Advertisement

ಮಂಗನಕಾಯಿಲೆ ನಿಯಂತ್ರಣದಲ್ಲಿದ್ದು ಆತಂಕ ಬೇಡ

10:27 AM May 05, 2022 | Team Udayavani |

ಸಿದ್ದಾಪುರ: ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಈಗಾಗಲೇ ಆರೋಗ್ಯ ಇಲಾಖೆ, ತಾಲೂಕು ಆಡಳಿತದ ನೇತೃತ್ವದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಿದ್ದು ಯಾರೂ ಆತಂಕ ಪಡಬೇಕಿಲ್ಲ. ಕಾಯಿಲೆ ನಿಯಂತ್ರಣದಲ್ಲಿದ್ದರೂ ಮುನ್ನೆಚ್ಚರಿಕೆ ವಹಿಸಲು ಎಲ್ಲ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗನ ಕಾಯಿಲೆ ಕುರಿತು ಮುನ್ನೆಚ್ಚರಿಕೆ ಹಾಗೂ ಕಾಯಿಲೆ ತಡೆ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಜನವರಿಯಿಂದ ಈ ವರಗೆ ತಾಲೂಕಿನಲ್ಲಿ 28,234 ಜನರಿಗೆ ಕೆಎಫ್‌.ಡಿ.ಲಸಿಕೆ ನೀಡಲಾಗಿದೆ. ಅಗತ್ಯವುಳ್ಳ ತೈಲ, ಲಸಿಕೆಗಳು ಲಭ್ಯವಿದೆ. 11 ಪ್ರಕರಣಗಳು ಈ ವರೆಗೆ ಕಂಡುಬಂದಿದ್ದು ಅವರು ಆರೋಗ್ಯವಾಗಿದ್ದಾರೆ. ಇಬ್ಬರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ. ಸಾಕಷ್ಟು ಮಳೆಯಾಗಿದ್ದಲ್ಲದೇ, ಎಚ್ಚರಿಕೆ ಕ್ರಮ ವಹಿಸಿದ್ದರಿಂದ ಕಾಯಿಲೆ ವ್ಯಾಪಕವಾಗಿ ಹರಡಿಲ್ಲ. ಆರೋಗ್ಯ ಇಲಾಖೆ ಪ್ರಕಾರ ಮಂಗನ ಕಾಯಿಲೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದರು.

ಯಾವುದೇ ಕಾರಣಕ್ಕೂ ಮಾಹಿತಿ ಕೊರತೆ ಆಗಬಾರದು. ಎಲ್ಲೇ ಆದರೂ ಈ ಬಗ್ಗೆ ಅನುಮಾನದ ಸ್ಥಿತಿ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು. ಆರೋಗ್ಯ, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ಪೊಲೀಸ್‌, ಶಿಕ್ಷಣ ಮುಂತಾಗಿ ಎಲ್ಲ ಇಲಾಖೆಗಳ ಸಿಬ್ಬಂದಿ ಈ ಕಾರ್ಯದಲ್ಲಿ ನಿಗಾವಹಿಸಬೇಕು. ಆರೋಗ್ಯ ಇಲಾಖೆ ಇನ್ನೂ ಹೆಚ್ಚು ಜಾಗೃತವಾಗಿರಬೇಕು ಎಂದರು.

ಈ ವರೆಗೆ 8 ಮಂಗಗಳು ಸತ್ತ ವರದಿಯಾಗಿದೆ. ಕಾನಸೂರು ಭಾಗದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ಆ ಭಾಗದಲ್ಲಿ ಈ ವರೆಗೆ 5215 ಜನರಿಗೆ ಲಸಿಕೆ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಜನ ಆತಂಕಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸುವದನ್ನು ಯಾರೂ ಮರೆಯಬಾರದು ಎಂದು ವಿಶ್ವೇಶ್ವರ ಹೆಗಡೆ ತಿಳಿಸಿದರು.

Advertisement

ತಹಶೀಲ್ದಾರ ಸಂತೋಷ ಭಂಡಾರಿ, ತಾಲೂಕು ವೈದ್ಯಾಧಿಕಾರಿ ಡಾ|ಲಕ್ಷೀಕಾಂತ, ರೇಂಜರ್‌ ಶಿವಾನಂದ ನಿಂಗಾಣಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next