Advertisement

ಹಕ್ಕುಪತ್ರ ಸಿಕ್ಕಿದರೂ ಸೂರಿಲ್ಲ 

12:43 PM Dec 09, 2017 | Team Udayavani |

ಮಂಗಳೂರ: ಹಕ್ಕು ಪತ್ರ ಸಿಕ್ಕಿದರೂ ಮನೆ ದೊರಕದೇ ಸಂಕಷ್ಟದಲ್ಲಿದ್ದ 72 ವರ್ಷದ ಸರೋಜಮ್ಮ ಅವರಿಗೆ ಕೊನೆಗೂ ಜಿಲ್ಲಾಧಿಕಾರಿ ಕಚೇರಿಯಲ್ಲೇ ನ್ಯಾಯ ಒದಗಿಸುವ ಭರವಸೆ ಸಿಕ್ಕಿದೆ. 

Advertisement

ಮೂಲತಃ ಉಡುಪಿಯವರಾದ ಸರೋಜಮ್ಮ ಊರು-ಕೇರಿ ಅಲೆದು ಜೀವನ ಸಾಗಿಸುತ್ತಿದ್ದಾರೆ. ಇವರ ಪತಿ ದೂರವಾಗಿದ್ದು, ಪುತ್ರಿಯರು ಯೋಗಕ್ಷೇಮ ನೋಡುತ್ತಿಲ್ಲ. ಪುತ್ರ ಮಾತ್ರ ಆಸರೆಯಾಗಿದ್ದಾರೆ. ತಮ್ಮ ಕಷ್ಟದ ಹಿನ್ನೆಲೆಯಲ್ಲಿ ನ್ಯಾಯ ನೀಡುವಂತೆ ಕೋರಿ ಸರೋಜಮ್ಮ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಶುಕ್ರವಾರ ಬೆಳಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಪುತ್ರ ಸುಬ್ರಹ್ಮಣ್ಯನ ಜೊತೆಗೆ ಸರೋಜಮ್ಮ ಆಗಮಿಸಿದ್ದರು. ಸರೋಜಮ್ಮಗೆ ನಡೆದಾಡಲು ಕಷ್ಟವಾಗುತ್ತಿದ್ದರಿಂದ ಪುತ್ರ ಸುಬ್ರಹ್ಮಣ್ಯ ಅವರು ತಾಯಿಯನ್ನು ಎತ್ತಿಕೊಂಡೇ ಕಚೇರಿ ಮೆಟ್ಟಿಲು ಹತ್ತಿಸಿದ್ದರು. ಆದರೆ ಮಧ್ಯಾಹ್ನವಾದರೂ ಜಿಲ್ಲಾಧಿಕಾರಿ ಭೇಟಿ ಸಾಧ್ಯವಾಗಲಿಲ್ಲ. ಈ ವೇಳೆ ಸಭೆಯೊಂದರ ಸುದ್ದಿಗೆಂದು ಆಗಮಿಸಿದ ಮಾಧ್ಯಮ ಮಂದಿ ಅವರ ವಿಚಾರ ತಿಳಿದುಕೊಂಡಿದ್ದು, ಅಪರ ಜಿಲ್ಲಾಧಿಕಾರಿ ಕುಮಾರ್‌ ಅವರ ಗಮನಕ್ಕೆ ತಂದರು. ಬಳಿಕ ಖುದ್ದು ಕುಮಾರ್‌ ಅವರೇ ಆಗಮಿಸಿ ಅಹವಾಲು ಆಲಿಸಿದರು. 

ಜತೆಗೆ ಈ ಬಗ್ಗೆ ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯ ಜತೆಗೆ ಮಾತನಾಡಿದ ಕುಮಾರ್‌ ಅವರು, ಸರೋಜಮ್ಮ ಅವರಿಗೆ ಬಸವ ವಸತಿ ಯೋಜನೆಯಲ್ಲಿ ಕೂಡಲೇ ನಿವೇಶನ ಮಂಜೂರುಗೊಳಿಸುವಂತೆ ಸೂಚನೆ ನೀಡಿದರು. ವಿಶೇಷ ಪ್ರಕರಣವೆಂದು ಪರಿಗಣಿಸಿ ತ್ವರಿತವಾಗಿ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಸೂಚಿಸಿದರು. 

ಏತನ್ಮಧ್ಯೆ ಅಸ್ವಸ್ಥಗೊಂಡ ಸರೋಜಮ್ಮಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅಂಬ್ಯುಲೆನ್ಸ್‌ ತರಿಸಿ ಅಪರ ಜಿಲ್ಲಾಧಿಕಾರಿ ಕುಮಾರ್‌ ವ್ಯವಸ್ಥೆ ಮಾಡಿದರು. ಆಧಾರ್‌ ನೋಂದಣಿ ಸಿಬ್ಬಂದಿ ಆಸ್ಪತ್ರೆಗೆ ತೆರಳಿ, ಬಯೋಮೆಟ್ರಿಕ್‌ ಪಡೆದು ಆಧಾರ್‌ ನೋಂದಣಿ ಮಾಡಿದರು. ಸರೋಜಮ್ಮ ಪ್ರಕರಣ ಬಗ್ಗೆ ಬೆಳ್ತಂಗಡಿ ಇಒ ಹಾಗೂ ಮಡಂತ್ಯಾರು ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಗೆ ಸೂಕ್ತವಾಗಿ ಸ್ಪಂದಿಸುವಂತೆ ಸೂಚನೆ ನೀಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next