Advertisement

ಪ್ರಜಾಸತ್ತೆ ಬಗ್ಗೆ ನಿಮ್ಮಿಂದ ನಮಗೆ ಪಾಠ ಬೇಡ: ಪಾಕಿಗೆ ಮೋದಿ

04:36 PM Dec 11, 2017 | Team Udayavani |

ಹೊಸದಿಲ್ಲಿ : ಗುಜರಾತ್‌ ಚುನಾವಣೆಯಲ್ಲಿ ಪಾಕಿಸ್ಥಾನ ಹಸ್ತಕ್ಷೇಪ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ ಬೆನ್ನಿಗೇ ಪಾಕ್‌ ವಿದೇವ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌ ಅವರು ಟ್ವಿಟರ್‌ನಲ್ಲಿ  ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿ ಸರಕಾರ ಪಾಕಿಗೆ ಖಡಕ್‌ ಉತ್ತರ ನೀಡಿದೆ.

Advertisement

“ಭಾರತ ತನ್ನ ಆಂತರಿಕ ಚುನಾವಣಾ ಚರ್ಚೆಗಳಲ್ಲಿ ಪಾಕಿಸ್ಥಾನವನ್ನು ಎಳೆದು ತರುವುದನ್ನು ನಿಲ್ಲಿಸಬೇಕು; ಭಾರತೀಯ ಜನತಾ ಪಕ್ಷ ತನ್ನ ಸ್ವಂತ ಬಲದಲ್ಲಿ ಚುನಾವಣೆಗಳನ್ನು ಗೆಲ್ಲಬೇಕೇ ವಿನಾ ನಿರಾಧಾರವೂ ಹೊಣೆಗೇಡಿತನದ್ದೂ ಆದ ತಥಾಕಥಿತ ಪಿತೂರಿ ಬಲದಿಂದಲ್ಲ’ ಎಂದು ಫೈಸಲ್‌ ಟೀಕಿಸಿದ್ದರು.

ಇದಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ಸರಕಾರ “ಇದೊಂದು ಅನಪೇಕ್ಷಿತ ಹೇಳಿಕೆ; ಪಾಕಿಸ್ಥಾನ ನಮಗೆ ಪಾಠ ಮಾಡುವುದನ್ನು ನಿಲ್ಲಿಸಬೇಕು’ ಎಂದು ಖಡಕ್‌ ಆಗಿ ಹೇಳಿದೆ.

“ಭಾರತದ ಆಂತರಿಕ ವ್ಯವಹಾರಗಳಲ್ಲಿ ಹೊರಗಿನವರು ಹಸ್ತಕ್ಷೇಪ ನಡೆಸುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಭಾರತದಲ್ಲಿ  ಪಾಕಿಸ್ಥಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪಾಕಿಸ್ಥಾನ ನಮಗೆ ಪಾಠ ಮಾಡುವುದನ್ನು ನಿಲ್ಲಿಸಬೇಕು; ನಮ್ಮ ಪ್ರಜಾಸತ್ತೆಯ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಕೂಡ ಪಾಕಿಗೆ ಬುದ್ದಿವಾದ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next