ನವದೆಹಲಿ: ಭಾರತದ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಆಯೋಗ ನೀಡಿರುವ ಹೇಳಿಕೆ ಅಸಮರ್ಪಕವಾದದ್ದು ಮತ್ತು ಅನಗತ್ಯವಾದದ್ದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿರುಗೇಟು ನೀಡಿದೆ.
ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವುದು ತೀವ್ರ ಸಮಸ್ಯೆಗೆ ಎಡೆ ಮಾಡಿಕೊಡಲಿದೆ ಎಂದು ಸೋಮವಾರ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಆಯೋಗ(ಯುಎಸ್ ಸಿಐಆರ್ ಎಫ್) ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು.
ಒಂದು ವೇಳೆ ಲೋಕಸಭೆಯ ಉಭಯ ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಮುಖ್ಯ ನಾಯಕರ ವಿರುದ್ಧ ನಿರ್ಬಂಧ ವಿಧಿಸಬೇಕು ಎಂದು ಅಮೆರಿಕಕ್ಕೆ ಕಮಿಷನ್ ಮನವಿ ಮಾಡಿಕೊಂಡಿತ್ತು.
ಮಸೂದೆ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕ, ದೇಶದ ಪೌರತ್ವ ತಿದ್ದುಪಡಿ ಸಮರ್ಪಕವಾಗಿರಲಿ ಅಥವಾ ಅಗತ್ಯ ಅಪೇಕ್ಷಿತವಾಗಿರಲಿ. ಆದರೆ ಈ ಮಸೂದೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಮೂಲಕ ರಕ್ಷಣೆ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವಾಲಯದ ಪ್ರಕಟಣೆ ವಿವರಿಸಿದೆ.
ಈ ವಿಚಾರದಲ್ಲಿ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಆಯೋಗ ಯಾವುದೇ ಅಧಿಕಾರ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಪೌರತ್ವ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಅಂಗೀಕಾರಗೊಂಡಿತ್ತು. ಆದರೆ ಈ ಮಸೂದೆ ಸಂವಿಧಾನದ ವಿರೋಧಿಯಾಗಿದ್ದು, ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿರಿಸಿಕೊಂಡಿರುವುದಾಗಿ ವಿಪಕ್ಷಗಳು ಆರೋಪಿಸಿದ್ದವು.