Advertisement

ಯಾವುದೇ ಭಾಷೆಯನ್ನು ಯಾರ ಮೇಲೂ ಹೇರಲಾಗಿಲ್ಲ: ಕಸ್ತೂರಿರಂಗನ್‌ ಸ್ಪಷ್ಟನೆ

02:35 AM Jul 31, 2020 | Hari Prasad |

ಹೊಸದಿಲ್ಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಯಾರ ಮೇಲೂ ಯಾವುದೇ ಭಾಷೆಯನ್ನು ಹೇರಲಾಗಿಲ್ಲ.

Advertisement

ಇಂಥದ್ದೊಂದು ಸ್ಪಷ್ಟನೆ ನೀಡಿರುವುದು ಹೊಸ ಶಿಕ್ಷಣ ನೀತಿ ರಚನಾ ಸಮಿತಿಯ ಮುಖ್ಯಸ್ಥ ಸ್ಥಾನ ವಹಿಸಿದ್ದ ಕೆ.ಕಸ್ತೂರಿರಂಗನ್‌.

ಗುರುವಾರ ಎನ್‌ಇಪಿ ಕುರಿತು ‘ಇಂಡಿಯಾ ಟುಡೇ’ ಸುದ್ದಿವಾಹಿನಿ ಜತೆಗೆ ಮಾತನಾಡಿದ ಇಸ್ರೋದ ಮಾಜಿ ಅಧ್ಯಕ್ಷರೂ ಆಗಿರುವ ಕೆ. ಕಸ್ತೂರಿರಂಗನ್‌ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಯಾವುದೇ ಭಾಷೆಯನ್ನು ಹೇರಲಾಗಿಲ್ಲ. ಈಗಲೂ 2020ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಬಹು ಭಾಷಾ ನೀತಿಯೇ ಆಧಾರವಾಗಿದೆ. ಕಲಿಕೆಯ ಮಾಧ್ಯಮ ವಾಗಿ ಭಾಷೆಯನ್ನು ಆಯ್ಕೆ ಮಾಡಲು ಅವಕಾಶ ನೀಡಿದ್ದೇವೆ ಎಂದು ಕಸ್ತೂರಿ ರಂಗನ್‌ ಹೇಳಿದ್ದಾರೆ.

ಇದೇ ವೇಳೆ, ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದರಿಂದ ಏನಾದರೂ ಅನುಕೂಲ ಆಗುತ್ತದೆಯೇ ಎಂಬ ಪ್ರಶ್ನೆಗೆ ಅವರು, ಖಂಡಿತಾ ಅನುಕೂಲವಾಗುತ್ತದೆ. ಮಾತೃಭಾಷಾ ಶಿಕ್ಷಣದಿಂದ ಮಕ್ಕಳಲ್ಲಿ ಅರಿವಿನ ಸಾಮರ್ಥ್ಯ ಸುಧಾರಿಸುತ್ತದೆ ಎನ್ನುವುದು ನಮ್ಮ ಅಭಿಪ್ರಾಯ ಎಂದಿದ್ದಾರೆ.

Advertisement

34 ವರ್ಷಗಳ ಬಳಿಕ ಬುಧವಾರ ಸರಕಾರ ಅನುಮೋದಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, 8ನೇ ತರಗತಿವರೆಗೂ ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ರಾಜ್ಯ ಭಾಷೆಯಲ್ಲಿರಬೇಕು ಎಂದು ನಮೂದಿಸಲಾಗಿದೆ. ಜತೆಗೆ, ಶಾಲೆ, ಪ್ರೌಢಶಿಕ್ಷಣದ ವೇಳೆ ಐಚ್ಛಿಕ ಭಾಷೆಯನ್ನಾಗಿ ಸಂಸ್ಕೃತವನ್ನು ಕಲಿಯಲೂ ಅವಕಾಶ ಕಲ್ಪಿಸಲಾಗಿದೆ.

ಶಿಕ್ಷಣ ತಜ್ಞರ ಮಿಶ್ರ ಪ್ರತಿಕ್ರಿಯೆ: ಹೊಸ ಶಿಕ್ಷಣ ನೀತಿಯ ಕುರಿತು ಶಿಕ್ಷಣ ತಜ್ಞರು ಹಾಗೂ ಪರಿಣತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ದೀರ್ಘ‌ಕಾಲದಿಂದ ನನೆಗುದಿಗೆ ಬಿದ್ದಿದ್ದ ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದರೆ, ಇನ್ನು ಕೆಲವರು ಈ ನೀತಿಯ ಆಳದಲ್ಲಿ ನೈಜ ಆತಂಕ ಅಡಗಿದೆ ಎಂದಿದ್ದಾರೆ. ಎಲ್ಲ ಸಚಿವಾಲಯಗಳ ಭಾಗೀದಾರಿಕೆಯಲ್ಲಿ ರಾಷ್ಟ್ರೀಯ ಸಂಶೋಧನಾ ನಿಧಿ ಸ್ಥಾಪಿಸುವುದರಿಂದ ನಮ್ಮ ಸಂಶೋಧನೆಗಳು ಸಮಾಜದ ಮುಂದೆ ಬೆಳಕಿಗೆ ಬರುತ್ತವೆ. ಇದು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಿಕ್ಕಿರುವ ಸದವಕಾಶ ಎಂದು ಐಐಟಿ ದಿಲ್ಲಿ ನಿರ್ದೇಶಕರಾದ ರಾಮ್‌ಗೋಪಾಲ್‌ ರಾವ್‌ ಹೇಳಿದ್ದಾರೆ.

ಇದೇ ವೇಳೆ, 10+2 ವ್ಯವಸ್ಥೆಯ ಬದಲಾಗಿ 5+3+3+4 ವ್ಯವಸ್ಥೆಯು ಅಂತಾರಾಷ್ಟ್ರೀಯ ಶಿಕ್ಷಣದ ಗುಣಮಟ್ಟವನ್ನು ಹೋಲುತ್ತದೆ ಎಂದು ಐಐಎಂ ಸಂಬಾಲ್ಪುರ್‌ ನಿರ್ದೇಶಕ ಮಹಾದೇವ್‌ ಜೈಸ್ವಾಲ್‌ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಶಿವ ನಾಡಾರ್‌ ವಿವಿ ಉಪಕುಲಪತಿ ರೂಪಂಮಂಜರಿ ಘೋಷ್‌ ಮಾತನಾಡಿ, ಈ ನೀತಿಯು ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಯನ್ನು ತರುತ್ತದೆ ಎನ್ನುವುದು ನಿಜ. ಆದರೆ ಯಾವತ್ತೂ ಸಮಸ್ಯೆಯು ಆಳದಲ್ಲಿ ಬೇರೂರಿರುತ್ತದೆ. ಹಾಗಾಗಿ ದೇಶದ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಎಷ್ಟು ಪ್ರಾಮಾಣಿಕವಾಗಿ ಈ ನೀತಿ ಅನುಷ್ಠಾನಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ.

ದಿವ್ಯಾಂಗ ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬ ಅಂಶವು ಶಿಕ್ಷಕರ ತರಬೇತಿಯ ಅವಿಭಾಜ್ಯ ಅಂಗವಾಗಿರುತ್ತದೆ. ಹೀಗಾಗಿ ದಿವ್ಯಾಂಗ ವಿದ್ಯಾರ್ಥಿಗಳಿಗೆ ಆತಂಕವಿಲ್ಲದೆ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ.
– ತಾವರ್‌ಚಂದ್‌ ಗೆಹ್ಲೋಟ್‌, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next