ಯಾದಗಿರಿ: ಪ್ರಾಣ ಬೇಕಿದ್ರೆ ಬಿಡ್ತೇವೆ, ಆದ್ರೆ ಇಲ್ಲಿ ನಾವು ಔಷಧ ಪಾರ್ಕ್ ನಿರ್ಮಾಣ ಮಾಡಲು ಬಿಡಲ್ಲ ಇದು ಕಡೇಚೂರು, ದದ್ದಲ್, ಶೆಟ್ಟಿಹಳ್ಳಿ, ರಾಚನಳ್ಳಿ ಗ್ರಾಮದ ರೈತರ ಒಕ್ಕೊರಲಿನ ಕೂಗು. ಕೇಂದ್ರ-ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿತ ಕೈಗಾರಿಕಾ ಪ್ರದೇಶಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಲಬುರಗಿ ವಿಶೇಷ ಭೂಸ್ವಾನಾಧೀನಾಧಿಕಾರಿಗಳು ಮತ್ತೆ 3269 ಎಕರೆ ಭೂಮಿ ಭೂಸ್ವಾಧೀನ ಮಾಡಿಕೊಳ್ಳಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ ಎನ್ನುವ ಸುದ್ದಿ ತಿಳಿದ ಅಲ್ಲಿನ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರವಿವಾರ ಕಡೇಚೂರು, ದದ್ದಲ್, ಶೆಟ್ಟಿಹಳ್ಳಿ, ರಾಚನಳ್ಳಿ ಗ್ರಾಮಸ್ಥರು ಒಗ್ಗಟ್ಟಾಗಿ ರಾಚನಹಳ್ಳಿ ಕ್ರಾಸ್ ಬಳಿ ಪ್ರತಿಭಟನಾ ಸಭೆ ಹಮ್ಮಿಕೊಂಡು ಯಾವುದೇ ಕಾರಣಕ್ಕೆ ಸರ್ಕಾರ ಭೂಮಿ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಘೋಷಣೆ ಮಾಡಿದರು. ಈ ಮೊದಲು ಕಡೇಚೂರು ಮತ್ತು ಬಾಡಿಯಾಳ ಪ್ರದೇಶದಲ್ಲಿ ತೆಗೆದುಕೊಂಡ ಭೂಮಿ ಇನ್ನೂ ಅಭಿವೃದ್ಧಿಪಡಿಸಿಲ್ಲ. ಬದಲಿಗೆ ಅಲ್ಲಿ ಯಾವುದೇ ಕೈಗಾರಿಕೆ ಬಾರದ ಹಿನ್ನೆಲೆ ನಾವು ಭೂಮಿ ಹಾಗೂ ಕೆಲಸವಿಲ್ಲದೇ ಮಹಾನಗರಗಳಿಗೆ ಗುಳೆ ಹೋಗುವ ಸ್ಥಿತಿಯಲ್ಲಿದ್ದೇವೆ.
ಸರ್ಕಾರ ಈಗ ಮತ್ತೆ ಭೂಮಿ ವಶಪಡಿಸಿಕೊಳ್ಳಲು ಹೊರಟಿರುವುದು ನಮ್ಮ ಬದುಕು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದರು.
ಆಕ್ರೋಶಕ್ಕೆ ಕಾರಣ ಏನು?: ಈ ಹಿಂದೆ ಕಡೇಚೂರು, ಬಾಡಿಯಾಳ, ಮತ್ತು ಶಟ್ಟಿಹಳ್ಳಿ ಗ್ರಾಮಗಳಿಂದ 3232.22 ಎಕರೆ ಭೂ ಪ್ರದೇಶ ಪಡೆದು ದಶಕ ಕಳೆದರೂ ಯಾರೊಬ್ಬರಿಗೆ ಉದ್ಯೋಗ ಕಲ್ಪಿಸಿಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರು ಗುಳೆ ಹೋಗುತ್ತಿದ್ದಾರೆ. ಸರ್ಕಾರ ಇದೀಗ ಹೆಚ್ಚುವರಿಯಾಗಿ ಕಡೇಚೂರು, ಶೆಟ್ಟಿಹಳ್ಳಿ, ದದ್ದಲ್ ಹಾಗೂ ರಾಚನಹಳ್ಳಿ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶ/ ಹೈದರಾಬಾದ್- ಬೆಂಗಳೂರು ಕೈಗಾರಿಕಾಭಿವೃದ್ಧಿ ಕಾರಿಡಾರ್ ಯೋಜನೆಗಳಿಗಾಗಿ 3269.29 ಎಕರೆ ಜಮೀನು ಪಡೆಯಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿಯ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸೆ.23ರಂದು ಯಾದಗಿರಿ ತಹಶೀಲ್ದಾರ್‌ಗೆ ಬರೆದ ಪತ್ರದಲ್ಲಿ ಸೂಚಿಸಿದ್ದು ಕೆಐಎಡಿ ಕಾಯ್ದೆ 1966ರ ಕಲಂ 289/2ರ ಅಡಿಯಲ್ಲಿ ಸಂಬಂಧಿಸಿದ ಭೂ ಮಾಲೀಕರಿಗೆ ನೋಟಿಸ್ ವಾರದೊಳಗೆ ನೀಡುವಂತೆ ತಿಳಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ನಮ್ಮ ಜಮೀನನ್ನು ಕೇವಲ 6 ಲಕ್ಷ ರೂ.ಗೆ ಎಕರೆಯಂತೆ ಖರೀದಿಸಿದ್ದು, ಈಗ ನಾವೇ ಜಮೀನು ಖರೀದಿ ಮಾಡಬೇಕಾದರೆ ಕನಿಷ್ಟವೆಂದರೂ 30 ಲಕ್ಷ ರೂ. ಬೇಕು. ಇದು ಯಾವ ನ್ಯಾಯ?. ನಾವು ಭೂಮಿ ಕಳೆದುಕೊಂಡರೂ ಇಲ್ಲಿಯವರೆಗೆ ಅಲ್ಲಿ ಯಾವುದೇ ಕಂಪನಿಗಳು ಸ್ಥಾಪಿತವಾಗಿಲ್ಲ. ಬದಲು ನಮ್ಮ ಮಕ್ಕಳಿಗೆ ಉದ್ಯೋಗವೂ ಸಿಕ್ಕಿಲ್ಲ. ಆದರೆ ಅಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಖಾನೆ ಸ್ಥಾಪಿಸುತ್ತೇವೆಂದು ನಂಬಿಸಿ ವಶಪಡಿಸಿಕೊಂಡ ಭೂಮಿಯಲ್ಲಿ ಕೇವಲ ಪರಿಸರ ನಾಶದಂತಹ ವಾತಾವರಣ ಕಲುಷಿತಗೊಳ್ಳುವಂತಹ ಕೆಮಿಕಲ್ ಕಾರ್ಖಾನೆ ಸ್ಥಾಪಿಸಲು ಸರ್ಕಾರ ಮುಂದಾಗುತ್ತಿದೆ. ಜೊತೆಗೆ ಹೆಚ್ಚುವರಿಯಾಗಿ ಪಡೆದ ಭೂಮಿಯಲ್ಲಿ ಔಷಧ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದು ಜೀವದೊಂದಿಗೆ ಸರ್ಕಾರಗಳು ಚೆಲ್ಲಾಟವಾಡುತ್ತಿವೆ ಎಂಬುದು ರೈತರ ಆರೋಪ
ಸರ್ಕಾರ ಭೂಮಿ ವಶಪಡಿಸಿಕೊಳ್ಳಲು ತಯಾರಿ ನಡೆಸಿದ್ದು, ಕೆಐಎಡಿಬಿಗೆ ಸೂಚನೆ ನೀಡಿದ್ದು, 21(1) ಫಾರಂ ತಯಾರಾಗುತ್ತಿರುವ ಸುದ್ದಿ ತಿಳಿದಿದ್ದೇವೆ. ಈ ಹಿಂದೆ 2011ರಲ್ಲಿ ಕಡೇಚೂರು ಪ್ರದೇಶದಲ್ಲಿ ವಶಪಡಿಸಿಕೊಂಡ 3200 ಎಕರೆ ಭೂ ಪ್ರದೇಶದಲ್ಲಿ ಇಲ್ಲಿಯವರೆಗೆ ಶೇ.20 ಕೂಡ ಅಭಿವೃದ್ಧಿ ಮಾಡಿಲ್ಲ. ನಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ಭೂಮಿ ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ದಶಕ ಕಳೆದರೂ ಒಬ್ಬ ರೈತರ ಮಕ್ಕಳಿಗೆ ಉದ್ಯೋಗ ಹಾಗೂ ರೈತರಿಗೆ ಪರಿಹಾರವೂ ಸ್ಪಷ್ಟವಾಗಿ ಸಿಕ್ಕಿಲ್ಲ. ವ್ಯವಹಾರ ಮಾಡಿಕೊಂಡ ಜನಪ್ರತಿನಿಧಿಗಳು ತಮ್ಮ ಕೆಲಸ ಮುಗಿಸಿ ಇಲ್ಲಿಂದ ಕಾಲ್ಕಿತ್ತರು. ಕಡೇಚೂರು ಪ್ರದೇಶದಲ್ಲಿ ಕೇವಲ ಒಂದು ಕೆಮಿಕಲ್ ಕಾರ್ಖಾನೆ ಪ್ರಾರಂಭಿಸಿದ ಮೇಲೆ ವಾತಾವರಣ ಕಲುಷಿತಗೊಂಡಿದೆ. ಆ ಕಾರ್ಖಾನೆ ವಿಷಗಾಳಿ ಜೊತೆಗೆ ಹೊರಬಿಟ್ಟ ಕೆಮಿಕಲ್ ತ್ಯಾಜ್ಯದಿಂದ ಎಷ್ಟೋ ದನ-ಕರು, ಕುರಿ ಮರಿಗಳು ಮೃತಪಟ್ಟಿವೆ.
ನಿರಂಜರೆಡ್ಡಿ ಪಾಟೀಲ, ರೈತ ಮುಖಂಡ, ಶೆಟ್ಟಿಹಳ್ಳಿ
ಉದ್ಯೋಗ ಕೊಡುವ ಕಾರ್ಖಾನೆ ಇಲ್ಲಿ ಪ್ರಾರಂಭಿಸುವ ಬದಲು ವಿಷಗಾಳಿ ಕಕ್ಕುವ ಔಷಧ ಪಾರ್ಕ್‌ಗಳಂತಹ ಯೋಜನೆ ಇಲ್ಲೇ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ ರೈತರು ಮುಖ್ಯಮಂತ್ರಿಗಳು ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿ ಔಷಧ ಪಾರ್ಕ್ ಸ್ಥಾಪಿಸಲಿ. ನಮ್ಮ ಉದ್ಧಾರವೇ ನಿಮ್ಮ ಗುರಿಯಾಗಿದ್ದರೆ ಜನರಿಗೆ ಉದ್ಯೋಗ ನೀಡುವ ಕಾರ್ಖಾನೆ ಸ್ಥಾಪಿಸಲು ಮೊದಲು ವಶಪಡಿಸಿಕೊಂಡ ಭೂಮಿಯಲ್ಲಿ ಸ್ಥಾಪಿಸಿ. ಅಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಮತ್ತೆ ಭೂಸ್ವಾ ಧೀನಕ್ಕೆ ತಯಾರಾದರೆ ಮುಂದೆ ಗಂಭೀರ ಪರಿಣಾಮ ಸರ್ಕಾರ ಮತ್ತು ಜನಪ್ರತಿನಿಧಿಗಳು ಎದುರಿಸಬೇಕಾಗುತ್ತದೆ.
ದೇವಪ್ಪಗೌಡ ಗುತ್ತೇದಾರ, ರೈತ ಮುಖಂಡ, ರಾಚನಹಳ್ಳಿ
ಮಹೇಶ ಕಲಾಲ