ಹೊಸದಿಲ್ಲಿ: ಇನ್ನು ಮುಂದೆ ವಿದೇಶಕ್ಕೆ ಹೋಗಬೇಕೆಂದರೆ ಆದಾಯ ತೆರಿಗೆ ಸಂದಾಯ ಪ್ರಮಾಣಪತ್ರ ಕಡ್ಡಾಯ ಎಂಬ ಬಜೆಟ್ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಇದು ದೇಶದ ಎಲ್ಲರಿಗೂ ಅನ್ವಯವಾಗುವುದಿಲ್ಲ. ಹಣಕಾಸು ಅವ್ಯವಹಾರಗಳಲ್ಲಿ ಭಾಗಿಯಾದವರಿಗೆ ಮಾತ್ರ ಅನ್ವಯ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಸ್ಪಷ್ಟಪಡಿಸಿದೆ.
ಏನಿದು ಪ್ರಮಾಣಪತ್ರ?
ವ್ಯಕ್ತಿಯು ಆದಾಯ ತೆರಿಗೆ ಕಾಯ್ದೆ, ಸಂಪತ್ತು ತೆರಿಗೆ ಕಾಯ್ದೆ, ಗಿಫ್ಟ್ ಟ್ಯಾಕ್ಸ್ ಅಥವಾ ಎಕ್ಸ್‌ಪೆಂಡಿಚರ್ ತೆರಿಗೆ ಕಾಯ್ದೆಯಡಿ ಯಾವುದೇ ಬಾಧ್ಯತೆಯನ್ನು ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಐ.ಟಿ. ಇಲಾಖೆ ನೀಡುವ ಪ್ರಮಾಣಪತ್ರ ಇದಾಗಿದೆ.
ಸಿಬಿಟಿಡಿ ಸ್ಪಷ್ಟನೆ ಏನು?: ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 230ರ ಪ್ರಕಾರ, ಪ್ರತಿ ಯೊಬ್ಬರೂ ತೆರಿಗೆ ಸಂದಾ ಯದ ಪ್ರಮಾಣ ಪತ್ರ ಹೊಂದಿರಬೇಕಾದ ಅಗತ್ಯ ವಿಲ್ಲ. ಇದು ಕೆಲವರಿಗೆ ಮಾತ್ರ ಅನ್ವಯ ವಾಗುತ್ತದೆ. ಉದಾ , ಗಂಭೀರ ಹಣಕಾಸು ಅವ್ಯವಹಾರ ಪ್ರಕರಣ ಎದುರಿಸುತ್ತಿರುವ, ಆದಾಯ ತೆರಿಗೆ ಕಾಯ್ದೆಯಡಿ ತನಿಖೆಗೆ ಒಳಪಡುವ ಸಾಧ್ಯತೆಯಿರುವ, 10 ಲಕ್ಷ ರೂ.ಗಿಂತ ಹೆಚ್ಚಿನ ನೇರ ತೆರಿಗೆ ಬಾಕಿಯಿರುವ ವ್ಯಕ್ತಿಗಳು ಇದನ್ನು ಹೊಂದಿರುವುದು ಕಡ್ಡಾಯವಾಗಿದೆ.