ಉಡುಪಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆಯಿಲ್ಲ. ಅವರ ವಿರುದ್ಧ ಪಿತೂರಿ ಮಾಡಿ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿದ್ದಾರೆ. ಶೀಘ್ರದಲ್ಲಿ ಸತ್ಯ ಹೊರಬರುತ್ತದೆ. ನಂತರ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನವನ್ನು ಪಕ್ಷದ ವರಿಷ್ಠರು ಕೊಡತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಎಲ್ಲಿದೆ? ಕಾಂಗ್ರೆಸ್ ನಿರ್ನಾಮವಾಗಿದೆ. ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸಿದರು ಎಂದ ಹಾಗಾಯಿತು ಎಂದು ಲೇವಡಿ ಮಾಡಿದರು.
2023 ಚುನಾವಣೆ ಬರಬೇಕು. ಅದರಲ್ಲಿ ಜನರು ಕೊಟ್ಟ ಫಲಿತಾಂಶ ಬರಬೇಕು. ಕಾಂಗ್ರೆಸ್ ನವರ ಕನಸು ನನಸಾಗದು. ಮತ್ತೆ ಬಿಜೆಪಿ ಬರುತ್ತದೆ. ನಾವೇ ಸರ್ಕಾರ ನಡೆಸುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಇದನ್ನೂ ಓದಿ:ಗಂಟೆಗೊಮ್ಮೆ ಕರೆ ಮಾಡಿ ಸಿಕ್ಕಿಬಿದ್ದಿದ್ದರು ರೇಖಾ ಕದಿರೇಶ್ ಹಂತಕರು: ಮತ್ತೆ ನಾಲ್ವರ ಬಂಧನ
ಪರಮೇಶ್ವರ್ ಅವರು ಸಿಎಂ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಪರಮೇಶ್ವರ್ ಕೂಡಾ ಅಭ್ಯರ್ಥಿಯೇ. ಆದರೆ ಆಡಳಿತಕ್ಕೆ ಬಂದ ನಂತರ ಯೋಚನೆ ಮಾಡಬೇಕು ಎಂದರು.
ಸಚಿವ ಯೋಗೇಶ್ವರ್ ದಿಢೀರ್ ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಅವರು, ಯೋಗೇಶ್ವರ್ ಟೂರ್ ಬಗ್ಗೆ ನನಗೆ ಗೊತ್ತಿಲ್ಲ. ಅವರು ಮಂತ್ರಿ. ಅವರ ಖಾತೆಯ ಬಗ್ಗೆ ಚರ್ಚೆ ಮಾಡಲು ಹೋಗಿರಬಹುದು ಎಂದು ಬಿ.ಸಿ.ಪಾಟೀಲ್ ಹೇಳಿದರು.