ದೇವನಹಳ್ಳಿ: ಬರಗಾಲದಿಂದ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಮೇವು ವಿತರಿಸಿ ಶಾಸಕರು ಮಾತನಾಡಿದರು.
ಮೇವಿನ ಸಮಸ್ಯೆಗೆ ಪರಿಹಾರ: ತಾಲೂಕಿನಾದ್ಯಂತ ಮಳೆ ಇಲ್ಲದೆ ಬರಗಾಲ ಇರುವುದರಿಂದ ರಾಸುಗಳಿಗೆ ಮೇವಿಲ್ಲದೆ ರೈತರು ಚಿಂತೆ ಪಡಬೇಕಾಗಿಲ್ಲ. ಮೇವಿನ ಕೊರತೆ ಎಲ್ಲಿದೆ ಎಂಬುದನ್ನು ನಮ್ಮ ಗಮನಕ್ಕೆ ತಂದರೆ ಮೇವನ್ನು ತರಿಸಿ ವಿತರಿಸಲಾಗುವುದು. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಹೋಬಳಿವಾರು ಮೇವು ವಿತರಣೆಯಾಗುತ್ತಿದೆ.
ದೇವನಹಳ್ಳಿ ತಾಲೂಕಿನಲ್ಲಿ ಹೆಚ್ಚು ಮೇವು ವಿತರಿಸಲಾಗುತ್ತಿದೆ. ಮುಂಗಾರು ಮಳೆ ಅಲ್ಲಲ್ಲಿ ಬೀಳುತ್ತಿದೆ. ಆದ್ದರಿಂದ ಮಳೆ ಕೊರತೆ ಹೆಚ್ಚಾಗಿರುವುದರಿಂದ ತಾಲೂಕಿನ ಗ್ರಾಪಂ ಮಟ್ಟದಲ್ಲಿ ವಿತರಿಸಲಾಗುತ್ತಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬಸ್ ನಿಲ್ದಾಣಕ್ಕೆ ಮನವಿ: ಎಪಿಎಂಸಿ ನಿರ್ದೇಶಕ ಜಯರಾಮೇಗೌಡ, ಗಂಗವಾರ ಗ್ರಾಮಕ್ಕೆ ಬಸ್ ನಿಲ್ದಾಣದ ಅಗತ್ಯವಿದೆ. ಹೀಗಾಗಿ ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಿಸಿ, ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ನಾರಾಯಣ ಸ್ವಾಮಿ, ಶೀಘ್ರ ಬಸ್ ನಿಲ್ದಾಣ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ: ಗ್ರಾಪಂ ಅಧ್ಯಕ್ಷೆ ಮೇನಕಾ ಕೃಷ್ಣಮೂರ್ತಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಅವಶ್ಯವಿರುವ ಕಡೆಯಲ್ಲೆಲ್ಲ ಚೆಕ್‌ಡ್ಯಾಮ್‌ಗಳನ್ನು ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ಎಲ್ಲ ಗ್ರಾಮಗಳ ರೈತರಿಗೆ ಕುಡಿಯುವ ನೀರಿನ ಮಹತ್ವ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಎಪಿಎಂಸಿ ನಿರ್ದೇಶಕ ಜಯರಾಮೇಗೌಡ, ಚನ್ನರಾಯಪಟ್ಟಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜು, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಸ್ ರಾಜಣ್ಣ, ಉಪಾಧ್ಯಕ್ಷೆ ಸರಸ್ವತಮ್ಮ, ರಾಮಚಂದ್ರ, ಟಿಎಪಿಎಂಸಿ ನಿರ್ದೇಶಕರುಗಳಾದ ಮನೋಹರ್, ಗುರ್ರಪ್ಪ, ಗ್ರಾಪಂ ಸದಸ್ಯರಾದ ನಾರಾಯಣಮ್ಮ, ರಾಜಣ್ಣ, ರಾಮಚಂದ್ರ, ರಾಜಣ್ಣ,
ಕೃಷಿಕ ಸಮಾಜದ ನಿರ್ದೇಶಕ ಕೃಷ್ಣಮೂರ್ತಿ, ಚೌಡಪ್ಪನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಶಂಕರ್, ಚನ್ನರಾಯಪಟ್ಟಣ ಹೋಬಳಿ ಜೆಡಿಎಸ್ ಎಸ್‌ಸಿ ಘಟಕದ ಅಧ್ಯಕ್ಷ ರಾಜೇಶ್, ಜೆಡಿಎಸ್ ಮುಖಂಡರುಗಳಾದ ರೆಡ್ಡಿಹಳ್ಳಿ ಮುನಿರಾಜ್, ಶಿವಾನಂದ್, ಹಾಗೂ ಗ್ರಾಮ ಲೆಕ್ಕಾಧಿಕಾರಿ ಅಕ್ಷಯ್, ಗೌತಮ್ ಇದ್ದರು.