ಭಾಲ್ಕಿ: ಪಟ್ಟಣದಲ್ಲಿ ಕ್ರೈಸ್ತ ಸಮಾಜದವರನ್ನು ಹೊರತುಪಡಿಸಿ, ಪ್ರತಿಯೊಂದು ಜಾತಿ ಜನಾಂಗದವರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಇದೆ. ಆದರೆ ಈ ಸ್ಮಶಾನ ಭೂಮಿಗಳ ಸ್ವಚ್ಛತೆಯ ಬಗ್ಗೆ ಪ್ರತಿ ಸಲವೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ.
ಕೆಲವು ಸಮುದಾಯದವರು ಪ್ರತಿವರ್ಷ ತಾವು ಕಟ್ಟಿರುವ ಸಂಘಟನೆಗಳ ವತಿಯಿಂದ ತಮ್ಮ, ತಮ್ಮ ಸಮುದಾಯದ ಸ್ಮಶಾನ ಭೂಮಿಗಳ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಪ್ರಜ್ಞಾವಂತ ಸಂಘಟನೆ ಇಲ್ಲದ ಸಮುದಾಯದವರು ಅನಿವಾರ್ಯವಾಗಿ ಮುಳ್ಳು ಕಂಟಿ, ಕೆಸರು ಕೊಚ್ಚೆಯಲ್ಲಿಯೇ ಅಂತ್ಯ ಸಂಸ್ಕಾರ ನಡೆಸುತ್ತಿದ್ದಾರೆ.
ಪಟ್ಟಣದಲ್ಲಿರುವ ಮರಾಠಾ ಸಮುದಾಯ, ಲಿಂಗಾಯತ ಸಮುದಾಯ, ದಲಿತ ಸಮುದಾಯ, ಮುಸ್ಲಿಂ ಸಮುದಾಯಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ಮಶಾನ ಭೂಮಿ ಇದೆ. ಮರಾಠಾ ಮತ್ತು ಲಿಂಗಾಯತ ಸಮುದಾಯದವರು ತಮ್ಮ ಸಂಘಟನೆಗಳ ಮೂಲಕ ಸ್ಮಶಾನ ಭೂಮಿ ಖರೀದಿಸಿ ಅದರ ಸ್ವತ್ಛತೆಯ ಕಾರ್ಯ ನಡೆಸುತ್ತಿದ್ದಾರೆ. ಆದರೆ ಸರ್ಕಾರದಿಂದ ದೊರೆತ ದಲಿತ ಮತ್ತು ಮುಸ್ಲಿಂ ಸಮುದಾಯದ ಜನರ ಸ್ಮಶಾನ ಭೂಮಿಯ ಸ್ವತ್ಛತೆ ಮರಿಚೀಕೆಯಾಗಿದೆ. ಸ್ಮಶಾನ ಭೂಮಿಯ ಕಡೆ ಮುಖ ಮಾಡಲು ಹೆದರುವ ಜನರು ಅಲ್ಲಿ ಕೂಲಿ ಕೊಟ್ಟರೂ ಸ್ವಚ್ಚತೆಗೆ ಮುಂದಾಗುತ್ತಿಲ್ಲ ಎನ್ನುವುದು ಪುರಸಭೆ ಅಧಿ ಕಾರಿಗಳ ವಾದ. ಆದರೆ ಪ್ರತಿವರ್ಷ ಮರಾಠಾ ಸಮುದಾಯದ ಮರಾಠಾ ಸೇವಾ ಸಂಘ ಮತ್ತು ಸಂಭಾಜಿ ಬ್ರಿಗೇಡ್ ಸಂಘಟನೆಯವರು ತಮ್ಮ ಸಮಾಜಕ್ಕಾಗಿ ತಾವು ಖರೀದಿಸಿದ ಸ್ಮಶಾನ ಭೂಮಿ ಸ್ವಚ್ಛಗೊಳಿಸುವುದಲ್ಲದೆ ಅಲ್ಲಿ ಬೇಸಿಗೆಯಲ್ಲಿ ನೆರಳು ಇರಲೆಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮರ ನೆಡುವ ಕಾರ್ಯಕೂಡ ಮಾಡಿದ್ದಾರೆ. ಆದರೆ ಸ್ಮಶಾನಕ್ಕೆ ಹೊಗಲು ಸೂಕ್ತ ರಸ್ತೆ ಇಲ್ಲ ಮತ್ತು ವಿದ್ಯುತ್ ಸಂಪರ್ಕವಿಲ್ಲ. ಪುರಸಭೆಯವರು ಈ ಕಾರ್ಯವನ್ನು ಆದಷ್ಟು ಬೇಗ ಮಾಡಬೇಕು ಎನ್ನುವುದು ಆ ಸಮುದಾಯದ ಜನರ ಆಶೆಯವಾಗಿದೆ.
ಪಟ್ಟಣದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಲಿಂಗಾಯತ ಸಮಾಜಕ್ಕಾಗಿ ಖರೀದಿಸಿದ ಸ್ಮಶಾನ ಭೂಮಿಯಲ್ಲಿ ಕೆಲವು ದಿನಗಳಿಂದ ಸ್ವತ್ಛತೆ ಕಾರ್ಯ ನಡೆಯುತ್ತಿಲ್ಲ. ಅಲ್ಲದೇ ರಸ್ತೆ ವ್ಯವಸ್ತೆ ಕೂಡ ಸರಿಯಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ಮರಣ ಹೊಂದಿದ ಲಿಂಗಾಯತ ಸಮುದಾಯದವರ ಶವ ಸಂಸ್ಕಾರ ಮಾಡಬೇಕಾದರೆ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಿಂಗಾಯತ ಮತ್ತು ಮರಾಠಾ ಸಮುದಾಯದ ರುದ್ರಭೂಮಿಯಲ್ಲಿಯೇ ಬ್ರಾಹ್ಮಣ ಸೇರಿದಂತೆ ಹಿಂದೂ ಧರ್ಮದ ಇತರೆ ಜಾತಿಯವರ ಶವ ಸಂಸ್ಕಾರ ನಡೆಯುತ್ತದೆ. ಆದರೆ ಸರ್ಕಾರದಿಂದ ನೀಡಲಾದ ದಲಿತ ಮತ್ತು ಮುಸ್ಲಿಂ ಸಮುದಾಯದ ರುದ್ರಭೂಮಿಯಲ್ಲಿ ಆ ಜಾತಿ, ಧರ್ಮದ ಜನರ ಶವ ಸಂಸ್ಕಾರ ಮಾತ್ರ ನಡೆಯುತ್ತಲಿದೆ.
ಪಟ್ಟಣದಲ್ಲಿ ಕ್ರೈಸ್ತ ಸಮುದಾಯದವರಿಗೆ ಸ್ಮಶಾನ ಭೂಮಿ ಇಲ್ಲದ ಕಾರಣ, ಈ ಸಮುದಾಯದ ಜನರು ಸಾಕಷ್ಟು ಸಲ ಸ್ಮಶಾನ ಭೂಮಿಗಾಗಿ ಹೋರಾಟ ನಡೆಸಿದ್ದಾರೆ. ಈ ಕುರಿತು ತಹಶೀಲ್ದಾರ್ ಗಮನಕ್ಕೆ ತಂದರೆ, ಪಟ್ಟಣದಲ್ಲಿ ಇದಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಅವರಿಗೆ ಸ್ಮಶಾನ ಭೂಮಿ ನೀಡಲಾಗಿಲ್ಲ. ಯಾವುದಾದರೂ ಸ್ಥಳ ದೊರೆತರೆ ಅವರ ಬೇಡಿಕೆ ಪೂರೈಸಲಾಗುವುದು ಎನ್ನುತ್ತಾರೆ ತಾಲೂಕು ದಂಡಾಧಿಕಾರಿಗಳು.
ಇನ್ನು ಗ್ರಾಮೀಣ ಭಾಗದ ಹಲವಾರು ಗ್ರಾಮಗಳಲ್ಲಿ ಅಲ್ಪ ಸಂಖ್ಯಾತರಾದ ದಲಿತರು ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಸ್ಮಶಾನ ಭೂಮಿಯಿದೆ. ಆದರೆ ಬಹುಸಂಖ್ಯಾತರಾದ ಹಿಂದೂಗಳಿಗೆ ಪ್ರತ್ಯೇಕ ಸ್ಮಶಾನ ಸ್ಥಳವಿಲ್ಲ. ಅವರು ತಮ್ಮ ತಮ್ಮ ಹೊಲದಲ್ಲಿಯೇ ಶವ ಸಂಸ್ಕಾರ ನಡೆಸುತ್ತಾರೆ. ಯಾರ ಹತ್ತಿರ ಹೊಲ ಇಲ್ಲವೋ ಅವರು ಶವ ಸಂಸ್ಕಾರ ಮಾಡಲು ಸಮಸ್ಯೆ ಎದುರಿಸ ಸಂಕಟ ಪಡುತ್ತಾರೆ. ಇರುವಾಗಲೂ ಬದುಕಿಗಾಗಿ ಹೋರಾಡಿದ ನಾವು ಸತ್ತ ಮೇಲೆ ನಮ್ಮ ಅಸ್ತಿಯನ್ನು ಹೊರಲೂ ಈ ಭೂತಾಯಿ ಸಿದ್ದಳಿಲ್ಲವಲ್ಲ ಎನ್ನುವ ಕೊರಗು ಅವರಿಗೆ ಕಾಡುತ್ತಲಿದೆ. ಸರ್ಕಾರ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಪ್ರತಿಯೊಬ್ಬ ನಾಗರಿಕರಿಗೂ ಮೃತಪಟ್ಟ ಮೇಲೆ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಕಲ್ಪಿಸಿಕೊಡುವುದೋ ಕಾಲವೇ ನಿರ್ಣಯಿಸಬೇಕು.
-ಜಯರಾಜ ದಾಬಶೆಟ್ಟಿ