ಜಮಖಂಡಿ: ಶ್ರೀಮಂತಿಕೆ ಮನೆತನದಲ್ಲಿ ಹುಟ್ಟಿದರೆ ಮಾತ್ರ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವೆಂದು ಯಾರು ಭಾವಿಸಿಕೊಳ್ಳಬಾರದು. ಅತೀ ಕಡುಬಡತನದಲ್ಲಿ ಬೆಳೆದಿರುವ ಡಾ| ಬಿ.ಆರ್ ,ಅಂಬೇಡ್ಕರ್ ಛಲದಿಂದ ಶಿಕ್ಷಣ ಪಡೆದು ದೇಶಕ್ಕೆ ಪವಿತ್ರವಾದ ಸಂವಿಧಾನ ನೀಡಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಹುಲ್ಯಾಳ ಗ್ರಾಮದಲ್ಲಿ ಜಿ.ಪಂ. ಮತ್ತು ತಾ.ಪಂ. ಸಹಯೋಗದಲ್ಲಿ 15ನೇ ಹಣಕಾಸ ಯೋಜನೆಯಲ್ಲಿ ಎಂಜೆಎನ್‌ಆರ್‌ಇಜೆಎ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳ ಅಭ್ಯಾಸಕೊಠಡಿ (ಸ್ಟಡಿರೂಂ) ಹಾಗೂ ಉದ್ಯಾನವನ ಭೂಮಿಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸಂವಿಧಾನ ನೀಡುವ ಮೂಲಕ ಡಾ.ಅಂಬೇಡ್ಕರ ಸಂವಿಧಾನ ಶಿಲ್ಪಿಯಾಗಿದ್ದಾರೆ. ಅವರ ತತ್ವ ಸಿದ್ದಾಂತಗಳು ಮತ್ತು ಆದರ್ಶಗಳನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸಿದರೆ ಜೀವನದಲ್ಲಿ ಯಶಸ್ವಿ ಲಭಿಸಲಿದೆ. ಇಂದಿನ ತಂದೆ, ತಾಯಿಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದರೇ ತಾಲೂಕು ಜಿಲ್ಲೆಯ ಕೀರ್ತಿ ಹೆಚ್ಚಾಗಲಿದೆ ಎಂದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಲನ ಮಾತನಾಡಿ, ನಾನು ಸಹ ತಮಿಳನಾಡಿನ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆಯಲ್ಲಿ ಓದಿಕೊಂಡು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಎಲ್ಲ ವಿದ್ಯಾರ್ಥಿಗಳು ಇಷ್ಟಪಟ್ಟು ವಿದ್ಯಾಭ್ಯಾಸದೊಂದಿಗೆ ಹೆತ್ತ ತಂದೆ-ತಾಯಿ, ಕುಟುಂಬದ ಗ್ರಾಮದ ಋಣ ತೀರಿಸುವ ಕೆಲಸ ಮಾಡಬೇಕು. ಮಹಿಳೆಯರು ಸರಕಾರದ ಸಾಲ, ಸೌಲಭ್ಯಗಳನ್ನು ಪಡೆದು ಸ್ವಯಂ ಉದ್ಯೋಗದಲ್ಲಿ ತೊಡಗಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಹಣಮವ್ವ ಹಲಗಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಉಮೇಶ ಕೋರಿ, ಜಿ.ಪಂ.ಎಇಇ ವಿ.ಎ.ಗೌಡರ, ಲೋಕೋಪಯೋಗಿ ಇಲಾಖೆ ಅಭಿಯಂತರ ಐ.ಎಚ್.ಬಂಡಿವಡ್ಡರ, ಪಶು ವೈದ್ಯಾಧಿಕಾರಿ ಹೊಳೆಪ್ಪನ್ನವರ, ಎಡಿಎಲ್‌ಆರ್ ಅ ಕಾರಿ ಡಿ.ಬಿ.ಚಲವಾದಿ ಇದ್ದರು. ತಾಲೂಕಿನಲ್ಲಿ ನೂತನವಾಗಿ ಪಿಎಸ್‌ಐಗಳಾಗಿ ಆಯ್ಕೆಗೊಂಡಿರುವ ಐವರನ್ನು ಸನ್ಮಾನಿಸಲಾಯಿತು.