Advertisement
ನವದೆಹಲಿ: ಇನ್ನು ಕೆಲವೇ ತಿಂಗಳಲ್ಲಿ ಭಾರತದಲ್ಲೇ ಆ್ಯಪಲ್ ಐಫೋನ್‌ಗಳು ತಯಾರಾಗಿ, ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ದೇಶದ ಖ್ಯಾತ ಕಂಪನಿಗಳಲ್ಲಿ ಒಂದಾದ ಟಾಟಾ ಸದ್ಯದಲ್ಲೇ ದೇಶೀಯವಾಗಿ ಐಫೋನ್‌ಗಳ ತಯಾರಿಕೆ ಆರಂಭಿಸಲಿದೆ. ವಿಶೇಷವೆಂದರೆ, ಈ ಐಫೋನ್‌ಗಳು ಬೆಂಗಳೂರು ಬಳಿಯ ಘಟಕದಲ್ಲೇ ತಯಾರಾಗಲಿವೆ.1,040.30 ಕೋಟಿ ರೂ.ಗಳಿಗೆ ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನುಫ್ಯಾಕ್ಚರಿಂಗ್(ಇಂಡಿಯಾ) ಪ್ರೈ. ಲಿ. ಕಂಪನಿಯನ್ನು ಟಾಟಾ ಗ್ರೂಪ್ ಖರೀದಿಸಿದೆ. ಈ ಒಪ್ಪಂದಕ್ಕೆ ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿಯಾದ ವಿಸ್ಟ್ರಾನ್‌ನ ವ್ಯವಸ್ಥಾಪಕ ಮಂಡಳಿಯು ಶುಕ್ರವಾರ ಅನುಮೋದನೆ ನೀಡಿದೆ. ಬೆಂಗಳೂರು ಸಮೀಪ ತನ್ನ ತಯಾರಿಕಾ ಘಟಕವನ್ನು ವಿಸ್ಟ್ರಾನ್ ಹೊಂದಿದೆ.
“ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ (ಪಿಎಲ್‌ಐ) ಯೋಜನೆಯು ಈಗಾಗಲೇ ಭಾರತವನ್ನು ಸ್ಮಾರ್ಟ್‌ಫೋನ್ ತಯಾರಿಕೆ ಹಾಗೂ ರಫ್ತಿಗೆ ವಿಶ್ವಾಸಾರ್ಹ ಮತ್ತು ಪ್ರಮುಖ ಕೇಂದ್ರವಾಗುವಂತೆ ಮಾಡಿದೆ. ಈಗ ಮುಂದಿನ ಎರಡೂವರೆ ವರ್ಷಗಳಲ್ಲಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಐಫೋನ್‌ಗಳ ತಯಾರಿಕೆ ಪ್ರಾರಂಭವಾಗಲಿದೆ. ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನುಫ್ಯಾಕ್ಚರಿಂಗ್(ಇಂಡಿಯಾ) ಪ್ರೈ. ಲಿ. ಕಂಪನಿಯನ್ನು ಖರೀದಿಸಿದ್ದಕ್ಕಾಗಿ ಟಾಟಾ ಸಮೂಹಕ್ಕೆ ಅಭಿನಂದನೆಗಳು’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್(ಎಕ್ಸ್) ಮಾಡಿದ್ದಾರೆ.