ನವದೆಹಲಿ: ಲಸಿಕೆಗಾಗಿ ಕೋವಿನ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡವರ ಆಧಾರ್, ಪಾಸ್‌ಪೋರ್ಟ್, ಫೋನ್ ನಂಬರ್ ಸೇರಿದಂತೆ ವೈಯಕ್ತಿಕ ಮಾಹಿತಿಗಳು ಆನ್‌ಲೈನ್ ಮೆಸೆಂಜರ್ ಆ್ಯಪ್ ಟೆಲಿಗ್ರಾಂನಲ್ಲಿ ಸೋರಿಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸೋಮವಾರ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಕೋವಿನ್ ಪೋರ್ಟಲ್ ಅತ್ಯಂತ ಸುರಕ್ಷಿತವಾಗಿದ್ದು, ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪವು ಆಧಾರರಹಿತವಾಗಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಪೋರ್ಟಲ್‌ನಲ್ಲಿರುವ ಪ್ರತಿಯೊಂದು ದತ್ತಾಂಶವೂ ಸುರಕ್ಷಿತವಾಗಿದೆ. ಕೇವಲ ಒಟಿಪಿ ದೃಢೀಕರಣವಿದ್ದರಷ್ಟೇ ದತ್ತಾಂಶಗಳು ಲಭ್ಯವಿರಲಿದೆ ಎಂದೂ ಸಚಿವಾಲಯ ಹೇಳಿದೆ.
ಪ್ರಮುಖ ನಾಯಕರ ಮಾಹಿತಿ ಸೋರಿಕೆ?
ಟೆಲಿಗ್ರಾಂ ಆ್ಯಪ್‌ನಲ್ಲಿ ಸಂಸದರಾದ ಡೆರೆಕ್ ಒಬ್ರಿಯಾನ್, ಸಂಜಯ್ ರಾವತ್, ಮಾಜಿ ಸಚಿವ ಚಿದಂಬರಂ, ಬಿಜೆಪಿ ನಾಯಕರಾದ ಅಣ್ಣಾಮಲೈ, ಮೀನಾಕ್ಷಿ ಲೇಖೀ, ಕೇರಳ ಸಚಿವೆ ವೀಣಾ ಜಾರ್ಜ್ ಸೇರಿದಂತೆ ಹಲವು ಹೈಪ್ರೊಫೈಲ್ ವ್ಯಕ್ತಿಗಳ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. ವ್ಯಕ್ತಿಗಳ ಹೆಸರು, ಲಸಿಕೆ ಪಡೆಯಲು ಬಳಸಿದ ಸರ್ಕಾರಿ ಗುರುತಿನ ಚೀಟಿ ಸಂಖ್ಯೆ, ಲಸಿಕೆ ಪಡೆದಿದ್ದು ಎಲ್ಲಿ ಎಂಬಿತ್ಯಾದಿ ವಿವರಗಳು ಅದರಲ್ಲಿದ್ದವು.
100 ಕೋಟಿ ಜನರ ಮಾಹಿತಿ?
ಕೊರೊನಾ ಲಸಿಕೆಗಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ ಸುಮಾರು 100 ಕೋಟಿ ಮಂದಿಯ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ವ್ಯಕ್ತಿಗಳ ವೈಯಕ್ತಿಕ ವಿವರಗಳನ್ನು ತೋರಿಸುತ್ತಿದ್ದ ಟೆಲಿಗ್ರಾಂ ಅಕೌಂಟ್ ಸೋಮವಾರ ಮುಂಜಾನೆಯ ನಂತರ ನಿಷ್ಕ್ರಿಯಗೊಂಡಿದೆ. 2021ರಲ್ಲೂ ಕೋವಿನ್ ದತ್ತಾಂಶ ಸೋರಿಕೆಯ ಆರೋಪ ಕೇಳಿಬಂದಿತ್ತು. ಆಗಲೂ ಕೇಂದ್ರ ಸರ್ಕಾರವು ಈ ಆರೋಪವನ್ನು ಅಲ್ಲಗಳೆದಿತ್ತು.