ಹೆಬ್ರಿ : ಇನ್ನು ಮುಂದೆ ವೃದ್ಯಾಪ್ಯ ವೇತನಕ್ಕೆ ತಾಲೂಕು ಕಚೇರಿಗಳಿಗೆ ಅಲೆಯಬೇಕಾಗಿಲ್ಲ.ಸರಕಾರ ಅವರ ದಾಖಲೆಯನ್ನು ಪರಿಶೀಲಿಸಿ ಅವರ ಮನೆಬಾಗಿಲಿಗೆ ಬಂದು ಆರ್ಹರಿಗೆ ವೃದ್ಯಾಪ್ಯ ವೇತನ ಹಾಗೂ ಇತರ ಮಾಶಾಸನಗಳನ್ನು ನೀಡುತ್ತಿದ್ದು ,ಮೊದಲಿಗೆ ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡು ನಂತರ ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಅವರು ಡಿ.8 ರಂದು 10ಕೋಟಿ ವೆಚ್ಚದ ಹೆಬ್ರಿ ತಾಲೂಕು ಮಿನಿ ವಿಧಾನ ಸೌಧ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಹೆಬ್ರಿ ಅಭಿವೃದ್ಧಿಗೆ ವಿಶೇಷ ಒತ್ತು : ಹೆಬ್ರಿಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದರ ಜತೆಗೆ ಈಗಾಗಲೇ ಕಾರ್ಕಳ ಶಾಸಕರು ನೀಡಿದ ಮನವಿಯಂತೆ ಕಂದಾಯ ಇಲಾಖೆಯಿಂದ ಆಗಬೇಕಾದ ಎಲ್ಲಾ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲಾಗುವುದು ಎಂದು ಸಚಿವರು ಹೇಳಿದರು.
ಹೆಬ್ರಿ ತಾಲೂಕು ಮೊದಲು : ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಬ್ರಿ ತಾಲೂಕು ನಿರಂತರ ಹೋರಾಟದ ಫಲವಾಗಿ ಕೊನೆಗೆ 2 ನೇ ಪಟ್ಟಿಯಲ್ಲಿ ಘೋಷಣೆಯಾಗಿದೆ. ಆದರೆ ಇದರ ಮೊದಲು ಘೋಷಣೆಯಾದ ಉಡುಪಿ ಜಿಲ್ಲೆಯ ನೂತನ ತಾಲೂಕುಗಳಲ್ಲಿ ಇನ್ನೂ ಮಿನಿವಿಧಾನ ಸೌಧ ಕಟ್ಟಡಕ್ಕೆ ಶಿಲಾನ್ಯಾಸವಾಗದೇ ಹೆಬ್ರಿ ತಾಲೂಕು ಮೊದಲು ಆಗಿದೆ.ಇದಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂ.ಹಣವನ್ನು ಮಂಜೂರಾತಿ ಮಾಡಿರುವುದು ಹೆಮ್ಮೆಯ ಸಂಗತಿ.ಹಲವು ವಿಭಾಗಗಳನ್ನೊಳಗೊಂಡ ಸುಂದರವಾದ ತಾಲೂಕು ಕಛೇರಿ ಮುಂದಿನ 15ತಿಂಗಳುಗಳಲ್ಲಿ ನಿರ್ಮಾಣವಾಗಲಿದೆ ಎಂದರು.
ಸಮಾರಂಭದಲ್ಲಿ ಕಾರ್ಕಳ ತಾ.ಪಂ.ಅಧ್ಯಕ್ಷೆ ಸೌಭಾಗ್ಯ ಮಡಿವಾಳ , ಜಿ.ಪಂ.ಸದಸ್ಯೆ ಸುಪ್ರೀತಾ ಕುಲಾಲ್ ,ಹೆಬ್ರಿ ಗ್ರಾ.ಪಂ.ಅಧ್ಯಕ್ಷ ಹೆಚ್.ಕೆ.ಸುಧಾಕರ , ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ , ಕುಂದಾಪುರ -ಉಪವಿಭಾಗದ ಕ.ಆ.ಸೇ.ಸಹಾಯಕ ಆಯುಕ್ತರು ಕೆ.ರಾಜು ,ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು,ಜಯವರ್ಮ ಜೈನ್ ,ಡಾ|ಹರ್ಷ ,ಗುತ್ತಿಗೆದಾರ ವಾಸುದೇವ ಶೆಟ್ಟಿ ,ತಾ.ಪಂ.ಸದಸ್ಯರಾದ ಚಂದ್ರಶೇಖರ್ ಶೆಟ್ಟಿ ,ರಮೇಶ್ ಪೂಜಾರಿ ,ಸುಲತಾ ನಾಯ್ಕ ,ಅಮೃತ್ ಕುಮಾರ್ ಶೆಟ್ಟಿ ,ಲಕ್ಷ್ಮೀ ದಯಾನಂದ್ ,ಬೆಳ್ವೆ ಚಂದ್ರಶೇಖರ್ ಶೆಟ್ಟಿ ,ಹೆಬ್ರಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಭಾಸ್ಕರ್ ಜೋಯಿಸ್ ,ಹೆಬ್ರಿ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾ. ಪಂ. ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 94ಸಿ ಹಕ್ಕು ಪತ್ರ ಮತ್ತು ವೃದ್ಯಾಪ್ಯ ವೇತನವನ್ನು ವಿತರಿಸಲಾಯಿತು.ಹೆಬ್ರಿ ಜಿ.ಪಂ.ಸದಸ್ಯೆ ಜ್ಯೋತಿ ಹರೀಶ್ ಪ್ರಸ್ತಾವನೆಗೈದರು.ಹೆಬ್ರಿ ತಹಶೀಲ್ದಾರ್ ಕೆ.ಮಹೇಶ್ ಚಂದ್ರ ಸ್ವಾಗತಿಸಿ ,ನಿತ್ಯಾನಂದ ಶೆಟ್ಟಿ ಮತ್ತು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ,ಸೀತಾನದಿ ವಿಠuಲ ಶೆಟ್ಟಿ ವಂದಿಸಿದರು.
ಶಾಸಕರಿಂದ ಸಚಿವರಿಗೆ ಮನವಿ
– ಉಡುಪಿಯಲ್ಲಿ ಪ್ರತ್ಯೇಕ ಕಂದಾಯ ಉಪವಿಭಾಗ ಅಧಿಕಾರಿ ಕಚೇರಿ ಆಗಬೇಕು.
– ಅಜೆಕಾರು ಹೋಬಳಿಯನ್ನು ಬಿಟ್ಟು ಹೆಬ್ರಿಗೆ ಪ್ರತ್ಯೇಕ ಹೋಬಳಿ ಮಾಡುವಂತೆ
– 5 ಸೆನ್ಸ್ ಜಾಗವನ್ನು ಮಾರಲು ಬೆಂಗಳೂರಿಗೆ ಹೋಗಬೇಕಾಗಿದ್ದು ,ಇದನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸುವಂತೆ .
– ಕಸ್ತೂರಿ ರಂಗನ್ ವರದಿ ಜನವಸತಿಗೆ ತೊಂದರೆಯಾಗದಂತೆ ತಿದ್ದುಪಡಿ
– ಆಧಾರ್ ತಿದ್ದುಪಡಿಯನ್ನು ಗ್ರಾಮ ಪಂಚಾಯತ್ ನಿರ್ವಹಿಸುವಂತೆ
– ಹೆಬ್ರಿ ತಾಲೂಕಿಗೆ ಸುತ್ತಮುತ್ತಲಿನ ಇನ್ನಷ್ಟು ಗ್ರಾಮಗಳನ್ನು ಸೇರಿಸಿಕೊಂಡು ಬಲಿಷ್ಠ ತಾಲೂಕಾಗಿ ಮಾರ್ಪಾಡು ಮಾಡುವಂತೆ ಶಾಸಕರು ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.