Advertisement

ಕಾಯಿನ್‌ ಹಾಕಿದರೂ ಬರಲೊಲ್ಲದ ಗಂಗೆ!

11:32 AM Oct 09, 2017 | Team Udayavani |

ಪುತ್ತೂರು/ ಸುಳ್ಯ: ಬೇಸಗೆ ಕಾಲದಲ್ಲಿ ನೀರಿನ ದಾಹ ನೀಗಿಸಲು ನಿರ್ಮಿಸಿದ ಶುದ್ಧ ನೀರಿನ ಘಟಕದಲ್ಲಿ ಕಾಯಿನ್‌
ಹಾಕಿದರೂ ಗಂಗೆ (ನೀರು) ಬರಲೊಲ್ಲೆ ಅನ್ನುತ್ತಿದ್ದಾಳೆ!

Advertisement

ಪುತ್ತೂರು ತಾಲೂಕಿನ ಬಹುತೇಕ ಘಟಕಗಳ ಕಥೆ ಇದೇ ಆಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಕೆಲ ಘಟಕ
ಗಳು ಸಾರ್ವಜನಿಕ ಉಪಯೋಗಕ್ಕೆ ದಕ್ಕಿಲ್ಲ. ಬಿರು ಬಿಸಿಲು ದಾಂಗುಡಿ ಇಡುವ ವೇಳೆ ಜನರ ಬಾಯಾರಿಕೆ ನೀಗಲು ಅನುಕೂಲವಾದೀತು ಎಂದು ಪರಿಭಾವಿಸಿದ ಈ ಯೋಜನೆ ಈಗ ಅಪೂರ್ಣ ಸ್ಥಿತಿಯಲ್ಲಿದೆ. ಉದ್ದೇಶ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ.

ಏನಿದು ಘಟಕ?
2015-16ನೇ ಸಾಲಿನಲ್ಲಿ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೇಲುಸ್ತುವಾರಿಯಲ್ಲಿ
ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಈ ಯೋಜನೆ ಆರಂಭಗೊಂಡಿತ್ತು. ಗ್ರಾಮಗಳಲ್ಲಿ, ಹೆದ್ದಾರಿ ಬದಿಗಳಲ್ಲಿ,
ವೃತ್ತಗಳಲ್ಲಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ಘಟಕ ಸ್ಥಾಪಿಸಲು ಇಚ್ಛಿಸಲಾಗಿತ್ತು.

ಘಟಕದ ಯಂತ್ರಕ್ಕೆ 1 ರೂ. ನಾಣ್ಯ ಹಾಕಿದಾಗ, ಆರರಿಂದ ಏಳು ಲೀಟರ್‌ ನೀರು ಸಿಗಬೇಕು. ಅದೂ ಸಂಪೂರ್ಣ ಶುದ್ಧಗೊಂಡ ನೀರು. ಈ ಯೋಜನೆಗೆ ಜಾಗ ನಿಗದಿ ಪಡಿಸುವುದು ಪಂಚಾಯತ್‌ ಜವಾಬ್ದಾರಿ. 30×30 ಅಡಿ ಸ್ಥಳವನ್ನು 15 ವರ್ಷಗಳ ಮಟ್ಟಿಗೆ ಗುತ್ತಿಗೆ ವಹಿಸಿಕೊಂಡ ಕಂಪನಿಗೆ ನೀಡುವ ಒಪ್ಪಂದವೂ ಇಲ್ಲಿದೆ. ಮಾನದಂಡ ಏನು ಅಂದರೆ, ಘಟಕ ನಿರ್ಮಾಣದ ಪಕ್ಕದಲ್ಲೇ ನೀರಿನ ಮೂಲ ಇರಬೇಕು. ಪ್ರತಿ ಘಟಕದಲ್ಲಿ ಒಂದು ಶೆಲ್ಪರ್‌, ಒಂದು ಟ್ಯಾಂಕ್‌, ಶುದ್ಧಿಕರಣ ಯಂತ್ರ ಇರಲಿದೆ.

ಎಷ್ಟು ಘಟಕ?
ಜಿಲ್ಲೆಯಲ್ಲಿ 233 ಘಟಕಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಳ್ಯ 44, ಪುತ್ತೂರು ತಾಲೂಕಿನಲ್ಲಿ 62 ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಇದರಲ್ಲಿ ಜಾಗದ ಸಮಸ್ಯೆಯಿಂದ ಕೆಲವನ್ನು ಕೈ ಬಿಡಲಾಗಿದ್ದು, ಪುತ್ತೂರಿನಲ್ಲಿ 22 ಘಟಕ
ಸ್ಥಾಪನೆ ಕೈಗೆತ್ತಿಕೊಳ್ಳಲಾಗಿತ್ತು.

Advertisement

ಇಲಾಖೆಯ ಮಾಹಿತಿ ಪ್ರಕಾರ, ಮೊದಲ ಹಂತದ 7ರಿಂದ 8 ಘಟಕಗಳು ನಿರ್ಮಾಣ ಆಗಿವೆ. ಉಳಿದವೂ ಆರಂಭದ ಹಂತದಿಂದ ಮೇಲೇರಿಲ್ಲ. ವಿದ್ಯುತ್‌ ಕನೆಕ್ಷನ್‌ ಬಾಕಿ ಇದೆ. ಇನ್ನೂ ಕೆಲವು ಉದ್ಘಾಟನೆಗೆ ಕಾಯುತ್ತಿದೆ. ಹಾಗಾಗಿ ಈ ಬೇಸಗೆಯಲ್ಲಿ ಕಾಯಿನ್‌ ಹಾಕಿದರೂ ನೀರು ಬರಲ್ಲ ಅನ್ನುವುದು
ಪಕ್ಕಾ ಎನಿಸಿದೆ. 

ಪೂರ್ಣವಾಗಿಲ್ಲ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯಾಪ್ತಿಯಲ್ಲಿ ತಾಲೂಕಿನಲ್ಲಿ 11 ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಇದರಲ್ಲಿ ಈಗ ಎರಡು ಪೂರ್ಣಗೊಂಡಿದ್ದರೂ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಬಾಕಿ ಇದೆ. ಕಾಮಗಾರಿ ತ್ವರಿತಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಉಳಿದ ಘಟಕಗಳ ನಿರ್ಮಾಣ ನಿರ್ಮಿತಿ ಕೇಂದ್ರದ ವ್ಯಾಪ್ತಿಯಲ್ಲಿ ಸೇರಿದೆ.

ರೋಹಿದಾಸ್‌, ಪ್ರಭಾರ ಸ.ಕಾ.
ಎಂಜಿನಿಯರ್‌, ಗ್ರಾ. ಕುಡಿಯುವ ನೀರು,
ನೈರ್ಮಲ್ಯ ಉಪವಿಭಾಗ

ಜನರಿಗೆ ಮಾಹಿತಿ ಇಲ್ಲ
ಕೆಲವೆಡೆ ಘಟಕವೇನೂ ಪೂರ್ಣವಾಗಿ ಸಿದ್ಧವಾಗಿದ್ದರೂ ಅದರಿಂದ ಜನರು ನೀರು ಪಡೆದು ಕೊಳ್ಳುತ್ತಿಲ್ಲ. ಕಾರಣ, ಬಹುತೇಕರಿಗೆ ಇದರ ಕಾರ್ಯಾರಂಭದ ಬಗ್ಗೆ ಮಾಹಿತಿಯೇ ಇಲ್ಲ. ಇದು ಹೇಗೆ ನೀರೊದಗಿಸುತ್ತದೆ, ಹಣ ಹಾಕುವುದು ಹೇಗೆ ಇತ್ಯಾದಿಗಳ ಬಗ್ಗೆ ಘಟಕದಲ್ಲಿ ಸೂಚನೆಗಳು ಇಲ್ಲ. ಹಾಗಾಗಿ ಘಟಕವನ್ನು ಜನ ನೋಡಿ ಸುಮ್ಮನಾಗುತ್ತಾರೆ ಹೊರತು ಯಾರಿಗೂ ಪ್ರಯೋಜನ ಆಗುವುದಿಲ್ಲ ಅನ್ನುವುದು ಸಾರ್ವಜನಿಕರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next