ಭಾರತದ ಆರ್ಥಿಕತೆ ಭಾರೀ ವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ ಎನ್ನುತ್ತೇವೆ. ಇದೇ ವೇಳೆ ಆರ್ಥಿಕತೆಯನ್ನೂ ಮೀರಿ ಅಭಿವೃದ್ಧಿಯಾಗುತ್ತಿರುವ ಇನ್ನೊಂದು ವಿಚಾರವಿದೆ. ಅದು ರಾಜಕೀಯ ಪಕ್ಷಗಳು. ಕಳೆದೊಂದು ದಶಕದಲ್ಲಿ ದೇಶದಲ್ಲಿ ರಾಜಕೀಯ ಪಕ್ಷಗಳು ದುಪ್ಪಟ್ಟಾಗಿವೆ. 2010ರಿಂದ 2018ರ ನಡುವಿನ ಅವಧಿಯಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ 2000 ದಾಟಿತ್ತು. ಇದೀಗ ಲೋಕಸಭೆಗೆ ಚುನಾವಣೆ ನಡೆಯುತ್ತಿರುವ ವೇಳೆಗೆ ಚುನಾವಣ ಆಯೋಗ ಮಾನ್ಯ ಮಾಡಿರುವ 2293 ಪಕ್ಷಗಳಿವೆ. ಈ ಪೈಕಿ ಬಹುತೇಕ ಪಕ್ಷಗಳ ಹೆಸರುಗಳನ್ನು ಜನರು ಕೇಳಿಯೇ ಇರಲಿಕ್ಕಿಲ್ಲ. ಕೆಲವು ಪಕ್ಷಗಳು ಚುನಾವಣೆಗಾಗುವಾಗ ಹುಟ್ಟಿ ಚುನಾವಣೆ ಮುಗಿದ ಬಳಿಕ ಸಾಯುವ ಅಲ್ಪಾಯುಷಿಗಳು. ಬರೀ ಎರಡು ತಿಂಗಳಲ್ಲಿ 149 ಪಕ್ಷಗಳು ಚುನಾವಣ ಆಯೋಗದಲ್ಲಿ ನೋಂದಣಿಯಾಗಿವೆ. ಹಾಗೆಂದು ಇವೆಲ್ಲ ಪ್ರಜಾತಂತ್ರದ ಮೇಲೆ ವಿಶ್ವಾಸವಿಟ್ಟುಕೊಂಡು ಅಥವಾ ಪ್ರಜಾತಂತ್ರವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಸ್ಥಾಪಿತವಾಗುತ್ತವೆಯೇ ಎಂದು ಕೇಳಿದರೆ ಸಿಗುವ ಉತ್ತರ ಮಾತ್ರ ಭಿನ್ನ. ಬಹುತೇಕ ಪಕ್ಷಗಳು ಹುಟ್ಟಿಕೊಳ್ಳುವುದು ಸ್ವಂತ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವ ಸಲುವಾಗಿಯೇ. ಇವುಗಳಿಂದ ಪ್ರಜಾತಂತ್ರಕ್ಕೆ ಹಾನಿಯಾಗುತ್ತಿದೆಯೇ ಹೊರತು ಯಾವುದೇ ಪ್ರಯೋಜನವಿಲ್ಲ.
ಬಹುತೇಕ ಸಂದರ್ಭದಲ್ಲಿ ನಾವು ಅಮೆರಿಕದಂಥ ದ್ವಿಪಕ್ಷೀಯ ಪ್ರಜಾತಂತ್ರ ಪದ್ಧತಿ ಇರಬೇಕಿತ್ತು ಎಂಬ ವಾದವನ್ನು ಕೇಳುತ್ತಿರುತ್ತೇವೆ. ಆದರೆ ಭಾರತದಂಥ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಹಾಗೂ 90 ಕೋಟಿ ಮತದಾರರನ್ನೊಳಗೊಂಡಿರುವ ದೇಶಕ್ಕೆ ದ್ವಿಪಕ್ಷೀಯ ಪದ್ಧತಿ ಸರಿ ಹೊಂದಲಾರದೇನೋ. ಹಾಗೆಂದು 2000ಕ್ಕೂ ಮೇಲ್ಪಟ್ಟು ಪಕ್ಷಗಳು ಇರುವುದು ಮಾತ್ರ ಆರೋಗ್ಯಕಾರಿ ಬೆಳವಣಿಗೆಯಂತೂ ಅಲ್ಲ. ಅದರಲ್ಲೂ ಹೀಗೆ ಅಣಬೆಗಳಂತೆ ಹುಟ್ಟಿಕೊಳ್ಳುವ ಪಕ್ಷಗಳ ಗುರಿ ಮತ್ತು ಉದ್ದೇಶವನ್ನು ನೋಡಿದ ಬಳಿಕ ಇಂಥ ಪಕ್ಷಗಳನ್ನು ನಿಯಂತ್ರಿಸಲು ಕಠಿಣವಾದ ನಿಯಮಾವಳಿಗಳ ರಚನೆಯಾಗಬೇಕೆಂದು ಅನ್ನಿಸಿದರೆ ಆಶ್ಚರ್ಯವಿಲ್ಲ.
ಪ್ರಸ್ತುತ ದೇಶದಲ್ಲಿ ಚುನಾವಣ ಆಯೋಗದಿಂದ ಮಾನ್ಯತೆ ಪಡೆದಿರುವ 7 ರಾಷ್ಟ್ರೀಯ ಪಕ್ಷಗಳು ಮತ್ತು 59 ಪ್ರಾದೇಶಿಕ ಪಕ್ಷಗಳು ಇವೆ. ಆಯೋಗದ ಮಾನ್ಯತೆ ಪಡೆಯಲು ನಿರ್ದಿಷ್ಟವಾದ ಮಾನದಂಡಗಳಿವೆ. ಆದರೆ ಮಾನದಂಡಗಳು ತುಂಬ ಸರಳವಾಗಿರುವುದರಿಂದ ಪಕ್ಷ ಸ್ಥಾಪಿಸುವುದೇನೂ ಕಷ್ಟದ ಕೆಲಸವಲ್ಲ. ಕೆಲವೊಮ್ಮೆ ದೊಡ್ಡ ರಾಜಕೀಯ ಪಕ್ಷಗಳೇ ಚಿಕ್ಕ ರಾಜಕೀಯ ಪಕ್ಷಗಳ ಸ್ಥಾಪನೆಗೆ ಕುಮ್ಮಕ್ಕು ನೀಡುತ್ತವೆ. ಈ ಸಣ್ಣ ಪಕ್ಷಗಳ ಮೂಲಕ ಅಕ್ರಮ ಹಣದ ಹರಿವು ನಡೆಸಲಾಗುತ್ತದೆ ಎಂಬ ಗುಮಾನಿ ಮೊದಲಿನಿಂದಲೂ ಇದೆ. ಕೆಲವೊಮ್ಮೆ ಎದುರಾಳಿ ಪಕ್ಷವನ್ನು ಅಥವಾ ಅಭ್ಯರ್ಥಿಯನ್ನು ದುರ್ಬಲಗೊಳಿಸುವ ಸಲುವಾಗಿಯೂ ಹೊಸ ಪಕ್ಷಗಳನ್ನು ಸ್ಥಾಪಿಸಲಾಗುತ್ತದೆ. ಮತದಾರರಿಗೆ ಗೊಂದಲವುಂಟು ಮಾಡಲು ಒಂದೇ ರೀತಿ ಇರುವ ಹೆಸರಿನ ಪಕ್ಷಗಳನ್ನು ಸ್ಥಾಪಿಸಿದ ಉದಾಹರಣೆಗಳೂ ಇವೆ. ಹೆಚ್ಚಿನ ಸಂದರ್ಭದಲ್ಲಿ ದೊಡ್ಡ ಪಕ್ಷಗಳನ್ನು ಬ್ಲ್ಯಾಕ್‌ವೆುàಲ್‌ಮಾಡುವ ಸಲುವಾಗಿ ತುಸು ಪ್ರಾಬಲ್ಯ ಹೊಂದಿರುವ ನಾಯಕರು ತಮ್ಮದೇ ಆದ ಪಕ್ಷ ಗಳನ್ನು ಸ್ಥಾಪಿಸಿ ಅಖಾಡಕ್ಕಿಳಿಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಭಿನ್ನಮತದಿಂದಾಗಿ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತವೆ.
ಪ್ರಜಾತಂತ್ರವನ್ನು ಪಾಲಿಸುತ್ತಿರುವ ಕೆಲವು ದೇಶಗಳಲ್ಲಿ ರಾಜಕೀಯ ಪಕ್ಷಗಳಿಗೆ ಕೆಲವು ಕಠಿಣ ನಿಯಮಗಳಿವೆ. ಹೀಗಾಗಿ ಅಲ್ಲಿ ಹೆಚ್ಚು ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುವುದಿಲ್ಲ. ಆದರೆ ನಮ್ಮಲ್ಲಿ ರಾಜಕೀಯ ಪಕ್ಷಗಳನ್ನು ನಿಯಂತ್ರಿಸುವ ಪರಮಾಧಿಕಾರವಿರುವುದು ಚುನಾವಣ ಆಯೋಗಕ್ಕೆ. ಜನಪ್ರತಿನಿಧಿ ಕಾಯಿದೆಯಡಿಯಲ್ಲಿ ಆಯೋಗ ವಿಧಿಸಿರುವ ಮಾನದಂಡಗಳನ್ನು ಪಾಲಿಸಿ ಯಾವುದೇ ಸಂಸ್ಥೆ, ವ್ಯಕ್ತಿ ಅಥವಾ ವ್ಯಕ್ತಿಗಳ ಒಕ್ಕೂಟ ಇಲ್ಲಿ ರಾಜಕೀಯ ಪಕ್ಷಗಳನ್ನು ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಹೀಗೆ ಚುನಾವಣಾ ಕಣದಲ್ಲಿ ಅನೇಕ ಪಕ್ಷಗಳಿರುವುದರಿಂದ ಮತಗಳು ವಿಭಜನೆಯಾಗಿ ಅನರ್ಹ ವ್ಯಕ್ತಿಗಳು ಗೆದ್ದು ಬಂದ ಧಾರಾಳ ಉದಾಹರಣೆಗಳು ಸಿಗುತ್ತವೆ. ಪ್ರಜಾತಂತ್ರದ ಮೂಲ ಆಶಯಕ್ಕೆ ಧಕ್ಕೆ ಯುಂಟು ಮಾಡುತ್ತಿರುವ ಈ ಬೆಳವಣಿಗೆಯನ್ನು ತಡೆಯುವ ಸಲುವಾಗಿ ಪ್ರಜಾಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ಮಾಡಬೇಕೆಂದು ಚುನಾವಣ ಆಯೋಗ ಶಿಫಾರಸು ಮಾಡಿ ದಶಕವೇ ಆಗಿದೆ. ಆದರೆ ಈ ನಿಟ್ಟಿನಲ್ಲಿ ಮುಂದುವರಿಯುವ ದಿಟ್ಟತನವನ್ನು ಮಾತ್ರ ಸರಕಾರಗಳು ತೋರಿಸಿಲ್ಲ.
ದೇಶದ ರಾಜಕೀಯ ಪಕ್ಷಗಳ ವ್ಯವಸ್ಥೆ ಸುಧಾರಿಸುವ ತನಕ ಚುನಾವಣ ವ್ಯವಸ್ಥೆ ಸುಧಾರಣೆಯಾಗದು. ಮೊದಲು ರಾಜಕೀಯ ಪಕ್ಷಗಳು ತಮ್ಮೊಳಗೆ ಪ್ರಜಾತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಹೀಗಾದರೆ ಮಾತ್ರ ದೇಶದ ಪ್ರಜಾತಂತ್ರ ಆರೋಗ್ಯಕರವಾಗಿ ಉಳಿಯಬಲ್ಲದು ಎಂದು ಚುನಾವಣೆ ಸುಧಾರಣೆಗಾಗಿ ರಚಿಸಿದ್ದ ರಾಷ್ಟ್ರೀಯ ಆಯೋಗ ವರದಿ ಮಾಡಿತ್ತು. ಆದರೆ ಯಾರೂ ಈ ವರದಿಯನ್ನು ಗಂಭೀರವಾಗಿ ಪರಿಗಣಿಸದಿರುವುದು ದುರದೃಷ್ಟಕರ.