಿಸಿಕೊಂಡು ಅವರಿಂದ ಸ್ವಂತ ಕೆಲಸಗಳನ್ನು ಮಾಡಿಕೊಳ್ಳುವುದು ಕೂಡ ಇದೆ. ಇದರಿಂದಾಗಿ ಸರ್ಕಾರಕ್ಕೆ ಹೊರೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಅಧಿಕಾರಿಗಳು ಸರ್ಕಾರಿ ವಾಹನ ಚಾಲಕರನ್ನು ನೇಮಿಸಿಕೊಳ್ಳದೆ ಹೊರಗುತ್ತಿಗೆ ಆಧಾರದ ಮೇಲೆ ತಮಗೆ ಬೇಕಾದ ಚಾಲಕರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಿ ವಾಹನ ಚಾಲಕರು ತಮಗೆ ವಾಹನಗಳಿಲ್ಲದೆ ದಿನನಿತ್ಯ ಕಚೇರಿಗೆ ಬಂದುಹೋಗುವುದಷ್ಟನ್ನೇ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಕಡಿವಾಣ ಹಾಕುವ ಉದ್ದೇಶದಿಂದ ಅಗತ್ಯವಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಅನಗತ್ಯವಾಗಿ ಹೊರಗುತ್ತಿದೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಹೆಚ್ಚುತ್ತಿರುವ ಯೋಜನೇತರ ವೆಚ್ಚ
ಯೋಜನೇತರ ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರತಿ ವರ್ಷ ಹೇಳಲಾಗುತ್ತಿದೆಯಾದರೂ ವರ್ಷ ಕಳೆದಂತೆ ಯೋಜನೆತರ ವೆಚ್ಚದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆಯೇ ಹೊರತು ಇಳಿಕೆ ಕಂಡುಬರುತ್ತಿಲ್ಲ. 2014-15ರಲ್ಲಿ 73,629 ಕೋಟಿ ರೂ. ಇದ್ದ ಯೋಜನೆತರ ವೆಚ್ಚ 2015-16ರಲ್ಲಿ 75,840 ಕೋಟಿ ರೂಗೆ ಏರಿತ್ತು. 2016-17ರಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ 84,883 ಕೋಟಿ ರೂ. ತಲುಪಿತ್ತು. 2017-18ರಲ್ಲಿ 90 ಸಾವಿರ ಕೋಟಿ ರೂ. ದಾಟಿತ್ತು. ಈ ವೆಚ್ಚಗಳಿಗೆ ಕಡಿವಾಣ ಹಾಕಿದರೆ ವಾರ್ಷಿಕ 10 ಸಾವಿರ ಕೋಟಿ ರೂ. ಉಳಿಸಬಹುದು ಎಂಬ ಲೆಕ್ಕಾಚಾರವಿದೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯೋಜನೇತರ ವೆಚ್ಚಗಳಿಗೆ ನಿರ್ಬಂಧ ವಿಧಿಸಲು ಮುಂದಾಗಿದ್ದಾರೆ. ಅಧಿಕಾರಿಗಳ “ಕಾರು’ಬಾರಿಗೂ ಕಡಿವಾಣ
ಪ್ರಮುಖವಾಗಿ ಅಧಿಕಾರಿಗಳ “ಕಾರು’ಬಾರುಗಳಿಗೂ ಕಡಿವಾಣ ಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಚಿಂತನೆ ನಡೆಸಿದ್ದಾರೆ. ಸರ್ಕಾರದ ಉನ್ನತಾಧಿಕಾರಿಗಳಿಗೆ ಸರ್ಕಾರದಿಂದ ಒಂದು ಅಥವಾ ಎರಡು ವಾಹನ ನೀಡಲಾಗುತ್ತದೆ. ಆದರೆ, ಅನೇಕ ಅಧಿಕಾರಿಗಳು ಸರ್ಕಾರ ನೀಡಿದ ವಾಹನದ ಜತೆಗೆ ಇಲಾಖೆಗಳಿಗೆ ಸಂಬಂಧಿಸಿದ ನಿಗಮಗಳಿಂದ ಹೆಚ್ಚುವರಿ ವಾಹನಗಳನ್ನು ಪಡೆದು ತಮ್ಮ ಕುಟುಂಬದ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೆಲವು ಸರ್ಕಾರಿ ವಾಹನಗಳು ಅಧಿಕಾರಿಗಳ ಮನೆ ಬಳಿಯೇ ನಿಂತು ಕುಟುಂಬದವರ ಓಡಾಟಕ್ಕೆ ಮಾತ್ರ ಬಳಕೆಯಾಗುತ್ತವೆ. ಕೆಲವೊಂದು ಸಂದರ್ಭದಲ್ಲಿ ಇಲಾಖೆಗೆ ಹೊಸ ಮುಖ್ಯಸ್ಥ ಬಂದ ಕೂಡಲೇ ಅವರು ತಮ್ಮ ಹಳೆಯ ವಾಹನ ಬಿಟ್ಟು ಹೊಸ ವಾಹನ ಖರೀದಿಸುತ್ತಾರೆ. ಇನ್ನು ಕೆಲವು ಅಧಿಕಾರಿಗಳಿಗೆ ವಾಹನ ಸೌಲಭ್ಯ ಇಲ್ಲದಿದ್ದರೂ ಬಾಡಿಗೆ ವಾಹನಗಳನ್ನು ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ತಾವೇ ಕಾರು ಖರೀದಿಸಿ ಅದನ್ನು ಬಾಡಿಗೆ ಆಧಾರದಲ್ಲಿ ಬಳಸಿಕೊಂಡು ಬೊಕ್ಕಸದಿಂದ ಹಣ ಪಡೆಯುತ್ತಿದ್ದಾರೆ. ಇವೆಲ್ಲಕ್ಕೂ ಕಡಿವಾಣ ಹಾಕಿ ನಿಯಮಾನುಸಾರ ಅಧಿಕಾರಿಗಳಿಗೆ ಒದಗಿಸಲು ಮತ್ತು ವಾಹನ ಸೌಲಭ್ಯ ಇಲ್ಲದ ಅಧಿಕಾರಿಗಳಿಗೆ ವಾಹನ ಒದಗಿಸದೇ ಇರಲು ಕೂಡ ಮುಖ್ಯಮಂತ್ರಿಗಳು ಯೋಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವೆಚ್ಚ ಕಡಿವಾಣಕ್ಕೆ ದಾರಿಗಳು
– ಸರ್ಕಾರಿ ಕಚೇರಿಗಳಲ್ಲಿ ಆಡಂಬರ ಮತ್ತು ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು. ಕಟ್ಟಡಗಳ ನಿರ್ವಹಣೆ, ಕಚೇರಿ ಸಾಧನ ಸಾಮಗ್ರಿಗಳು, ಸಾರಿಗೆ ಸಂಪರ್ಕ, ರಕ್ಷಣೆ, ಪೀಠೊಪಕರಣ, ಶಿಷ್ಟಾಚಾರದ ವೆಚ್ಚಗಳನ್ನು ಕಡಿತಗೊಳಿಸುವುದು.
– ರಾಜ್ಯದ ಅನುದಾನದಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿದೇಶಿ ಪ್ರವಾಸ ವೆಚ್ಚವನ್ನು ಭರಿಸುವಂತಿದ್ದರೆ ಅದಕ್ಕೆ ನಿರ್ಬಂಧ ಹೇರುವುದು. ವಿಮಾನ ಪ್ರಯಾಣಕ್ಕೆ ಆದಷ್ಟು ಕಡಿವಾಣ ಹಾಕುವುದು. ವಿಮಾನದಲ್ಲಿ ಪ್ರಯಾಣಿಸಲೇ ಬೇಕಾದರೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವುದು.
– ತುರ್ತು ಸಂದರ್ಭ ಹೊರತುಪಡಿಸಿ ಯಾವುದೇ ಹೊಸ ಹುದ್ದೆಗಳನ್ನು ಸೃಜಿಸಬಾರದು. ಇರುವ ಖಾಲಿ ಹುದ್ದೆಗಳಿಗೆ ಅಗತ್ಯವಾದರೆ ಮಾತ್ರ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಹುದ್ದೆಗಳನ್ನು ಸೃಜಿಸಬೇಕಾದರೆ ಆರ್ಥಿಕ ಇಲಾಖೆ ಗಮನಕ್ಕೆ ತಂದು ಒಪ್ಪಿಗೆ ಪಡೆಯುವುದು.
– ಎಲ್ಲಾ ಇಲಾಖೆಗಳು ತಮ್ಮ ಯೋಜನೇತರ ವೆಚ್ಚದಲ್ಲಿ ಶೇ. 10ರಷ್ಟು ಕಡಿತ ಸಾಧಿಸಲು ಅಗತ್ಯ ಕ್ರಮ. ತಾರಾ ಹೋಟೆಲ್‌ಗಳಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಅದ್ದೂರಿ ಸಮಾರಂಭಗಳಿಗೆ ಕಡಿವಾಣ ಹಾಕುವುದು.
– ಇಲಾಖೆಗಳಲ್ಲಿ ವಾಹನಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಿ ವಾಹನಗಳಿಗೆ ಇಂಧನ ಖರೀದಿಸಲು ವಾರ್ಷಿಕ ಇಂತಿಷ್ಟು ಎಂದು ಆಯವ್ಯಯ ನಿಗದಿಪಡಿಸುವುದು. ಹೊಸ ವಾಹನಗಳ ಖರೀದಿಗೆ ನಿರ್ಬಂಧ ಹೇರುವುದು.