Advertisement

Karnataka: ಮೂವರು ಡಿಸಿಎಂ ಅಗತ್ಯವಿಲ್ಲ: ಪ್ರಿಯಾಂಕ್‌

09:43 PM Sep 16, 2023 | Team Udayavani |

ಕಲಬುರಗಿ: ರಾಜ್ಯದಲ್ಲಿ ಮೂವರು ಡಿಸಿಎಂ ಅಗತ್ಯ ಇಲ್ಲ. ಅಂತಹ ಪ್ರಸ್ತಾವನೆ ಹೈಕಮಾಂಡ್‌ ಮುಂದಿಲ್ಲ. ಸಚಿವ ರಾಜಣ್ಣ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಈ ಕುರಿತು ಹೆಚ್ಚು ಗಮನ ಹರಿಸಬೇಕಾದ ಅಗತ್ಯವೇನೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯಕ್ಕೆ ಮೂವರು ಡಿಸಿಎಂ ವಿಚಾರವಿಲ್ಲ. ಬಿ.ಕೆ.ಹರಿಪ್ರಸಾದ್‌ಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಆ ವಿಚಾರ ಅಲ್ಲಿಗೆ ನಿಂತಿದೆ. ಯತ್ನಾಳರಂತೆ ಬಿ.ಕೆ.ಹರಿಪ್ರಸಾದ ಮಾತಾಡಿಲ್ಲ. ಯತ್ನಾಳ್‌ ಮಾತಿಗೂ ಮತ್ತು ಹರಿಪ್ರಸಾದ್‌ ಮಾತಿಗೂ ವ್ಯತ್ಯಾಸವಿದೆ. ಜೆಡಿಎಸ್‌, ಬಿಜೆಪಿ ಮೈತ್ರಿ ಬಗ್ಗೆ ನಮಗೇನೂ ಹೆಚ್ಚು ಆಸಕ್ತಿಯಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದರಿಂದ ನಮ್ಮ ಪಕ್ಷದ ಮೇಲೇನೂ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದರು.

ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಟಿಕೆಟ್‌ ಕೇಳಿದ್ದರೂ ಅದು ಸಿಕ್ಕಿಲ್ಲ. ಬಳಿಕ ಬಿಜೆಪಿಗೆ ಹೋಗಿದ್ದಾರೆ. ನಾವು ಎಲ್ಲಿಯೂ ಹೊಸ ಕಾಯಿದೆ ಜಾರಿಗೆ ತರತೀವಿ ಅಂದಿಲ್ಲ. ಐಟಿ ಕಾಯ್ದೆಯನ್ನು ಜಾರಿಗೆ ತಂದಿದ್ದು ನಾವಲ್ಲ, ಬಿಜೆಪಿಯ ಅಮಿತ್‌ ಶಾ. ಮೊದಲು ಅದನ್ನು ತಿಳಿದು ಭಾಸ್ಕರ್‌ರಾವ್‌ ಮಾತನಾಡಬೇಕು. ಅವರ ಪೂರ್ತಿ ಪತ್ರಿಕಾಗೋಷ್ಠಿ ವಿಷಯ ತಿಳಿದಿಲ್ಲ ಎಂದರು.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾವು ಕೆಲ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿದ್ದೇವೆ. ಅದನ್ನು ಮಾಧ್ಯಮದವರು ಸ್ವಾಗತಿಸಿದ್ದಾರೆ. ಆದರೆ, ಬಿಜೆಪಿಯವರಿಗೆ ಮಾತ್ರ ಅದು ಹಿಡಿಸಿಲ್ಲ. ಅವರ್ಯಾಕೆ ಇದನ್ನು ವಿರೋಧಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಬಿಜೆಪಿಯವರು ಏನಾದರೂ ಸುಳ್ಳು ಸುದ್ದಿಯ ಫಾಕ್ಟರಿ ಹೊಂದಿದ್ದಾರಾ? ಬಿಜೆಪಿಯವರಿಗೆ ಏಕೆ ಆತಂಕ ನನಗೆ ಗೊತ್ತಾಗುತ್ತಿಲ್ಲ ಎಂದರು.

ಸಿಯುಕೆ ಕ್ಯಾಂಪಸ್‌ ಕೇಸರೀಕರಣ ಮಾಡಬೇಡಿ
ಕಳೆದ ಹಲವು ಅವಧಿಗಳಿಂದ ಕಲಬುರಗಿಯ ಸಿಯುಕೆ(ಕರ್ನಾಟಕ ಕೇಂದ್ರ ವಿಶ್ವವಿದ್ಯಾನಿಲಯ) ಕ್ಯಾಂಪಸ್‌ ವಿವಿಧ ವಿಷಯಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಶುಕ್ರವಾರವಂತೂ ವಿಸಿ ಕಾರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ. ಇನ್ನೊಂದೆಡೆ ವಿದ್ಯಾರ್ಥಿ ವಿರುದ್ಧ ಆಡಳಿತ ಮಂಡಳಿ ಪ್ರಕರಣ ದಾಖಲು ಮಾಡಿದೆ. ಇದು ಸರಿಯಲ್ಲ. ಕ್ಯಾಂಪಸ್‌ ಕೇಸರೀಕರಣ ಮಾಡ್ಬೇಡಿ. ಘಟನೆ ಕುರಿತು ಸಮಗ್ರ ಮಾಹಿತಿ ಪಡೆದಿದ್ದೇನೆ. ಸಿಯುಕೆ ಆಡಳಿತಾಧಿಕಾರಿಗಳಿಗೆ, ಕುಲಪತಿಗಳಿಗೆ ಸಂಘ ಪರಿವಾರದ ಬಗ್ಗೆ ಆಸಕ್ತಿಯಿದ್ದರೆ ಅದನ್ನು ವೈಯಕ್ತಿಕವಾಗಿ, ಖಾಸಗಿಯಾಗಿ ಮಾಡಿಕೊಳ್ಳಲಿ.

Advertisement

ಅದನ್ನು ಬಿಟ್ಟು ವಿದ್ಯಾರ್ಥಿಗಳನ್ನು ಬಳಸಿಕೊಂಡು ಅಂತಹ ವಾತಾವರಣ ಸೃಷ್ಟಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಬಂಧನಕ್ಕೆ ಒಳಗಾಗಿರುವ ಚೈತ್ರಾಳನ್ನು ಹಿಂದೆ ಬೊಮ್ಮಾಯಿ ಗೃಹ ಮಂತ್ರಿಯಾಗಿದ್ದಾಗ ಬೆಳೆಸಿರಲಿಲ್ಲವೇ? ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಅಬ್ಬರ ಪ್ರಚಾರ ಮಾಡಿದ್ದು ಗೊತ್ತಿಲ್ಲೇನ್ರಿ? ಚುನಾವಣೆಯಲ್ಲಿ ಸ್ಟಾರ್‌ ಕ್ಯಾಂಪೇನರ್‌ ಕೂಡ ಆಗಿರಲಿಲ್ಲವೇ. ಇವರೇ ಬೆಳೆಸಿದ್ದು ಇವರಿಗೆ ಕುಕ್ಕುತ್ತಿದೆ. ಸಂಘ-ಪರಿವಾರದ ವಿರುದ್ಧ ಮಾತನಾಡಲಿಕ್ಕೆ ನಮಗೇನೂ ಭಯವಿಲ್ಲ. ಅವರು ಮಾಡಿದ್ದನ್ನು ನಾವು ಆಡುತ್ತಿದ್ದೇವಷ್ಟೇ ಎಂದು ಪ್ರಿಯಾಂಕ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next