Advertisement

ಇನ್ನು ಮುಂದೆ ಸಿಇಟಿ, ನೀಟ್‌, ಪಿಜಿ ಸಿಇಟಿಗೆ ಒಂದೇ ಅರ್ಜಿ

12:34 AM Apr 06, 2022 | Team Udayavani |

ಬೆಂಗಳೂರು: ರಾಜ್ಯದ ವೈದ್ಯಕೀಯ ಕೋರ್ಸ್‌ ಆಕಾಂಕ್ಷಿಗಳ ವೃತ್ತಿಪರ ಕೋರ್ಸ್‌ ಗಳ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಸಲ್ಲಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮತ್ತಷ್ಟು ಸರಳಗೊಳಿಸಿದೆ.

Advertisement

ಜತೆಗೆ ಈ ವರ್ಷದಿಂದಲೇ ಜಾರಿಗೆ ಬರುವಂತೆ ಸಿಇಟಿ, ಪಿಜಿ ಸಿಇಟಿ, ನೀಟ್‌ ಮತ್ತು ಪಿಜಿ ನೀಟ್‌ಗೆ ಸಲ್ಲಿಸುವ ಸಾಮಾನ್ಯ ಅರ್ಜಿ ಎಲ್ಲ ಪರೀಕ್ಷೆಗೂ ಅನ್ವಯವಾಗಲಿದೆ. ಇದುವರೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿತ್ತು.

ವೃತ್ತಿಪರ ಕೋರ್ಸ್‌ಗಳಿಗೆ ನೋಂದಣಿ ಯಾಗುವವರಿಗೆ ವಿಶಿಷ್ಟ ಸಂಖ್ಯೆ (ಯೂನಿಕ್‌ ನಂಬರ್‌) ನೀಡಲಿದೆ. ಈ ನಂಬರ್‌ ಬಳಸಿ ಪಿಜಿ ಸಿಇಟಿಗೂ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳ ದತ್ತಾಂಶವನ್ನು ಕನಿಷ್ಠ 5 ವರ್ಷ ಸಂಗ್ರಹಿಸಿಡಲಾಗುತ್ತಿದೆ. ಈ ಅವಧಿಯಲ್ಲಿ ಪ್ರಾಧಿಕಾರ ನಡೆಸುವ ಎಲ್ಲ ಪರೀಕ್ಷೆಗಳಿಗೂ ಅರ್ಜಿ ಸಲ್ಲಿಸಬಹುದು.

ಈ ಯೂನಿಕ್‌ ನಂಬರ್‌ನಲ್ಲಿ ವಿದ್ಯಾರ್ಥಿಗಳ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಲಿವೆ. ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಪೋಷಕರ ಹೆಸರು, ವಿದ್ಯಾರ್ಥಿಗಳ ಎಸೆಸೆಲ್ಸಿ ಅಂಕಪಟ್ಟಿ, ಜಾತಿ, ಮೀಸಲಾತಿ ಸಹಿತ ಪ್ರಾಥಮಿಕ ಮಾಹಿತಿಗಳನ್ನು ಒಂದು ಬಾರಿ ಅಪ್‌ಲೋಡ್‌ ಮಾಡಿದರೆ ಸಾಕು. ಪ್ರತಿ ಅರ್ಜಿ ಸಲ್ಲಿಕೆ ವೇಳೆ ಉಳಿದ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಬಹುದು.

ಫೋನ್‌ ಪೇ, ಜಿ ಪೇ ಮೂಲಕ ಪಾವತಿ
ಇನ್ನು ಮುಂದೆ ಫೋನ್‌ಪೇ, ಗೂಗಲ್‌ ಪೇ, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡುಗಳ ಮೂಲಕವೂ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಡೆಬಿಟ್‌ ಕಾರ್ಡ್‌ ಅಥವಾ ಬ್ಯಾಂಕ್‌ಗಳ ಮೂಲಕ ಮಾತ್ರ ಪಾವತಿಸಬೇಕಿತ್ತು. ಇದೀಗ ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ.

Advertisement

ಇದನ್ನೂ ಓದಿ:ಡಾ| ಪ್ರಭಾಕರ ಭಟ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ವೀಡಿಯೋ ಮಾರ್ಗದರ್ಶನ
ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ವೇಳೆ ಕೆಲವು ಗೊಂದಲಗಳು ಉಂಟಾಗುವುದು ಸಹಜ. ಅದನ್ನು ಬಗೆಹರಿಸುವುದಕ್ಕಾಗಿ ಮತ್ತು ಅರ್ಜಿ ಸಲ್ಲಿಕೆ ಸರಳಗೊಳಿಸಲು ವೀಡಿಯೋ ಮಾರ್ಗದರ್ಶನ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ವಿಧಾನ, ಕೋರ್ಸುಗಳ ಆಯ್ಕೆ, ಹೆಸರು, ವಿಳಾಸ, ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿಗಳು, ಕಲ್ಯಾಣ ಕರ್ನಾಟಕ, ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಸಹಿತ ವಿವಿಧ ಮೀಸಲಾತಿ ಮಾಹಿತಿ, ವಿದ್ಯಾಭ್ಯಾಸದ ಮಾಹಿತಿ ದಾಖಲಿಸುವ ವೇಳೆ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇಂತಹ ತಪ್ಪುಗಳು ಸಂಭವಿಸದಿರಲಿ ಎಂಬ ಉದ್ದೇಶದಿಂದ ಈ ವೀಡಿಯೋವನ್ನು ಪ್ರಾಧಿಕಾರದ ವೆಬ್‌ಸೈಟ್‌ ಮತ್ತು ಎಲ್ಲ ಕಾಲೇಜುಗಳಿಗೆ ಕಳುಹಿಸಲಾಗುತ್ತಿದೆ. ಪ್ರತಿ ಕಾಲೇಜಿನ ಉಪನ್ಯಾಸಕರೊಬ್ಬರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ 1 ವಾರ ವಿಳಂಬ
ರಾಜ್ಯ ಸರಕಾರ ಈಗಾಗಲೇ ಘೋಷಿಸಿರುವ ವೇಳಾ ಪಟ್ಟಿ ಪ್ರಕಾರ, ಮಂಗಳವಾರದಿಂದ (ಎ.5) ಅರ್ಜಿ ಸಲ್ಲಿಕೆ ಆರಂಭವಾಗಬೇಕಿತ್ತು. ತಾಂತ್ರಿಕವಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುತ್ತಿರುವ ಕಾರಣ ಸ್ವಲ್ಪ ವಿಳಂಬವಾಗಿದೆ. ಎ.11 ಅಥವಾ 12ರಂದು ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಸ್ಪಷ್ಟಪಡಿಸಿದ್ದಾರೆ.

-ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next