Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿಯವರು ಕಾಂಗ್ರೆಸ್ ಸರಕಾರವನ್ನ ಬೀಳಿಸುವ ಪ್ರಯತ್ನ ಮಾಡುವ ಅಗತ್ಯವೇ ಇಲ್ಲ. ಮುಖ್ಯಮಂತ್ರಿ ಗಾದಿಗಾಗಿ ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡುತ್ತಾರೆ. ಇನ್ನೊಂದು ಕಡೆ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ಮಾಡು ತ್ತಾರೆ. ಅವರೇ ಮುಖ್ಯಮಂತ್ರಿ ಗಾದಿಗಾಗಿ ಕಿತ್ತಾಡುತ್ತಿದ್ದಾರೆ ಎಂದರು.
Related Articles
Advertisement
ನಾವಾಗಿ ಸರ್ಕಾರ ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಅವರಾಗಿಯೇ ಅವರ ಸರ್ಕಾರ ಬೀಳಿಸುತ್ತಾರೆ. ನಮಗೆ ಇನ್ನೂ ನಾಲ್ಕೂವರೆ ವರ್ಷ ಕಾಲಾವ ಕಾಶ ಇದೆ. ಅಲ್ಲಿಯವರೆಗೆ ಕಾಯುತ್ತೇವೆ. ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಲ್ಲಿ ನಾನೇ ಕೃಷಿ ಮಂತ್ರಿಯಾಗಿದ್ದಾಗ ಅತಿವೃಷ್ಠಿ ಪರಿಹಾರಕ್ಕಾಗಿ 2,100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಪರಿಹಾರ ಧನ ಹೆಚ್ಚಳ ಮಾಡಲಾಗಿತ್ತು. ಇಷ್ಟೊಂದು ಬರ ಇದ್ದರೂ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಗ್ಯಾರಂಟಿಗಳಿಗಾಗಿಯೇ 50-60 ಸಾವಿರ ಕೋಟಿ ಸಾಲ ಮಾಡಬೇಕಾಗುತ್ತದೆ. ಹಾಗಾಗಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಲಾಗುತ್ತಿಲ್ಲ ಎಂಬುದನ್ನ ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಅಕ್ಷರಶಃ ಶೂನ್ಯ ಎಂದು ದೂರಿದರು.
ಅಧ್ಯಕ್ಷ ಸ್ಥಾನ ನೀಡಿದರೆ ಸಿದ್ಧ
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿದರೆ ನಿರ್ವಹಣೆಗೆ ನಾನು ಸಿದ್ಧ. ಬಿ.ಸಿ. ಪಾಟೀಲ್‌ಗೆ ಕರ್ನಾಟಕದಲ್ಲಿ ಯಾವುದೇ ಐಡೆಂಟಿಟಿ ಕಾರ್ಡ್ ಬೇಕಾಗಿಯೇ ಇಲ್ಲ. ಎಲ್ಲ ಕಡೆ ಜನರು ಗುರುತಿಸುತ್ತಾರೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿದರೆ ನಾನು ಸ್ಪರ್ಧೆ ಮಾಡುತ್ತೇನೆ. ನಾನೇ ನಾನಾಗಿ ಟಿಕೆಟ್ ಕೇಳುವುದಿಲ್ಲ. ಪಕ್ಷ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಾವೇರಿಯಲ್ಲಿ ಲಿಂಗಾಯತರು, ಕುರುಬರು ಒಳಗೊಂಡಂತೆ ಯಾರಿಗೇ ಟಿಕೆಟ್ ಕೊಟ್ಟರೂ ಅವರು ಹಾವೇರಿ ಇಲ್ಲವೇ ಗದಗದವರು ಆಗಿರಬೇಕು. ಯಾಕೆಂದರೆ ಜನರು ಈಗ ಬಹಳ ಜಾಗೃತರಾಗಿದ್ದಾರೆ. ಸ್ಥಳೀಯರೇ, ನಮ್ಮ ಭಾಗದವರೇ ಆಗಿರಬೇಕು ಎಂಬುದನ್ನ ಬಯಸುತ್ತಾರೆ. ನನಗೇ ಟಿಕೆಟ್ ಕೊಟ್ಟರೂ ಸ್ಪರ್ಧೆ ಮಾಡುತ್ತೇನೆ. ಬೇರೆ ಯವರಿಗೆ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಟಿಕೆಟ್ ಕೊಟ್ಟರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಾವಣಗೆರೆಯಲ್ಲಿ ಜಿ.ಎಂ. ಸಿದ್ದೇಶ್ವರ ಇದ್ದಾರೆ. ಮರ ಮುಪ್ಪಾದರೂ… ಎನ್ನುವಂತೆ ವಯಸ್ಸಿನ ಆಧಾರದಲ್ಲಿ ಟಿಕೆಟ್ ನಿರಾಕರಿಸುವುದಿಲ್ಲ. ರೇಣುಕಾಚಾರ್ಯ ಅವರು ಟಿಕೆಟ್‌ಗೆ ಓಡಾಡುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನ ನಿರ್ಧರಿಸುತ್ತದೆ ಎಂದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮಗ ಕಾಂತೇಶ್ ಓಡಾಡುತ್ತಿದ್ದಾರೆ. ಗೆಲ್ಲುವುದು ಬಹಳ ಕಷ್ಟ. ಏಕೆಂದರೆ 2014, 2019ರಲ್ಲಿನ ಪರಿಸ್ಥಿತಿ ಈಗ ಇಲ್ಲ. ಹಾಗಾಗಿ ಗೆಲ್ಲುವುದು ಅಷ್ಟೊಂದು ಸುಲಭ ಅಲ್ಲ. ಆದರೂ, ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಹಾಗಾಗಿ ಗೆಲ್ಲುವಂತಹವರಿಗೆ ಟಿಕೆಟ್ ನೀಡಬೇಕು ಎನ್ನುವ ಮೂಲಕ ಕಾಂತೇಶ್ ಸ್ಪರ್ಧೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.
ಈಗ ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. 28 ಸ್ಥಾನಗಳಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.