ಮುಂಬಯಿ, ಎ. 27: ಮಹಾರಾಷ್ಟ್ರ ಸರಕಾರವು ಮೇ 3ರ ಅನಂತರ ರಾಜ್ಯದ ಕೋವಿಡ್ 19 ವೈರಸ್ ಪೀಡಿತ ನಗರ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ನಿಯಮವನ್ನು ಮುಂದುವರಿಸಬಹುದು ಎಂದು ರಾಜ್ಯ ಸರಕಾರಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮುಂಬಯಿ, ಪುಣೆ, ನಾಸಿಕ್, ನಾಗಪುರ, ಔರಂಗಾಬಾದ್ ಮತ್ತು ಅಮರಾವತಿ ನಗರಗಳ ಹೊರಗಿನ ಪ್ರದೇಶಗಳಲ್ಲಿನ ಕೋವಿಡ್ 19 ಸೋಂಕು ಪರಿಸ್ಥಿತಿಯನ್ನು ರಾಜ್ಯ ಸರಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದವರು ತಿಳಿಸಿದ್ದಾರೆ. ಈ ನಗರಗಳಲ್ಲಿ ಹೆಚ್ಚಿನ ಸೋಂಕು ಕಂಡುಬಂದಿದೆ ಎಂದು ಅವರು ಹೇಳಿದರು.
ರಾಜ್ಯದ ಗ್ರಾಮೀಣ ಮತ್ತು ಕಡಿಮೆ ಪೀಡಿತ ಪ್ರದೇಶಗಳಲ್ಲಿ ಮೇ 3ರ ಅನಂತರ ಕಟ್ಟುನಿಟ್ಟಿನ ಲಾಕ್‌ಡೌನ್ ಕ್ರಮಗಳನ್ನು ಸಡಿಲಿಕೆ ಮಾಡಬಹುದು. ನಾವು ಸನ್ನಿವೇಶವನ್ನು ನೋಡುತ್ತಿದ್ದೇವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಂಪರ್ಕಿಸಲಾಗಿದೆ ಎಂದು
ಅವರು ಹೇಳಿದರು. ಪುಣೆ ಜಿಲ್ಲೆಯ
ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಕೋವಿಡ್ 19 ವೈರಸ್ ಪ್ರಕರಣಗಳ ಹೊರತಾಗಿಯೂ, ಅಲ್ಲಿನ ಕೈಗಾರಿಕೆಗಳು ಪುನರಾರಂಭಗೊಂಡಿಲ್ಲ ಏಕೆಂದರೆ ಅವರ ಹೆಚ್ಚಿನ ಉದ್ಯೋಗಿಗಳು ನಗರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ನಾವು ಪ್ರತಿ ನಗರ ಅಥವಾ ಜಿಲ್ಲಾವಾರು ಪ್ರದೇಶಗಳಲ್ಲಿ ದಿನನಿತ್ಯದ ವಹಿವಾಟು ಸರಾಗವಾಗಿ ನಡೆಯುವಂತೆ ಮಾಡಲು ಕೆಲವು ಯೋಜನೆಗಳನ್ನು ರೂಪಿಸಬೇಕಾಗಿದೆ. ಪರಿಹಾರಗಳನ್ನು ತರಲು ಆಡಳಿತಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಮೇ 3ರಿಂದ ರಾಜ್ಯದ ಎಲ್ಲ ಭಾಗಗಳಲ್ಲಿ ಲಾಕ್‌ಡೌನ್ ನಿಯಮವನ್ನು ತೆರವುಗೊಳಿಸಲು ಸಾಧ್ಯತೆವಿಲ್ಲ ಎಂದವರು ತಿಳಿಸಿದ್ದಾರೆ.