ಮದ್ದೂರು: ನಂದಿನಿ ಮತ್ತು ಗುಜರಾತ್ ರಾಜ್ಯದ ಅಮೂಲ್ ಅನ್ನು ಒಗ್ಗೂಡಿಸುವು ದಾಗಿ ಹೇಳಿಕೆ ನೀಡಿರುವ ಕೇಂದ್ರ ಸಹಕಾರ ಸಚಿವ ಅಮಿತ್‌ಶಾ ಅವರು ರಾಜ್ಯ ಸರ್ಕಾ ರದ ಆಡಳಿತದ ಇಂತಹ ಸಂಸ್ಥೆಗಳನ್ನು ಕೇಂದ್ರದ ವಶಕ್ಕೆ ಪಡೆಯುವುದಾಗಿ ಪರೋಕ್ಷವಾಗಿ ಸೂಚನೆ ನೀಡಿರುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ಮತ್ತು ಅಮೂಲ್ ಅನ್ನು ಎನ್‌ಡಿಡಿಬಿ ಮೂಲಕ ಒಗ್ಗೂಡಿಸುವ ಮುನ್ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ಕಿತ್ತುಕೊಂಡು ಕೇಂದ್ರ ಸರ್ಕಾರದ ಮೂಲಕ ಅಧಿಕಾರ ನಡೆಸಲು ಯೋಜನೆ ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಅಮೂಲ್ ಮತ್ತು ನಂದಿನಿಯನ್ನು ಒಗ್ಗೂಡಿಸಬಾರದು. ರಾಜ್ಯದಲ್ಲಿ ಹೈನುಗಾರಿಕೆ ಉದ್ದಿಮೆ ಬಹಳ ಬೆಳೆದಿದ್ದು ಹೈನುಗಾರಿಕೆ ಬೆಳೆಯಲು ಎಂ.ವಿ.ಕೃಷ್ಣಪ್ಪ, ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ, ಎಚ್.ಡಿ.ರೇವಣ್ಣ ಅವರ ಕಾಲದಲ್ಲಿ ಹೈನುಗಾರಿಕೆ ಉತ್ತಮವಾಗಿ ಬೆಳೆಯಲು ಸಾಧ್ಯವಾಯಿತು ಎಂದರು.
ಕೈಗಾರಿಕೆ ಉದ್ಯಮವಾಗುತ್ತಿದೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕುರಿಯನ್ ಮೂಲಕ ಸಂಪರ್ಕ ಸಾಧಿಸಿ ರಾಜ್ಯದಲ್ಲಿ ಹೈನು ಉದ್ಯಮ ಬೆಳೆಯಲು ಶ್ರಮಿಸಿದರು. ಅದರಲ್ಲೂ ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಹೈನುಗಾರಿಕೆ ಬೆಳೆಯಲು ಎಚ್ .ಡಿ. ರೇವಣ್ಣರ ಪಾತ್ರ ಅಪಾರ. ಇತ್ತೀಚಿನ ದಿನಗಳಲ್ಲಿ ದೊಡ್ಡ ಕೈಗಾರಿಕೆ ಉದ್ಯಮವಾಗಿ ಬೆಳೆಯುತ್ತಿದೆ ಎಂದರು.
ವಿಲೀನ ಬೇಡ: ರಾಜ್ಯ ಸರ್ಕಾರದ ಅಧೀನದಲ್ಲೇ ನಂದಿನಿ ಮುಂದುವರಿಯ ಬೇಕೆಂದು ಕೇಂದ್ರ ಸರ್ಕಾರ ಸಬ್ಸಿಡಿ ನೀಡುವ ಜತೆಗೆ ತೆರಿಗೆ ಪಾವತಿಸುತ್ತಿರುವ ರಾಜ್ಯದ ಜನರ ಹಣವನ್ನು ಇತರೆ ರಾಜ್ಯಗಳಿಗೆ ಹಂಚುತ್ತಿದೆ. ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಯಾವುದೇ ವಿಲೀನಕ್ಕೆ ಅವಕಾಶ ಕೊಡಬಾರದೆಂದರು. ಜಿಲ್ಲೆಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಸಮಾವೇಶಗಳನ್ನು ಮಾಡಲಿ ಸಂತೋಷ ಹೆಚ್ಚಿನ ಅನುದಾನ ನೀಡುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕೆಂದರು.
ಜಿಲ್ಲೆಯಲ್ಲಿ 5-6 ಸ್ಥಾನ ಗೆಲ್ಲಲು ಮಹಾಪ್ರಭು ತೀರ್ಮಾನವೇ ಅಂತಿಮ ವಾಗಿದ್ದು ಹಾರಿಸೋದೋ, ಇಳಿಸೋದೋ ಮತದಾರರೇ ತೀರ್ಮಾನ ಮಾಡಲಿದ್ದಾರೆಂದರು. ಮನ್‌ಮುಲ್ ಅಧ್ಯಕ್ಷ ರಾಮಚಂದ್ರು, ನಿರ್ದೇಶಕ ಮಂಜು, ಪುರಸಭೆ ಉಪಾಧ್ಯಕ್ಷೆ ಸುಮಿತ್ರಾರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್ .ಪ್ರಸನ್ನಕುಮಾರ್, ಸದಸ್ಯರಾದ ಎಸ್. ಮಹೇಶ್, ವನಿತಾ, ಪ್ರಮೀಳಾ, ಬಸವರಾಜು ಮತ್ತಿತರರಿದ್ದರು.