ದರ್ಶನ್‌ಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಇರೋದು ನಿಮಗೆ ಗೊತ್ತೇ ಇದೆ. ಹಾಗಾಗಿಯೇ ಅವರ ಚಿತ್ರಗಳಲ್ಲಿ “ಚಾಲೆಂಜಿಂಗ್ ಸ್ಟಾರ್ ದರ್ಶನ್’ ಎಂದೇ ಬರುತ್ತದೆ. ಈ ಹೆಸರು ಅಭಿಮಾನಿಗಳಿಗೆ ತುಂಬಾ ಇಷ್ಟ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇಂತಿಪ್ಪ, ದರ್ಶನ್‌ಗೆ ಚಿತ್ರತಂಡವೊಂದು ಇತ್ತೀಚೆಗೆ ಹೊಸ ಬಿರುದು ಕೊಡಲು ಮುಂದಾಗಿತ್ತು. ಆದರೆ, ದರ್ಶನ್ ಮಾತ್ರ ಆ ಬಿರುದನ್ನು ನಯವಾಗಿಯೇ ನಿರಾಕರಿಸುವ ಮೂಲಕ ಚಾಲೆಂಜಿಂಗ್ ಸ್ಟಾರ್ ಆಗಿಯೇ ಉಳಿದುಕೊಂಡಿದ್ದಾರೆ.
ಇತ್ತೀಚೆಗೆ “ಕರಿಯ-2′ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ದರ್ಶನ್ ಆ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದಿದ್ದರು. ಚಿತ್ರತಂಡ ಅವರಿಗೆ “ಮೈಸೂರು ರತ್ನ’ ಎಂದು ಬಿರುದು ನೀಡಿ ಗೌರವಿಸಲು ಮುಂದಾಯಿತು. ಆದರೆ, ಚಿತ್ರತಂಡದ ಪ್ರೀತಿಯ ಸನ್ಮಾನವನ್ನು ಸ್ವೀಕರಿಸಿದ ದರ್ಶನ್, ಬಿರುದನ್ನು ಮಾತ್ರ ನಯವಾಗಿಯೇ ನಿರಾಕರಿಸಿದರು. “ನನಗೆ ಚಾಲೆಂಜಿಂಗ್ ಸ್ಟಾರ್ ಬಿರುದೇ ಸಾಕು. ಅದನ್ನೇ ಹಾಕಲು ಜಾಗವಿಲ್ಲ. ಇನ್ನು ಮೈಸೂರು ರತ್ನ ಬೇಡ.
ಈ ಬಿರುದನ್ನು “ಕರಿಯ-2′ ನಾಯಕ ಸಂತೋಷ್‌ಗೆ ನೀಡಿ, ಅವರಿಟ್ಟುಕೊಳ್ಳಲಿ. ನಾನು ಚಾಲೆಂಜಿಂಗ್ ಸ್ಟಾರ್’ ಆಗಿಯೇ ಇರುತ್ತೇನೆ’ ಎಂದರು. ಚಿತ್ರತಂಡ ಅವರಿಗೆ ಮೈಸೂರು ಅರಮನೆಯ ಮಾದರಿ ಕೊಟ್ಟು ಸನ್ಮಾನಿಸಿತು. 51ನೇ ಸಿನಿಮಾ ಒಡೆಯರ್:ದರ್ಶನ್ ಅವರ 51 ನೇ ಸಿನಿಮಾವನ್ನು ನಿರ್ದೇಶಕ ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. ಆ ಚಿತ್ರಕ್ಕೆ “ಒಡೆಯರ್’ ಎಂದು ನಾಮಕರಣ ಕೂಡ ಆಗಿದೆ. ಈ ಚಿತ್ರ ಸಂದೇಶ್ ನಾಗರಾಜ್ ಅವರ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ ಎಂಬುದು ನಿಮಗೆ ಗೊತ್ತೇ ಇದೆ.
ಆದರೆ, ಯಾವಾಗ ಎಂಬುದು ಸ್ಪಷ್ಟವಾಗಿರಲಿಲ್ಲ. ನಿರ್ದೇಶಕ ಪವನ್ ಒಡೆಯರ್ ಅವರು ಮುಂದಿನ ವರ್ಷದಲ್ಲಿ ದರ್ಶನ್ ಅಭಿನಯದ “ಒಡೆಯರ್’ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿದ್ದಾರೆ. ಅಂದಹಾಗೆ, ಪವನ್ ಒಡೆಯರ್ ದರ್ಶನ್‌ಗಾಗಿಯೇ ಒಂದು ಸ್ಪೆಷಲ್ ಸ್ಟೋರಿ ರೆಡಿ ಮಾಡುತ್ತಿದ್ದಾರೆ. ಅದೊಂದು ಪಕ್ಕಾ ಕಾಮಿಡಿ ಲವ್ ಎಂಟರ್‌ಟೈನ್‌ಮೆಂಟ್ ಸಿನಿಮಾವಂತೆ. ಅದರಲ್ಲೂ ಈಗಿನ ಹೊಸ ಜನರೇಷನ್‌ಗೆ ತಕ್ಕಂತಹ ಕಥೆ ಹೆಣೆದು ಹೊಸಬಗೆಯ ಸಿನಿಮಾ ಕೊಡುವ ಉದ್ದೇಶ ಇಟ್ಟುಕೊಂಡಿದ್ದಾರಂತೆ ಪವನ್.
ಈಗಾಗಲೇ ಸಂದೇಶ್ ನಾಗರಾಜ್ ಅವರು, ತಮ್ಮ ಬ್ಯಾನರ್‌ನಲ್ಲಿ “ಒಡೆಯರ್’ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದು, ದರ್ಶನ್ “ಕುರುಕ್ಷೇತ್ರ’ ಮುಗಿಸಿಕೊಂಡು ಬಂದ ಬಳಿಕ “ಒಡೆಯರ್’ಗೆ ಚಾಲನೆ ಕೊಡಲಿದ್ದಾರೆ. ಗಾಂಧಿನಗರದ ಬಹಳಷ್ಟು ಮಂದಿಗೆ ದರ್ಶನ್ ಅಭಿನಯದ 51 ನೇ ಸಿನಿಮಾ ಯಾವುದು ಎಂಬ ಗೊಂದಲವಿತ್ತು. ಅದರಲ್ಲೂ ಕೆಲವರು ಒಬ್ಬೊಬ್ಬ ನಿರ್ದೇಶಕರ ಹೆಸರು ಹೇಳುತ್ತಿದ್ದರು. ಕೊನೆಗೆ 51 ನೇ ಚಿತ್ರ ಯಾವುದು ಎಂಬುದಕ್ಕೆ “ಒಡೆಯರ್’ ಉತ್ತರವಾಗಿದೆ.