Advertisement

ಮತ್ತೆ ಲಾಕ್‌ಡೌನ್‌ ಬೇಡ : ತಜ್ಞರು, ರೈತರು, ಉದ್ಯಮಿ, ವರ್ತಕರು, ವೈದ್ಯರ ಸಲಹೆ

12:38 AM Mar 29, 2021 | Team Udayavani |

ಬೆಂಗಳೂರು: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ನೈಟ್‌ ಕರ್ಫ್ಯೂ ವಿಧಿಸಲಾಗಿದ್ದು, ಲಾಕ್‌ಡೌನ್‌ ಚಿಂತನೆ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಇಂಥ ಪ್ರಸ್ತಾವ ಕೇಳಿಬಂದಿದ್ದು, ವಿವಿಧ ಕ್ಷೇತ್ರಗಳ ತಜ್ಞರು ಲಾಕ್‌ಡೌನ್‌ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಲಾಕ್‌ಡೌನ್‌: ತಜ್ಞರು ಹೇಳುವುದೇನು?
ಕಳೆದ ಲಾಕ್‌ಡೌನ್‌ನಿಂದ ಆರ್ಥಿಕತೆ ಮೇಲೆ ಪೆಟ್ಟು ಬಿದ್ದಿದೆ. ಹೀಗಾಗಿ ಲಾಕ್‌ಡೌನ್‌ಗಿಂತ ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಜ್ಞರು. ಸಾಮಾನ್ಯ ಜನತೆ ಅಭಿಪ್ರಾಯ ಪಟ್ಟಿದ್ದಾರೆ.

ಸಚಿವರಲ್ಲಿ ಪರೀಕ್ಷೆ ಗೊಂದಲ
1ರಿಂದ 9ನೇ ತರಗತಿಯವರೆಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಇಬ್ಬರು ಸಚಿವರಲ್ಲೇ ಗೊಂದಲ ಏರ್ಪಟ್ಟಿದೆ. ಪ್ರಸಕ್ತ ವರ್ಷವೂ 1ರಿಂದ 9ನೇ ವರೆಗೆ ಪರೀಕ್ಷೆ ಇಲ್ಲದೆ ಉತ್ತೀರ್ಣ ಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ|ಸುಧಾಕರ್‌ ಹೇಳಿದರೆ, ಇಂಥ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸುವ ಕುರಿತು ಸಿಎಂ ಅವರು ಶಿಕ್ಷಣ ಸಚಿವರು, ಗೃಹ ಮತ್ತು ಕಂದಾಯ ಸಚಿವರೊಂದಿಗೆ ಚರ್ಚಿಸಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್‌ ಹೇಳಿದರು.

ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಇಂಥ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಈ ಬಗ್ಗೆ ಇಲಾಖೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದಿದ್ದಾರೆ.

Advertisement

ತಜ್ಞರ ಸಲಹೆಗಳು
1 ಕೊರೊನಾ ಲಸಿಕೆ ಸಿಕ್ಕಿದೆ, ಎಲ್ಲರಿಗೂ ಕೊಡಿ.
2 ಜಾತ್ರೆಗಳ ಮೇಲೆ ನಿರ್ಬಂಧ ಹೇರಿದರೆ ಸಾಲದು, ರಾಜಕೀಯ ಕಾರ್ಯಕ್ರಮಗಳ ಮೇಲೂ ನಿಯಂತ್ರಣ ಇರಲಿ.
3 ನಿಯಮ ಪಾಲಿಸದವರಿಗೆ ದಂಡ ವಿಧಿಸಿ.
4 ಮದುವೆ, ಸಮಾರಂಭಗಳಂಥ ಕಡೆ ಹೆಚ್ಚು ಜನ ಸೇರದಿರಲಿ.
5 ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಿ.
6 ಬೇರೆ ರಾಜ್ಯಗಳ ಸಂಚಾರ ಮುಂದೂಡಿ.
7 ಲಸಿಕೆ ಪಡೆದವರಿಗೆ ಮಾತ್ರ ರೈಲ್ವೇ, ಬಸ್‌, ವಿಮಾನ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ಕೊಡಿ.
8 ಡಿಜಿಟಲ್‌ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿ.

ಇಂದು ಸಿಎಂ ಸಭೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಕುರಿತು ಸಿಎಂ ಬಿಬಿಎಂಪಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ರಾತ್ರಿ ಕರ್ಫ್ಯೂ ಹೇರಿದರೆ ಸಾಧಕ ಬಾಧಕಗಳು, ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಮಾಡಿದರ ಪರಿಣಾಮಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

“ಮಹಾ’ ಮತ್ತೆ ಲಾಕ್‌ಡೌನ್‌?
ಲಾಕ್‌ಡೌನ್‌ ಅನಿವಾರ್ಯ. ಇದಕ್ಕಾಗಿ ಸಿದ್ಧತೆ ಆರಂಭಿಸಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ರವಿವಾರ ಕೊರೊನಾ ಟಾಸ್ಕ್ ಫೋರ್ಸ್‌ ಮತ್ತು ಹಿರಿಯ ಸಚಿವರ ಜತೆ ಅವರು ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ಹೆಚ್ಚಳ  ಬಗ್ಗೆ ಟಾಸ್ಕ್ ಫೋರ್ಸ್‌ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಆಗ ಸಿಎಂ ಲಾಕ್‌ಡೌನ್‌ ಪ್ರಸ್ತಾವಿಸಿದ್ದಾರೆ.

ರಾಜ್ಯದಲ್ಲಿ ಅಭಿಪ್ರಾಯ
ಲಾಕ್‌ಡೌನ್‌ ಬೇಕೇ -ಬೇಡವೇ ಎಂಬ ಬಗ್ಗೆ ರಾಜ್ಯಾದ್ಯಂತ “ಉದಯವಾಣಿ’ ಅಭಿಪ್ರಾಯ ಸಂಗ್ರಹ ಮಾಡಿದೆ. ಜನರ ಜತೆ ಸಂಪರ್ಕದಲ್ಲಿರುವ ವೈದ್ಯರು, ವರ್ತಕರು, ಉದ್ಯಮಿಗಳು, ರೈತರ ಅಭಿಪ್ರಾಯ ಕೇಳಲಾಗಿತ್ತು. ಇವರೆಲ್ಲರೂ ಒಕ್ಕೊರಲಿನಿಂದ ಲಾಕ್ಡೌನ್‌ ಬೇಡ ಎಂದಿದ್ದಾರೆ.

ಇನ್ನೊಮ್ಮೆ ಲಾಕ್‌ಡೌನ್‌ ಆದರೆ ಆರ್ಥಿಕತೆಗೆ ಈ ಮೊದಲಿನ ಲಾಕ್‌ಡೌನ್‌ಗಿಂತಲೂ ಅಧಿಕ ಹೊಡೆತ ಬೀಳುವ ಸಾಧ್ಯತೆ ಇದೆ. ನಮ್ಮ ಮುಂದಿರುವ ದಾರಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆ, ಸ್ಯಾನಿಟೈಸರ್‌ ಬಳಕೆ ಇತ್ಯಾದಿ ನಿಯಮ ಪಾಲನೆ. ಅಗತ್ಯ ಪ್ರಯಾಣಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಈ ನಿಯಮಗಳಲ್ಲಿ ಆಯ್ಕೆಗೆ ಅವಕಾಶ ನೀಡುವ ಕ್ರಮ ಅನುಸರಿಸಿದರೆ ಪರಿಹಾರ ಸಿಗಲಾರದು.
– ಐಸಾಕ್‌ ವಾಸ್‌, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಮಂಗಳೂರು.

ಮತ್ತೆ ಲಾಕ್‌ಡೌನ್‌ ಆದರೆ ಸಾಮಾನ್ಯರು, ಮಧ್ಯಮ ವರ್ಗದವರಿಗೆ ಬದುಕು ಕಷ್ಟವಾಗುತ್ತದೆ. ಈ ಹಿಂದೆ ಲಾಕ್‌ಡೌನ್‌ ಇದ್ದಾಗ ಮಲ್ಪೆ ಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡ ಕಾರಣ ಸೋಂಕು ಹರಡಲಿಲ್ಲ. ಈಗ ಲಸಿಕೆ ಪಡೆಯುವುದು, ದೈಹಿಕ ಅಂತರ, ಸ್ಯಾನಿಟೈಸರ್‌ ಬಳಕೆ ಸೂಕ್ತ.
– ಕೃಷ್ಣ ಎಸ್‌. ಸುವರ್ಣ,  ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ, ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next