Advertisement

ಕಾರ್ಮಿಕ ಕಾನೂನು ತಿದ್ದುಪಡಿ ಬೇಡ

01:45 PM May 19, 2020 | mahesh |

ಬಳ್ಳಾರಿ: ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಮುಂದಾಗುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಕೌಲ್‌ಬಜಾರ್‌ನಲ್ಲಿನ ಕಾರ್ಮಿಕ ಇಲಾಖೆ ಕಚೇರಿ ಎದುರು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಸರ್ಕಾರ ಮತ್ತು ಮಾಲೀಕರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರವು ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತರಲು ಮುಂದಾಗುತ್ತಿದೆ. ಕಾರ್ಖಾನೆಗಳ ಕಾಯ್ದೆ (ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಲು), ಕೈಗಾರಿಕೆ ವಿವಾದ ಕಾಯ್ದೆ (ಚಾಪ್ಟರ್‌ 5ಬಿಗೆ ತಿದ್ದುಪಡಿ) ಮತ್ತು ಗುತ್ತಿಗೆ ಕಾರ್ಮಿಕರ ಕಾಯ್ದೆ (ಕಾಯಂ ಕೆಲಸಗಳನ್ನು ನಾಶಮಾಡಿ ಗುತ್ತಿಗೀಕರಣ ಹೆಚ್ಚಿಸಲು)ಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದೆ.

ಈಗಾಗಲೇ ಉತ್ತರ ಪ್ರದೇಶ, ಮಧ್ಯಪದೇಶ ಮತ್ತು ಗುಜರಾತ್‌ ರಾಜ್ಯ ಸರ್ಕಾರಗಳು ಬಂಡವಾಳ ಹೂಡಿಕೆಯನ್ನು ಅಕರ್ಷಿಸುವ ನೆಪದಲ್ಲಿ ಕಾರ್ಮಿಕ ಕಾನೂನುಗಳ ಅನುಷ್ಠಾನಕ್ಕೆ ರಜೆ ಘೋಷಿಸುವಂಥ ಪ್ರತಿಗಾಮಿ ಕ್ರಮಕ್ಕೆ ಮುಂದಾಗಿದೆ. ಇಂಥ ಪ್ರಗತಿ-ವಿರೋಧಿ ಕ್ರಮವು ಸಮಾಜವನ್ನು ಮಧ್ಯಯುಗಕ್ಕೆ ಕೊಂಡೊಯ್ಯಲಿದೆ. ಹಲವು ಹೋರಾಟಗಳ ಮೂಲಕ ಕಾರ್ಮಿಕ ವರ್ಗ ಗಳಿಸಿದ 8 ಗಂಟೆಗಳ ಕೆಲಸದ ಅವಧಿ ಕಣ್ಮರೆಯಾಗಲಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರಗಳು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದರೆ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ ಕಾಯ್ದೆ ಸೌಲಭ್ಯವೂ ಕಾರ್ಮಿಕರಿಗೆ ಸಿಗುವುದಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ಸಹ ಇದೇ ಹಾದಿಯಲ್ಲಿ
ಸಾಗಿ ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆಗಳ ಕಾರ್ಮಿಕ-ವಿರೋಧಿ ತಿದ್ದುಪಡಿಗೆ ಮುಂದಾಗಿದೆ. ಇಂಥ ಲಾಕ್‌ ಡೌನ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಬಲಪಡಿಸಲು ಕ್ರಮವಹಿಸಬೇಕಾಗಿದೆ. ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ. 30 ರಷ್ಟು ಮೀರಿದ್ದು, 12 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕೆಲಸದ ಅವಧಿಯನ್ನು ಇನ್ನಷ್ಟು ಹೆಚ್ಚಿಸುವುದರಿಂದ ನಿರುದ್ಯೋಗ ಪ್ರಮಾಣ ಇನ್ನಷ್ಟು ಹೆಚ್ಚಿಸಲು ಅನುಕೂಲವಾಗಲಿದೆ. ಹಾಗಾಗಿ ಕೂಡಲೇ ಉದ್ದೇಶಿತ ಕಾರ್ಮಿಕ ವಿರೋಧಿ  ತಿದ್ದುಪಡಿಗಳನ್ನು ಕೈಬಿಟ್ಟು, ಕಾರ್ಮಿಕ ಪರ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು. ಎಲ್ಲ ವಲಯಗಳ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ
ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್‌ ಘೋಷಿಸಬೇಕು. ಕೋವಿಡ್‌-19 ವಿರುದ್ಧ ಶ್ರಮಿಸುತ್ತಿರುವ ಫ್ರಂಟ್‌ಲೈನ್‌ ಸಿಬ್ಬಂದಿಗೆ ಪಿಪಿಇ ಕಿಟ್‌ಗಳನ್ನು ವಿತರಿಸಬೇಕು. ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಪ್ರೋತ್ಸಾಹಧನ ನೀಡಬೇಕು. ಜತೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ನಂತರ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್‌, ಎಐಟಿಯುಸಿ ಕಾರ್ಯದರ್ಶಿ ಎ.ಆರ್‌. ಎಂ. ಇಸ್ಮಾಯಿಲ್‌, ಐಎನ್‌ಟಿಯುಸಿ ಅಧ್ಯಕ್ಷ ಎಂ.ಜೈಕುಮಾರ್‌ ನಾಯ್ಡು,
ಸಿಐಟಿಯು ಕಾರ್ಯದರ್ಶಿ ಜೆ. ಸತ್ಯಬಾಬು, ಎಐಟಿಯುಸಿ ಅಧ್ಯಕ್ಷ ಎಚ್‌ .ಎ.ಆದಿಮೂರ್ತಿ, ಎಐಯುಟಿಯುಸಿ ಅಧ್ಯಕ್ಷ ಸೋಮಶೇಖರಗೌಡ, ಐಎನ್‌ ಟಿಯುಸಿ ಕಾರ್ಯದರ್ಶಿ ಕೆ.ತಾಯಪ್ಪ,
ಎ.ದೇವದಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next