Advertisement

ಬಿಡಿಎಗೆ ಬೇಡವಾದ ಪರವಾನಗಿ ಶುಲ್ಕ

10:28 AM Feb 08, 2020 | Suhan S |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆದಾಯ ಮೂಲಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಮತ್ತು ಮಳಿಗೆಗಳ ವಾರ್ಷಿಕ ಪರವಾನಗಿ ಶುಲ್ಕವೂ ಸೇರಿದೆ. ಆದರೆ, 2 ವರ್ಷಗಳಿಂದ ನಿಗದಿತ ಗುರಿಯ ಶೇ.20ರಷ್ಟು ಶುಲ್ಕವನ್ನೂ ಬಿಡಿಎ ಸಂಗ್ರಹಿಸಿಲ್ಲ ಎಂಬುದು ವಿಪರ್ಯಾಸ!

Advertisement

ಬಿಡಿಎ ಅಧೀನದಲ್ಲಿ ಇಂದಿರಾನಗರ, ಎಚ್‌ಎಸ್‌ ಆರ್‌ ಲೇಔಟ್‌, ಆರ್‌.ಟಿ.ನಗರ, ಆಸ್ಟಿನ್‌ ಟೌನ್‌, ಕೋರಮಂಗಲ, ವಿಜಯನಗರ, ಸದಾಶಿವನಗರ ಸೇರಿ ವಿವಿಧೆಡೆ ಹಲವು ವಾಣಿಜ್ಯ ಸಂಕೀರ್ಣಗಳು, 797 ಮಳಿಗೆಗಳಿವೆ. 2019ರಲ್ಲಿ ವಾರ್ಷಿಕ ಪರವಾನಗಿ ಶುಲ್ಕ 36.02 ಕೋಟಿ ರೂ. ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದ ಪ್ರಾಧಿಕಾರದ ಅಧಿಕಾರಿಗಳು ಇದುವರೆಗೆ ಸಂಗ್ರಹಿಸಿರುವುದು 5 ಕೋಟಿ ರೂ. ಮಾತ್ರ!

ಪ್ರಾಧಿಕಾರದಲ್ಲಿನ ಎಸ್ಟೇಟ್‌ ವಿಭಾಗವು ವಾಣಿಜ್ಯ ಸಂಕೀರ್ಣಗಳಲ್ಲಿನ ಅಂಗಡಿ ಮತ್ತು ಮಳಿಗೆಗಳ ಹರಾಜು ಮಾರಾಟದ ಮೇಲುಸ್ತುವಾರಿ ಹಾಗೂ ಪರವಾನಗಿ ಶುಲ್ಕ ವಸೂಲಾತಿ ಮಾಡುತ್ತದೆ. 2018ರಲ್ಲಿ 31.58 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, 5.61 ಕೋಟಿಸಂಗ್ರಹಿಸಿದೆ. 25.97 ಕೋಟಿ ರೂ. ಶುಲ್ಕ ಬಾಕಿ ಇದೆ. 2019ರಲ್ಲಿ 36.02 ಕೋಟಿ ರೂ. ಗುರಿ ಇದ್ದು, 5.80 ಕೋಟಿ ರೂ. ಸಂಗ್ರಹಿಸಿದ್ದು, 30.21 ಕೋಟಿ ರೂ. ಬಾಕಿ ಉಳಿದಿದೆ.

ಬಿಡಿಎ ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡುವಾಗ ಯಾವುದೇ ಕಾರಣಕ್ಕೂ ಉಪಗುತ್ತಿಗೆ ನೀಡಬಾರದು, ಪರಭಾರೆ ಮಾಡಬಾರದು, ಬೇರೆಯವರಿಗೆ ಬಾಡಿಗೆ ನೀಡಬಾರದು ಎಂಬ ಷರತ್ತು ಗಳಿವೆ. ಒಂದು ವೇಳೆ ಷರತ್ತು ಉಲ್ಲಂ ಸಿದರೆ ಗುತ್ತಿಗೆ ರದ್ದು ಮಾಡಲು ಅವಕಾಶ ಇರುತ್ತದೆ. ಪ್ರಸ್ತುತ ಮೂಲ ಹಂಚಿಕೆದಾರರು ಮಳಿಗೆಗಳನ್ನು ಉಪಯೋಗಿಸದೇ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದ್ದು, ಪರವಾನಗಿ ಶುಲ್ಕ ವಸೂಲಾತಿ ಆಗದಿರಲು ಇದು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಅಧಿಕಾರಿಗಳ ಕೊರತೆ?: ಬಿಬಿಎಂಪಿಯಲ್ಲಿ ವಾಣಿಜ್ಯ ಸಂಕೀರ್ಣಗಳ ಬಾಡಿಗೆ ವಸೂಲಾತಿಗೆ ಕಂದಾಯ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವಿದ್ದು, ಗುರಿಯಷ್ಟು ಬಾಡಿಗೆ ವಸೂಲಿ ಆಗುತ್ತಿದೆ. ಆದರೆ, ಬಿಡಿಎನಲ್ಲಿ ಎಸ್ಟೇಟ್‌ ವಿಭಾಗವು ವಾಣಿಜ್ಯ ಸಂಕೀರ್ಣಗಳಲ್ಲಿ ಬಾಡಿಗೆ ವಸೂಲಿ ಮಾತ್ರವಲ್ಲದೇ ಪ್ರಾಧಿಕಾರದ ಜಮೀನು ಒತ್ತುವರಿ ಗುರುತಿಸುವುದು, ಒತ್ತುವರಿ ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆದು ಬೇಲಿ ಹಾಕುವುದು, ಸುಪರ್ದಿಗೆ ತೆಗೆದುಕೊಂಡ ಜಮೀನಿನಲ್ಲಿ ಬಡಾವಣೆ ರಚಿಸುವಲ್ಲಿ ಪ್ರಮುಖಪಾತ್ರ ವಹಿಸಲಿದೆ. ಹೀಗೆ ವಿವಿಧ ಕಾರ್ಯಗಳಿದ್ದು, ವಸೂಲಾತಿ ಕಡಿಮೆಯಾಗಿದೆ ಎಂಬ ಆರೋಪಗಳಿವೆ.”ವಾಣಿಜ್ಯ ಸಂಕೀರ್ಣ ಮತ್ತು ಮಳಿಗೆಗಳಿಂದ ಗುರಿಯಷ್ಟು ಪರವಾನಗಿ ಶುಲ್ಕ ಸಂಗ್ರಹವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶುಲ್ಕ ನೀಡದವರಿಗೆ ಬಿಡಿಎಯಿಂದ ನೋಟಿಸ್‌ ನೀಡಲಾಗಿದೆ. ಶೀಘ್ರ ಪಾವತಿ ಮಾಡದಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

 

ವಾರ್ಷಿಕ ಪರವಾನಗಿ ಶುಲ್ಕ ಪಾವತಿಸದವರ ಪಟ್ಟಿ ಸಿದ್ಧಪಡಿಸಿ ಅಂತವರಿಗೆ ನೋಟಿಸ್‌ ನೀಡಲಾಗಿದೆ. ಶುಲ್ಕ ಪಾವತಿಸಲು ಸಮಯಾವಕಾಶ ನೀಡಲಾಗಿದ್ದು, ಅಷ್ಟರಲ್ಲಿ ಕಟ್ಟದಿದ್ದರೆ ಮಳಿಗೆಯಿಂದ ತೆರವುಗೊಳಿಸಲಾಗುವುದು.  ಡಾ.ಜಿ.ಸಿ.ಪ್ರಕಾಶ್‌, ಬಿಡಿಎ ಆಯುಕ್ತ

 

-ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next