ಹಾಸನ: ”ದೊಡ್ಡ ಜನರು ದೊಡ್ಡ ಪಕ್ಷಕ್ಕೆ ಸೇರುತ್ತಾರೆ. ಅವರ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡ ಮಟ್ಟಕ್ಕೆ ನಾನು ಬೆಳೆದಿಲ್ಲ. ಅದರ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ “ಈ ಸುದ್ದಿಯಿಂದ ಯಾರಿಗೂ ಆಶ್ಚರ್ಯವಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯ.ಅವರು ಬಿಜೆಪಿಗೆ ಬೆಂಬಲ ನೀಡುವುದಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂದರು.
‘ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ಸ್ಥಳೀಯ ಶಾಸಕರು ಉತ್ತೇಜಿಸಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ”ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಲಿಲ್ಲ” ಎಂದು ಸುಮಲತಾ ಆರೋಪವನ್ನು ತಳ್ಳಿಹಾಕಿದರು.
ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಂಡ್ಯ ಜನತೆ ತೀರ್ಮಾನಿಸಲಿದ್ದಾರೆ ಎಂದರು.
ಸುಮಲತಾ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಮಂಡ್ಯದಿಂದ ಲೋಕಸಭೆ ಪ್ರವೇಶಿಸಿದ್ದರು.
ಮಂಡ್ಯ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಮಂದಿ ಜೆಡಿಎಸ್ ಶಾಸಕರಿದ್ದು, ಕೆ.ಆರ್.ಪೇಟೆ ಕ್ಷೇತ್ರವನ್ನು ಸಚಿವ ಬಿಜೆಪಿಯ ಡಾ. ನಾರಾಯಣ ಗೌಡ ಪ್ರತಿನಿಧಿಸುತ್ತಿದ್ದಾರೆ.