ಹುಬ್ಬಳ್ಳಿ: “ದೇಶದ ಸೈನಿಕರ ಶವದ ಮೇಲೆ ಯಾರೂ ರಾಜಕೀಯ ಮಾಡಬಾರದು. ಆದರೆ ಬಿಜೆಪಿಯವರು ಏರ್ ಸ್ಟ್ರೈಕ್ ಅನ್ನು ರಾಜಕೀಯ ಲಾಭವಾಗಿಸಿಕೊಳ್ಳಲು ಮುಂದಾಗಿರುವುದು ದುರ್ದೈವದ ಸಂಗತಿ’ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸರಹದ್ದು ಮೇಲೆ ಯಾರೇ ದಾಳಿ ಮಾಡಿದರು ನಾವೆಲ್ಲರೂ ಒಮ್ಮತದಿಂದ ಒಗ್ಗೂಡಿ ಎದುರಿಸುತ್ತೇವೆ ಎಂದು ಎಲ್ಲ ವಿಪಕ್ಷದವರು ಸರ್ಕಾರಕ್ಕೆ ಭರವಸೆ ಕೊಟ್ಟಿದ್ದೇವೆ. ರಾಹುಲ್ ಗಾಂಧಿ ಸಹ ಈ ಕುರಿತು ಸ್ಪಷ್ಟವಾಗಿ ಅನೇಕ ಬಾರಿ ಹೇಳಿದ್ದಾರೆ. ಆದರೆ ಬಿಜೆಪಿಯವರು ಏರ್ ಸ್ಟ್ರೈಕ್ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.
ಯುಪಿಎ ತನ್ನ ಎರಡು ಅವಧಿಗಳ ಆಡಳಿತಾವಧಿಯಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಆದರೆ ನಾವ್ಯಾರೂ ಇದರ ಶ್ರೇಯಸ್ಸು ಪಡೆದುಕೊಂಡಿಲ್ಲ. ಸೈನಿಕರ ದಾಳಿಯನ್ನು ರಾಜಕೀಯಕ್ಕೆ ಬಳಸಿಲ್ಲ. ದೇಶದ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಿರಬೇಕು ಎಂದರು.
ನನ್ನ ಸೋಲಿಸಲಾಗದು: ಪ್ರಧಾನಿ ಮೋದಿ ಅವರಿಗೆ ನನ್ನ ಮೇಲೆ ವ್ಯಕ್ತಿಗತವಾಗಿ ಪ್ರೀತಿ ಇದ್ದಿದ್ದಕ್ಕೆ ಕಲಬುರಗಿಗೆ ಬಂದು ಪ್ರಚಾರ ಮಾಡಿದ್ದಾ ರೆ. ದೆಹಲಿಯಿಂದ ಇನ್ನಷ್ಟು ನಾಯಕರು ನನ್ನ ಕ್ಷೇತ್ರಕ್ಕೆ ಬರುವವರಿದ್ದಾರೆ. ಆದರೆ ಕ್ಷೇತ್ರದ ಮತದಾರರುಯಾರನ್ನು ಆರಿಸಬೇಕೆಂಬ ತೀರ್ಮಾನ ಕೈಗೊಳ್ಳುತ್ತಾರೆ. ಜನರ ಆಶೀರ್ವಾದ ಎಲ್ಲಿಯವರೆಗೆ ಕಾಂಗ್ರೆಸ್ ಮತ್ತು ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೆ ಇವರಿಂದ ಏನೂ ಮಾಡಲು ಆಗಲ್ಲ ಎಂದು ಹೇಳಿದರು.
ಯುಪಿಎ ಆಡಳಿತಾವಧಿಯಲ್ಲಿ ಇಎಸ್‌ಐ ಆಸ್ಪತ್ರೆ, ರೈಲ್ವೆ ಕೋಚ್ ತಯಾರಿಕಾ ಘಟಕ ಆರಂಭಿಸಿದ್ದೆವು. ನಮ್ಮ ಅವಧಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಈಗ ಪೂರ್ಣಗೊಳಿಸಿ ಅವನ್ನೆಲ್ಲ ನಾವೇ ಮಾಡಿದ್ದೇವೆಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಆದರೆ ಚುನಾವಣಾ ಪ್ರಣಾಳಿಕೆಯಲ್ಲಿನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆಂದು ಹೇಳುತ್ತಿಲ್ಲ. ಕೇವಲ ಬೆಂಗಳೂರಿನ ಮೂರು ಯೋಜನೆ, ಹುಬ್ಬಳ್ಳಿ ಹಾಗೂ ರಾಯಚೂರು ಯೋಜನೆಗೆ ಚಾಲನೆ ನೀಡಿ ಹೋಗಿದ್ದಾರೆ ಎಂದರು.
ಮೋದಿ ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹಾಗೂ ಕಪ್ಪುಹಣ ತಂದು ಬಡವರಿಗೆ ಹಂಚುವ ಭರವಸೆ ಹುಸಿಯಾಗಿದೆ. ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದಿದ್ದರು. ಅದು ಆಗಿಲ್ಲ. ಆದರೆ ಕೆಲವು ಬೆಳೆ ವಿಮಾ ಕಂಪನಿಗಳಿಗೆ ಲಾಭ ಮಾಡಿ ಕೊಟ್ಟಿದ್ದಾ ರೆ ಪದೇ ಪದೇ ಸುಳ್ಳು ಹೇಳುವವರಿಗೆ ಏನು ಮಾಡೋಕ್ಕಾಗಲ್ಲ ಎಂದರು.