ಬೆಂಗಳೂರು: ಪಾಲಿಕೆ ಸದಸ್ಯರ ವಿಶೇಷ ಅನುದಾನದಡಿ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ನೀಡುವ ವಿಚಾರದಲ್ಲೂ ಈಗ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಬೆನ್ನಲ್ಲೇ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆ ತಾತ್ಕಾಲಿಕವಾಗಿ ತಡೆಹಿಡಿಯಲು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮೌಖೀಕ ಆದೇಶ ನೀಡಿದ್ದಾರೆ.
ಕೋವಿಡ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣ ಪ್ರಾರಂಭವಾಗಿದ್ದು, ನಗರದ ಬಡ ಮಕ್ಕಳಿಗೆ ಪಾಲಿಕೆ ಸದಸ್ಯರ ವಿಶೇಷ ಅನುದಾನಲ್ಲಿ ಟ್ಯಾಬ್ ಹಾಗೂ ಲ್ಯಾಪ್ ಟಾಪ್ ನೀಡುವ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದರಂತೆ 5-10ನೇ ತರಗತಿವರೆಗೆ ಟ್ಯಾಬ್ ನೀಡುವುದು ಹಾಗೂ 10ನೇ ತರಗತಿಯಿಂದ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಸಂಬಂಧ ಕೌನ್ಸಿಲ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಹೀಗಾಗಿ, ಪಾಲಿಕೆ ಸದಸ್ಯರು ವಿಶೇಷ ಅನುದಾನದಡಿ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ಖರೀದಿಗೆ ಮುಂದಾಗಿದ್ದರು. ಆದರೆ, ಸರ್ಕಾರ ಅನುಮತಿ ನೀಡಿರುವ ಕಿಯೋನಿಕ್ಸ್ ಸಂಸ್ಥೆಯ ಮೂಲಕವೇ ಖರೀದಿಸಲು ಪಾಲಿಕೆ ಸದಸ್ಯರು ಮುಂದಾಗಿದ್ದರು. ಆದರೂ, ಈ ಸಂಸ್ಥೆಯಲ್ಲಿ ಲ್ಯಾಪ್‌ಟಾಪ್ ದರ ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿರುವ ಕಾರಣ ಇದಕ್ಕೆ ತಡೆ ನೀಡಲಾಗಿದೆ ಎಂದು ಹೆಸರೇಳಲಿಚ್ಛಿಸದ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.
ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಕೋವಿಡ್ ತುರ್ತು ಸಂದರ್ಭದಲ್ಲಿ ಮಕ್ಕಳಿಗೆ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ನೀಡುವುದು ತಪ್ಪಲ್ಲ. ಬಿಬಿಎಂಪಿ ಆಯುಕ್ತರು ಮೌಖೀಕವಾಗಿ ತಾತ್ಕಾಲಿಕವಾಗಿ ಮುಂದೂಡುವಂತೆ ಸೂಚನೆ ನೀಡಿದ್ದಾರೆ. ಕಿನೋನಿಕ್ಸ್ , ಜಂಪ್‌ಪೋರ್ಟ್ ಅಥವಾ ಮಾರುಕಟ್ಟೆ ದರ ನೋಡಿ, ಎಲ್ಲಿ ಕಡಿಮೆ ಇದೆಯೋ ಆ ನಿರ್ದಿಷ್ಟ ಸಂಸ್ಥೆಯಿಂದ ಖರೀದಿಸುವ ಬಗ್ಗೆ ಆಯುಕ್ತರು ಸಲಹೆ ನೀಡಿದ್ದಾರೆ. ಈ ಕುರಿತು ಶೀಘ್ರ ನಿರ್ಧಾರದ ಭರವಸೆ ನೀಡಿದ್ದಾರೆ.
ಒಂದು ಲ್ಯಾಪ್‌ಟಾಪ್‌ಗೆ 59,999! : ಸರ್ಕಾರ ಮಾನ್ಯ ಮಾಡಿರುವ ಕಿಯೋನಿಕ್ಸ್ ಸಂಸ್ಥೆಯಿಂದ ಯಾವುದೇ ವಸ್ತು ಖರೀದಿಸಬೇಕಾದರೆ ಮಾರುಕಟ್ಟೆ ದರ ಪರಿಶೀಲನೆ ಮಾಡಬೇಕು. ಮಾರುಕಟ್ಟೆಯ ದರಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಈ ಸಂಸ್ಥೆಯಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ಆಯುಕ್ತರು ವಿವರ ನೀಡಿದ್ದರು. ಆದರೆ, ಪಾಲಿಕೆ ಸದಸ್ಯರು ಒಂದು ಲ್ಯಾಪ್‌ಟಾಪ್‌ಗೆ 59,999 ರೂ. ನೀಡಲು ಮುಂದಾಗಿರುವುದು ಇದೀಗ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಲಹಂಕ ವಲಯದಲ್ಲಿ 88 ಲ್ಯಾಪ್‌ಟಾಪ್‌ಗ್ಳನ್ನು ನೀಡಲು ನಿರ್ಧರಿಸಲಾಗಿದ್ದು, ಒಂದು ಲ್ಯಾಪ್‌ಟಾಪ್‌ಗೆ 59,999 ರೂ. ನಿಗದಿ ಮಾಡಲಾಗಿದೆ. ಒಟ್ಟಾರೆ 52.80 ಕೋಟಿ ರೂ. ಬಿಲ್ ಸಿದ್ಧವಾಗಿರುವುದು ಬೆಳಕಿಗೆ ಬಂದಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ, ಮಾರುಕಟ್ಟೆ ದರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಆಯುಕ್ತರು ತಿಳಿಸಿದ್ದಾರೆ ಎನ್ನಲಾಗಿದೆ.
ಬಡವರಿಗೆ ನಾವು ಏನು ಉತ್ತರ ನೀಡೋದು? : “ಈಗಾಗಲೇ ಆಯುಕ್ತರು ಜಾಬ್‌ಕೋಡ್ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಆದರೆ, ಈಗ ಪಾಲಿಕೆ ಸದಸ್ಯರ ವಿಶೇಷ ಅನುದಾನದಲ್ಲಿ ಕಾಮಗಾರಿ ಮಾತ್ರ ಕೈಗೆತ್ತಿಕೊಳ್ಳಬಹುದು. ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ನೀಡಲು ಬರುವುದಿಲ್ಲ ಎಂದು ಆಯುಕ್ತರು ಹೇಳಿದ್ದಾರೆ. ವಿಶೇಷ ಅನುದಾನ ಅನ್ಯ ಕಾರ್ಯಕ್ಕೆ ಬಳಸಲು ಬರುವುದಿಲ್ಲ ಎಂದಾದರೆ, ಜಾಬ್‌ಕೋಡ್ ನೀಡುವ ಸಂದರ್ಭದಲ್ಲೇ ನಿರ್ದೇಶನ ನೀಡಬೇಕಾಗಿತ್ತು. ಈಗ ನಾವು ಫಲಾನುಭವಿಗಳನ್ನು ಗುರುತಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಬೇಡ ಎಂದರೆ, ನಾವು ಬಡವರಿಗೆ ಏನು ಉತ್ತರ ನೀಡಬೇಕು’ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಪ್ರಶ್ನಿಸಿದರು.
ಭ್ರಷ್ಟಾಚಾರ ಆರೋಪ ಕೇಳಿಬಂದರೆ ತನಿಖೆ ಮಾಡಲಿ, ಮಾರುಕಟ್ಟೆ ದರವನ್ನು ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ. ಶಾಸಕರು ನೀಡಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡುತ್ತಿರುವ ಅನುಮಾನ ಇದೆ.
– ಅಬ್ದುಲ್ ವಾಜಿದ್, ವಿರೋಧ ಪಕ್ಷದ ನಾಯಕ, ಬಿಬಿಎಂಪಿ
ಟ್ಯಾಬ್, ಲ್ಯಾಪ್‌ಟಾಪ್‌ಗ್ಳನ್ನು ಪಾಲಿಕೆ ಸದಸ್ಯರ ವಿಶೇಷ ಅನುದಾನದಲ್ಲಿ ಬಳಸಿಕೊಳ್ಳಲು ಕೌನ್ಸಿಲ್‌ನಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ಮೌಲ್ಯ ಮಾರುಕಟ್ಟೆಯಲ್ಲೆಷ್ಟಿದೆ ಎಂದು ಪರಿಶೀಲಿಸಲು, ಕಾಮಗಾರಿ ಅನುದಾನ ಬಳಸಬಹುದೇ ಹಾಗೂ ಈಗ ಖರೀದಿಸಲು ಮುಂದಾಗಿರುವ ಲ್ಯಾಪ್‌ಟಾಪ್ ದರ ಸಹ ಹೆಚ್ಚಾಗಿದೆ. ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ