Advertisement

ಜಿಲ್ಲೆಗಿಲ್ಲ ಹಣ್ಣುಗಳ ರಾಜ ಮಾವು ಮೇಳದ ಭಾಗ್ಯ

03:29 PM May 25, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ 3 ವರ್ಷದಿಂದ ಸ್ಥಗಿತಗೊಂಡಿದ್ದ ಮಾವು ಮೇಳ ಮತ್ತೆ ಆಯೋಜನೆ ಮಾಡುವಲ್ಲಿ ಜಿಲ್ಲಾಡಳಿತ ಆಸಕ್ತಿ ತೋರದ ಕಾರಣ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಲ್ಲಿ ಈ ಬಾರಿಯೂ ಮಾವು ಮೇಳ ಗ್ರಾಹಕರ ಪಾಲಿಗೆ ಕನಸಿನ ಮಾತಾಗಿದೆ.

Advertisement

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶ ಹೊಂದಿರುವ ಹೆಗ್ಗಳಿಕೆ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳದ್ದು. ಅದರಲ್ಲೂ ಪಕ್ಕದ ಶ್ರೀನಿವಾಸಪುರ ಮೊದಲ ಸ್ಥಾನದಲ್ಲಿದ್ದರೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ತಾಲೂಕು 2ನೇ ಸ್ಥಾನದಲ್ಲಿದೆ. ವಾರ್ಷಿಕ 13 ಸಾವಿರಕ್ಕೂ ಅಧಿಕ ಹೆಕ್ಟೇರ್‌ ನಲ್ಲಿ ಜಿಲ್ಲಾದ್ಯಂತ ಮಾವು ಬೆಳೆಯಲಾಗುತ್ತಿದೆ.

ನೇರ ಮಾರಾಟ: ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಕಲ್ಪಿಸುವ ಜತೆಗೆ ಮಧ್ಯವರ್ತಿಗಳ ಹಾಗೂ ದಲ್ಲಾಳಿಗಳ ಕಾಟ ಇಲ್ಲದೇ ಗ್ರಾಹಕರಿಗೆ ನೇರವಾಗಿ ಮಾವು ಬೆಳೆಗಾರರಿಂದ ಮಾವು ಮಾರಾಟ ಮಾಡಲು ಪ್ರತಿ ವರ್ಷ ಜಿಲ್ಲೆಯಲ್ಲಿ ಮಾವು ಮೇಳ ಆಯೋಜಿಸಲಾಗುತ್ತಿತ್ತು. ಕಳೆದ 2019ರಲ್ಲಿಯೂ ಜಿಲ್ಲೆಯ ನಂದಿಬೆಟ್ಟ, ಚದಲುಪುರ ಕ್ರಾಸ್‌ನಲ್ಲಿ 2 ದಿನ ಮಾವು ಮೇಳ ಆಯೋಜಿಸಿ ಜಿಲ್ಲೆಯ ಮಾವು ಬೆಳೆಗಾರರಿಂದ ಮಳಿಗೆ ತೆರೆದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಮಾವು ಮೇಳ ಹೆಚ್ಚು ಆಕರ್ಷಣೆ ಜತೆಗೆ ಜನಪ್ರಿಯತೆ ಪಡೆದಿತ್ತು.

3 ವರ್ಷದಿಂದ ಮೇಳ ಸ್ಥಗಿತ: 3 ವರ್ಷದಿಂದ ಕೊರೊನಾ ಆವರಿಸಿದ ಪರಿಣಾಮ ಜಿಲ್ಲಾಡಳಿತ ಮಾವು ಮೇಳ ಆಯೋಜನೆಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಆದರೆ, ಕಳೆದ 2 ವರ್ಷದಿಂದ ಕೊರೊನಾ ತಗ್ಗಿದರೂ ಜಿಲ್ಲೆಯಲ್ಲಿ ಮಾವು ಮೇಳ ಆಯೋಜನೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸದಿರುವುದು ಏಕೆ ಎಂಬ ಪ್ರಶ್ನೆ ಮಾವು ಪ್ರಿಯರನ್ನು ಕಾಡುತ್ತಿದೆ. ಮಾವು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಲಕ್ಷಾಂತರ ಟನ್‌ ಮಾವು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. 2019 ರಲ್ಲಿ ಮಾವು ಮೇಳ ನಡೆದಿದ್ದು ಬಿಟ್ಟರೆ ಸತತ 3 ವರ್ಷದಿಂದ ಮೇಳ ಆಯೋಜನೆ ಆಗಿಲ್ಲ.

2019ರಲ್ಲಿ 2 ದಿನದಲ್ಲಿ 8 ಟನ್‌ ಮಾವು ಮಾರಾಟ!: ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದ ಅನಿರುದ್ಧ್ ಶ್ರವಣ್‌, ಜಿಪಂ ಸಿಇಒ ಆಗಿದ್ದ ಗುರುದತ್‌ ಹೆಗಡೆ ಆಗ ವಿಶೇಷ ಆಸಕ್ತಿ ವಹಿಸಿ 2019ರ ಮೇ 25, 26 ರಂದು ಜಿಲ್ಲೆಯ ನಂದಿಗಿರಿಧಾಮದಲ್ಲಿ ಮಾವು ಮೇಳ ಆಯೋಜಿಸಿದ್ದರು. ಈ ವೇಳೆ, ಬರೋಬ್ಬರಿ 2 ದಿನದಲ್ಲಿ 8 ಟನ್‌ನಷ್ಟು ಮಾವು ಮಾರಾಟ ಗೊಂಡಿತ್ತು. ಈ ಮೂಲಕ ಮಾವು ಬೆಳೆಗಾರರು ಲಕ್ಷಾಂತರ ರೂ., ಹಣ ಸಂಪಾದಿಸಿದ್ದರು. ನಿರೀಕ್ಷೆಗೂ ಮೀರಿ ಆಗ ಗ್ರಾಹಕರು ಮಾವು ಮೇಳಕ್ಕೆ ಸ್ಪಂದಿಸಿದ್ದರು. ಜತೆಗೆ ಮಾವು ಮೇಳಕ್ಕೆ ಜನರನ್ನು ಆಕರ್ಷಿಸಲು ಮಾವು ತಿನ್ನುವ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಆದರೆ ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡ ಮಾವು ಮೇಳವನ್ನು ಮತ್ತೆ ಆಯೋಜಿಸುವಲ್ಲಿ ಜಿಲ್ಲಾಡಳಿತ ಗಮನ ಹರಿಸದಿರುವುದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ.

Advertisement

ಜಿಲ್ಲೆಯ ಮಾವಿನ ಹಣ್ಣಿಗೆ ಜಾಗತಿಕ ಬೇಡಿಕೆ: ಜಿಲ್ಲೆಯಲ್ಲಿ ಬೆಳೆಯುವ ಬೇನಿಷಾ, ತೋತಾಪುರಿ, ಮಲ್ಲಿಕಾ, ಮಲ್ಗೊàಬಾ, ನೀಲಂ, ಸೇಂಧೂರ, ಬಗನಪಲ್ಲಿ, ರಸಪೂರಿ, ಬಾದಾಮಿ ಹೀಗೆ ತರಹೇವಾರಿ ಮಾವಿಗೆ ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಇದೆ. ಮಾವಿನ ಸುಗ್ಗಿ ಆರಂಭದಲ್ಲಿ ಮಾರುಕಟ್ಟೆ ಪ್ರವೇಶೀಸುವ ಬಾದಾಮಿ, ಬೇನಿಷಾಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ಜಿಲ್ಲೆಗೆ ವಾರಾಂತ್ಯದಲ್ಲಿ ನಂದಿಬೆಟ್ಟ, ಇಶಾ ಫೌಂಡೇಷನ್‌ಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರವಾಸಿಗರನ್ನು ಕೇಂದ್ರೀಕರಿಸಿ ಒಂದರೆಡು ದಿನ ಮಾವು ಮೇಳ ಆಯೋಜಿಸಿದರೆ ಜಿಲ್ಲೆಯ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಿದಂತಾಗುತ್ತದೆ ಎನ್ನುವ ಮಾತು ಬೆಳೆಗಾರರಿಂದ ಕೇಳಿ ಬರುತ್ತಿದೆ. ಅಲ್ಲದೇ, ಜಿಲ್ಲೆಯ ಜಿಲ್ಲಾಡಳಿತದ ಅಧಿಕಾರಿಗಳು ಮಾವು ಮೇಳ ಆಯೋಜಿಸುವ ದಿಕ್ಕಿನಲ್ಲಿ ರೈತಸ್ನೇಹಿ ನಿರ್ಧಾರ ತೆಗೆದುಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

ಕೇಳಿದರೂ ರೈತರು ಒಪ್ಪಲಿಲ್ಲ : ಜಿಲ್ಲೆಯಲ್ಲಿ ಈ ವರ್ಷ ಮಾವು ಮೇಳ ಆಯೋಜನೆ ಕುರಿತು ಸಿದ್ಧತೆಗಳು ಏನಾದರೂ ನಡೆದಿವೆಯೇ ಎಂಬುದರ ಕುರಿತು ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ ಅವರನ್ನು “ಉದಯವಾಣಿ’ ಸಂಪರ್ಕಿಸಿದಾಗ, ಕಳೆದ ವರ್ಷವೇ ಮಾವು ಮೇಳ ಆಯೋಜನೆ ಮಾಡುವ ಕುರಿತು ರೈತರಿಗೆ ಕೇಳಿದವು. ಅವರು ಒಪ್ಪಲಿಲ್ಲ. ಇಲ್ಲಿ ಮಾವು ಮೇಳ ಮಾಡಿದರೂ ಮಾವು ಮಾರಾಟ ಆಗುವುದಿಲ್ಲ. ಚಿಕ್ಕಬಳ್ಳಾಪುರದಲ್ಲಿ ಮಾವು ಅಂಗಡಿ ತೆರೆದರೂ ಮಾರಾಟ ಆಗಲ್ಲ. ರೈತರಿಗೂ ಇಲ್ಲಿ ಮಾರಾಟ ಮಾಡಲು ಆಸಕ್ತಿ ಇಲ್ಲ ಎಂದರು.

ಜಿಲ್ಲಾಡಳಿತ ಮಾವು ಮೇಳ ಆಯೋಜನೆ ಮಾಡುವುದರಿಂದ ಮಾವು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಜತೆಗೆ ಗ್ರಾಹಕರಿಗೂ ಗುಣಮಟ್ಟದ ಮಾವು ಸಿಗುತ್ತದೆ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಲಿ. -ಶ್ರೀನಿವಾಸರೆಡ್ಡಿ, ಜಿಲ್ಲಾಧ್ಯಕ್ಷರು, ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ, ಚಿಂತಾಮಣಿ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next